Friday, February 28, 2025
Homeರಾಜ್ಯಮುಂದಿನ 10-15 ವರ್ಷಗಳಲ್ಲಿ ಶಿಕ್ಷಕರ ಜಾಗದಲ್ಲಿ AI ಬೋಧನೆ ಸಾಧ್ಯತೆ : ಡಿಕೆಶಿ

ಮುಂದಿನ 10-15 ವರ್ಷಗಳಲ್ಲಿ ಶಿಕ್ಷಕರ ಜಾಗದಲ್ಲಿ AI ಬೋಧನೆ ಸಾಧ್ಯತೆ : ಡಿಕೆಶಿ

AI teaching likely to replace teachers in next 10-15 years: DK Shivakumar

ಬೆಂಗಳೂರು,ಫೆ.28– ವಿಜ್ಞಾನ-ತಂತ್ರಜ್ಞಾನ ಬಹಳಷ್ಟು ಮುಂದುವರೆದಿದ್ದು, ಮುಂದಿನ 10-15 ವರ್ಷಗಳಲ್ಲಿ ತರಗತಿಗಳಿಗೆ ಶಿಕ್ಷಕರ ಅಗತ್ಯವೇ ಇಲ್ಲದಂತೆ ಕೃತಕ ಬುದ್ಧಿಮತ್ತೆಯ ಬೋಧನೆ ಜಾರಿಯಾಗುವ ಸಾಧ್ಯತೆಯಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ನೆಹರೂ ತಾರಾಲಯ ನೂತನವಾಗಿ ನಿರ್ಮಿಸಿರುವ ಪ್ರೊಫೆಸರ್ ಯು.ಆರ್.ರಾವ್ ಭವನ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ತಾವು ಸೌದಿ ಅರೇಬಿಯಾಕ್ಕೆ ತೆರಳಿದ್ದು ಅಲ್ಲಿ ಉಪನ್ಯಾಸಕರೊಬ್ಬರ ಜೊತೆ ಮಾತನಾಡುವಾಗ ಮುಂದಿನ 15 ವರ್ಷಗಳಲ್ಲಿ ಮಾನವ ಶಿಕ್ಷಕರ ಅಗತ್ಯವೇ ಇರುವುದಿಲ್ಲ. ಎಲ್ಲವೂ ತಂತ್ರಜ್ಞಾನ ಆಧರಿತ ಎಐ ಅನುಸಾರ ನಡೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಮಾಹಿತಿ ನೀಡುವಂತೆ ನಾನು ಅಧಿಕಾರಿಗಳನ್ನು ಕೇಳಿದ್ದೆ. ನನ್ನ ಮಕ್ಕಳು ನಿಮಗೆ ಆಪ್ತ ಸಹಾಯಕರು, ಅಧಿಕಾರಿಗಳಲ್ಲ, ಏಕೆ ಬೇಕು. ಚಾರ್ಟ್ ಜಿಬಿಟಿ ಬಳಸಿ ಎಂದು ಸಲಹೆ ನೀಡಿದರು. ಅದರಲ್ಲಿ ಮಾಹಿತಿ ಕೇಳುತ್ತಿದ್ದಂತೆ ನಿಮಷದ ಒಳಗೆ ಎಲ್ಲವೂ ದೊರೆತುಹೋಯಿತು. ಇಂದಿನ ತಂತ್ರಜ್ಞಾನ ಇಷ್ಟರ ಮಟ್ಟಿಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ನಮ್ಮ ಕಾಲದಲ್ಲಿ ಪೋನ್ ಇರಲಿಲ್ಲ. ಲೆಕ್ಕ ಮಾಡಲು ಕ್ಯಾಲ್ಕುಲೇಟರ್ ಪಡೆಯಲು ಸ್ಪರ್ಧೆ ಮಾಡಬೇಕಿತ್ತು. ಈಗ ಕಂಪ್ಯೂಟರ್, ಮೊಬೈಲ್‌ ನಂತಹ ಹಲವಾರು ಸಲಕರಣೆಗಳು ವಿದ್ಯಾರ್ಥಿಗಳ ಕೈಯಲ್ಲಿದೆ. ನಮ್ಮ ತಲೆಮಾರಿಗೆ ವಯಸ್ಸಾಗಿದೆ. ಈಗಿನ ತಲೆಮಾರಿಗೆ ಸಾಕಷ್ಟು ಸಮಯವಿದೆ. ಗ್ರಾಮೀಣ ಪ್ರದೇಶದವರು ಎಂಬ ಕೀಳರಿಮೆ ಬೆಳೆಸಿಕೊಳ್ಳದೆ ಆತ್ಮವಿಶ್ವಾಸದಿಂದ ಗುರಿಯತ್ತ ಸಾಗಿ ಎಂದು ಸಲಹೆ ನೀಡಿದರು.

