ಬೆಂಗಳೂರು,ಮೇ18- ಬಾಂಬ್ ಅಡಗಿಸಿಟ್ಟಿರುವುದಾಗಿ ಹುಸಿ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಪ್ರಯಾಣಿಕನೊಬ್ಬನನ್ನು ಬಂಧಿಸಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ರಾಜೇಶ್‌ಕುಮಾರ್ ದೇನಿವಾಲ್ ಎಂಬ ಪ್ರಯಾಣಿಕನನ್ನು ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆತನ ವಿರುದ್ಧ ದೂರು ದಾಖಲಿಸಲಾಗಿದೆ. ಬೆಳಗ್ಗೆ ಬೆಂಗಳೂರಿನಿಂದ ಪುಣೆಗೆ ಹೊರಟ್ಟಿದ್ದ ಏರ್ ಇಂಡಿಯಾ ಎಕ್‌್ಸಪ್ರೆಸ್ ವಿಮಾನದಲ್ಲಿದ್ದ ಪ್ರಯಾಣಿಕ ಚೆಕ್‌ಇನ್ ಬ್ಯಾಗ್‌ನಲ್ಲಿ ಬಾಂಬ್ ಹುದುಗಿಸಿಟ್ಟಿರುವುದಾಗಿ ಬೆದರಿಕೆ ಹಾಕಿದ್ದ.
ಕೂಡಲೇ ಎಚ್ಚೆತ್ತುಕೊಂಡು ವಿಮಾನ ನಿಲ್ದಾಣದ ಅಧಿಕಾರಿಗಳು ಎಲ್ಲಾ ಬ್ಯಾಗ್‌ಗಳನ್ನು ತಪಾಸಣೆಗೆ ಒಳಪಡಿಸಿ ತೀವ್ರ ಶೋಧ ನಡೆಸಿದರು. ಆದರೆ ಎಲ್ಲಿಯೂ ಬಾಂಬ್ ಇಟ್ಟಿರುವುದು ಪತ್ತೆಯಾಗಲಿಲ್ಲ. ದೇನಿವಾಲ್‌ನನ್ನು ಕೂಡಲೇ ಬಂಧಿಸಲಾಯಿತು. ಮೂಲತಃ ಹರಿಯಾಣದ ಹಿಸ್ಸಾರ ಜಿಲ್ಲೆಯ ನಿವಾಸಿಯಾದ ದೇನಿವಾಲ್ ಬೆಂಗಳೂರಿನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಖ್ಯೆ 15812ನಲ್ಲಿ ಪ್ರಯಾಣಿಸಲು ಮುಂದಾಗಿದ್ದ.
ಟರ್ಮಿನಲ್ 2ನಲ್ಲಿದ್ದ ಈ ಪ್ರಯಾಣಿಕನನ್ನು ವಿಮಾನ ನಿಲ್ದಾಣ ಪ್ರಾಧಿಕಾರದ ಪೊಲೀಸರು ವಶಕ್ಕೆ ಪಡೆದರು. ಈ ಘಟನೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.