ಬೆಂಗಳೂರು,ಜೂ.13- ಜನರ ನಿದ್ದೆಗೆಡಿಸಿ ಮಾಯವಾಗಿದ್ದ ಏಡ್ಸ್ ಮಹಾಮಾರಿ ರಾಜ್ಯದಲ್ಲಿ ಮತ್ತೆ ಸದ್ದು ಮಾಡತೊಡಗಿದೆ.ಒಂದು ಕಾಲದಲ್ಲಿ ಆತಂಕ ಸೃಷ್ಟಿಸಿದ್ದ ಏಡ್ಸ್ ಮಹಾಮಾರಿ ಕೆಲ ದಿನಗಳ ನಂತರ ಕಡಿಮೆಯಾಗಿತ್ತು ಇದೀಗ ಮತ್ತೆ ಏಡ್ಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಮಾತ್ರವಲ್ಲದೆ ರಾಜಧಾನಿ ಬೆಂಗಳೂರಿನಲ್ಲಿ ಏಡ್ಸ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿರುವುದು ಪತ್ತೆಯಾಗಿದೆ.ರಾಜ್ಯದಲ್ಲಿ ಒಂದು ಲಕ್ಷ 85 ಸಾವಿರ ಏಡ್ಸ್ ರೋಗಿಗಳು ಪತ್ತೆಯಾಗಿದ್ದು, ಬೆಂಗಳೂರಿನಲ್ಲೂ ಮಾರಕ ಏಡ್ಸ್ ರೋಗಿಗಳ ಸಂಖ್ಯೆ ಏರಿಕೆಯಾಗಿರುವುದು ದೃಢಪಟ್ಟಿದೆ. ಅದರಲ್ಲೂ ಯುವ ಸಮುದಾಯವೇ ಮಾರಕ ರೋಗಕ್ಕೆ ತುತ್ತಾಗಿರುವುದು ಕಂಡು ಬಂದಿದೆ.
ಅವಿವಾಹಿತರು ಅದರಲ್ಲೂ 14 ರಿಂದ 18 ವರ್ಷದ ವಯಸ್ಸಿನವರಲ್ಲೇ ಹೆಚ್ಚು ಸೋಂಕು ಕಂಡು ಬಂದಿದೆ ಎಂದು ಕೆ.ಸಿ.ಜನರಲ್ ಆಸ್ಪತ್ರೆ ವೈದ್ಯೆ ಕಾವ್ಯಶ್ರೀ ಮಾಹಿತಿ ನೀಡಿದ್ದಾರೆ.ಬೆಂಗಳೂರು. ಕೋಲಾರ. ಬೆಳಗಾವಿ ಜಿಲ್ಲೆಗಳು ಏಡ್ಸ್ ಸೋಂಕಿತರ ಟಾಪ್ ಲಿಸ್ಟ್ ನಲ್ಲಿವೆ. ಅತಿಯಾದ ಮಾದಕ ಸೇವನೆ, ಅಸುರಕ್ಷಿತ ಲೈಂಗಿಕ ಕ್ರಿಯೆ ಯಿಂದ ಏಡ್ಸ್ ಹೆಚ್ಚಾಗಿದೆ ಎಂದು ಅವರು ವಿವರಿಸಿದ್ದಾರೆ.
ಸದ್ಯ ನಗರದ ಕೆ.ಸಿ ಜನರಲ್ ಅಸ್ಪತ್ರೆಗೆ ಪ್ರತಿ ನಿತ್ಯ 50-60 ಜನ ತಪಾಸಣೆಗೆ ಬರುತ್ತಿದ್ದು ಪ್ರತಿ ತಿಂಗಳು 15 ರಿಂದ 20 ಪಾಸಿಟಿವ್ ಕೇಸ್‌ಗಳು ಪತ್ತೆಯಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.