ಪ್ರೊಫೆಸರ್ ಯು.ಆರ್.ರಾವ್, ಸಿ.ವಿ.ರಾಮನ್, ಕಿರಣ್ ಕುಮಾ‌ರ್ ರಂತಹ ವಿಜ್ಞಾನಿಗಳು ಈ ನಾಡಿನವರು. ಕರ್ನಾಟಕ ಪ್ರತಿಭೆಗಳ ತವರೂರು. ಅದಕ್ಕಾಗಿಯೇ ಪ್ರಧಾನಿ ಜವಾಹರಲಾಲ್ ನೆಹರೂ ಬೆಂಗಳೂರಿನಲ್ಲಿ ಎಚ್ ಎಎಲ್, ಬಿಎಚ್‌ ಇಎಲ್, ಐಟಿಐ, ಎಚ್.ಎಂಟಿ ಸೇರಿದಂತೆ ಹಲವಾರು ಉದ್ಯಮಗಳನ್ನು ಸ್ಥಾಪಿಸಿದ್ದರು ಎಂದು ಹೇಳಿದರು.

ರಾಜ್ಯದಲ್ಲಿ ಅತಿ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳು, ಮೆಡಿಕಲ್ ಕಾಲೇಜುಗಳಿವೆ. ಇಲ್ಲಿ ಪ್ರತಿಭೆಗಳು ಹೆಚ್ಚಿವೆ. ತಾವು ಚಿಕ್ಕ ವಯಸ್ಸಿನಲ್ಲೇ ರಾಜಕಾರಣಕ್ಕೆ ಬಂದು ಮಕ್ಕಳ ಭಯಕ್ಕಾಗಿ 47ನೇ ಪದವಿ ಪಡೆದುಕೊಂಡೆ. ಎಂಜಿನಿಯರಿಂಗ್ ಓದಲಿಲ್ಲ ಎಂಬ ಕಾರಣಕ್ಕಾಗಿ ಎಂಜಿನಿಯರ್ ತಯಾರಿಸುವ ಕಾಲೇಜುಗಳನ್ನು ಸ್ಥಾಪಿಸಿದೆ ಎಂದರು.

ಹೆಣ್ಣುಮಕ್ಕಳು ಆತ್ಮವಿಶ್ವಾಸದಿಂದಿರಬೇಕು. ಈಗ ರಾಜಕಾರಣದಲ್ಲೂ ಶೇ.33 ರಷ್ಟು ಮೀಸಲಾತಿ ನೀಡಲಾಗುತ್ತಿದೆ. ನಮ್ಮಂಥವರು ಬೇರೆ ಕ್ಷೇತ್ರಗಳನ್ನು ಹುಡುಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತಿದೆ ಎಂದು ತಿಳಿಸಿದರು. ಬಾಹ್ಯಾಕಾಶದ 7 ಗ್ರಹಗಳು ಇಂದು ಒಂದೇ ಜಾಗದಲ್ಲಿ ಕಾಣಸಿಗುತ್ತವೆ. ನಾನು ಅದನ್ನು ಟೆಲಿಸ್ಕೋಪ್ನಿಂದ ನೋಡಿದ್ದೇನೆ. ಈ ಕೌತುಕ ಮತ್ತೆ ಘಟಿಸಲು 15 ವರ್ಷ ಕಾಯಬೇಕಿತ್ತು. 2040ಕ್ಕೆ ಇಂತಹ ಸುಸಂದರ್ಭಒದಗಿಬರಲಿದೆ ಎಂದರು.

ಇಸ್ರೋದ ಮಾಜಿ ಅಧ್ಯಕ್ಷ ಪದ್ಮಶ್ರೀ ಕಿರಣ್ ಕುಮಾರ್ ಮಾತನಾಡಿ, ಆರ್ಯಭಟ ಉಪಗ್ರಹ ಉಡಾವಣೆಯಾಗಿ ಇಂದಿಗೆ 50 ವರ್ಷ ಕಳೆದಿವೆ. ಉಡುಪಿ ರಾಮಚಂದ್ರರಾವ್ ಅವರು ವಿಜ್ಞಾನದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಜಗತ್ತಿನ ಆಲೋಚನೆಗಳೇ ಒಂದು ರೀತಿಯಾದರೆ ಭಾರತೀಯರ ಆಲೋಚನೆಗಳು ವಿಭಿನ್ನ ಹಾಗೂ ಉತ್ಕೃಷ್ಟವಾಗಿರುತ್ತವೆ. ನಮ್ಮ ತಂತ್ರಜ್ಞಾನ ಹಾಗೂ ಅನ್ವೇಷಣೆಗಳು ಜನರ ಜೀವನಕ್ಕೆ ಸಮೀಪವಾಗಿರುತ್ತವೆ. |ಎಂದು ವಿವರಿಸಿದರು.

ಮುಂದಿನ ಪೀಳಿಗೆಯಲ್ಲಿ ಕೃತಕ ಬುದ್ದಿಮತ್ತೆ, ರೋಬಾಟಿಕ್ ಸೈನ್ಸ್, ಮಿಷನ್ ಲರ್ನಿಂಗ್‌ನಂತಹ ಕ್ವಾಂಟಮ್ ತಂತ್ರಜ್ಞಾನಗಳ ಬಗ್ಗೆ ತಿಳಿವಳಿಕೆ ನೀಡಬೇಕು. ವೈಜ್ಞಾನಿಕ ಪರೀಕ್ಷೆಗಳನ್ನು ಖುದ್ದು ಅನುಭವಿಸಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಶಾಸಕ ರಿಜ್ವಾನ್ ಹರ್ಷದ್ ದೇವರನ್ನು ನಂಬಬೇಕು. ಮೂಢನಂಬಿಕೆಯಿಂದ ದೂರ ಇರಬೇಕು. ಹಿಂದಿಗಿಂತಲೂ ಪ್ರಸ್ತುತ ದಿನಗಳಲ್ಲಿ ಸಂಪರ್ಕ ಅತ್ಯಂತ ಸುಲಭವಾಗಿದೆ. ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎನ್.ಎಸ್.ಬೋಸರಾಜ್, ಕೃಷ್ಣಭೈರೇಗೌಡ, ಪ್ರಿಯಾಂಕ ಖರ್ಗೆ, ಡಾ.ಎಂ.ಸಿ.ಸುಧಾಕರ್, ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಶಾಸಕರಾದ ರಿಜ್ವಾನ್ ಹರ್ಷದ್, ಸಲೀಂ ಅಹಮ್ಮದ್, ಹಿರಿಯ ಅಧಿಕಾರಿಗಳಾದ ಉಮಾಶಂಕರ್, ಏಕರೂಪ್ ಕೌರ್, ತುಷಾರ್ ಗಿರಿನಾಥ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News