ವಿಶ್ವದ ಅತಿ ಹೆಚ್ಚು ಮಾಲಿನ್ಯಗೊಂಡ 10 ನಗರಗಳ ಪಟ್ಟಿಯಲ್ಲಿ ಭಾರತದ 9 ನಗರಗಳು..!

ಬೆಂಗಳೂರು, ಡಿ.26- ಜಗತ್ತಿನಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯ ಅನುಭವಿಸುತ್ತಿರುವ 10 ಪ್ರಮುಖ ನಗರಗಳಲ್ಲಿ ಭಾರತದ 9 ನಗರಗಳು ಎಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕಾಂಬೋಡಿಯಾದ ಬಮೆಂಡಾ 8ನೇ ಸ್ಥಾನದಲ್ಲಿದ್ದು, ಉಳಿದ ಎಲ್ಲಾ ನಗರಗಳು ಭಾರತದವೇ ಆಗಿವೆ.  ಕಾನ್ಪುರ, ಫರಿದಾಬಾದ್, ಗಯಾ, ವಾರಣಾಸಿ, ಪಾಟ್ನಾ, ದೆಹಲಿ, ಲಕ್ನೋ, ಆಗ್ರ, ಗುರುಗಾವ್ ನಗರಗಳಲ್ಲಿ ಧೂಳಿನ ಕಣ ಹೆಚ್ಚಾಗುತ್ತಿದ್ದು, ಮಾಲಿನ್ಯ ಹೆಚ್ಚಳಗೊಳ್ಳುತ್ತಿದೆ ಎಂಬ ಆತಂಕವನ್ನು ವಿಶ್ವ ಆರೋಗ್ಯ ಸಂಸ್ಥೆ ವ್ಯಕ್ತಪಡಿಸಿದೆ.

ಹಾಗೆಯೇ ಅತಿಹೆಚ್ಚು ಕಲುಷಿತ ಗಾಳಿ ಹೊಂದಿರುವ ಜಗತ್ತಿನ 20 ನಗರಗಳಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಮೂರನೇ ಸ್ಥಾನದಲ್ಲಿದೆ. ಢಾಕರ್, ಬೀಜಿಂಗ್, ಜೋನ್ಸ್ ಬರ್ಗ್, ಜಕಾರ್ತ, ಬ್ಯಾಂಕಾಕ್, ಮೆಕ್ಸಿಕೋ, ಟೋಕಿಯೋ, ಪ್ಯಾರಿಸ್, ಲಂಡನ್, ನ್ಯೂಯಾರ್ಕ್ ನಗರಗಳು ನಂತರದ ಸ್ಥಾನ ಹೊಂದಿವೆ. ವಿಶ್ವ ಬ್ಯಾಂಕ್‍ನ ಮತ್ತೊಂದು ಅಂಕಿ-ಅಂಶದ ಪ್ರಕಾರ ಭಾರತದಲ್ಲಿ 65 ವರ್ಷ ಮೇಲ್ಪಟ್ಟು ಬದುಕಿರುವವರ ಪ್ರಮಾಣ ಶೇ.66ರಷ್ಟಿದೆ. ಐರ್‍ಲ್ಯಾಂಡ್ ಶೇ.90ರಷ್ಟು, ಆಸ್ಟ್ರೇಲಿಯಾ, ಇಟಾಲಿ, ನೆದರ್‍ಲ್ಯಾಂಡ್ ಶೇ.89ರಷ್ಟು, ಜಪಾನ್, ಕೆನಡಾದಲ್ಲಿ ಶೇ.88ರಷ್ಟು ಮಂದಿ 65ವರ್ಷದ ನಂತರವೂ ಬದುಕಿರುವುದಾಗಿ ವರದಿ ಹೇಳಿದೆ.

ಭಾರತದಲ್ಲಿ ಶೇ.55ರಷ್ಟು ಮಂದಿ ಪೋಷಕರು ವಯಸ್ಸಿಗೆ ಬಂದ ತಮ್ಮ ಮಕ್ಕಳಿಗೆ ಆರ್ಥಿಕವಾಗಿ ನೆರವಾಗಿರುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯೂರೋಪ್ ರಾಷ್ಟ್ರಗಳಲ್ಲಿ ಶೇ.79ರಷ್ಟು, ಇಂಡೋನೇಷಿಯಾದಲ್ಲಿ ಶೇ.77ರಷ್ಟು, ಮೆಕ್ಸಿಕೋದಲ್ಲಿ ಶೇ.59ರಷ್ಟು, ಮಲೆಷಿಯಾದಲ್ಲಿ ಶೇ.57ರಷ್ಟು , ಚೀನಾದಲ್ಲಿ ಶೇ.55ರಷ್ಟು , ಇಂಗ್ಲೆಂಡ್‍ನಲ್ಲಿ ಶೇ.30ರಷ್ಟು ಹಾಗೂ ಅಮೆರಿಕಾದಲ್ಲಿ ಶೇ.26ರಷ್ಟು ಮಂದಿ ಪೋಷಕರು ತಮ್ಮ ಮಕ್ಕಳು ವಯಸ್ಸಿಗೆ ಬಂದ ನಂತರವೂ ಆರ್ಥಿಕವಾಗಿ ನೆರವು ನೀಡುತ್ತಿರುತ್ತಾರೆ ಎಂದು ಹೇಳಲಾಗಿದೆ.

ಮತ್ತೊಂದು ಮಹತ್ವದ ಅಂಶವೆಂದರೆ ಮಕ್ಕಳ ಹೋಮ್‍ವರ್ಕ್ ಮಾಡಿಸಲು ಜಗತ್ತಿನ ಎಲ್ಲಾ ದೇಶಗಳಿಗಿಂತಲೂ ಅತಿ ಹೆಚ್ಚು ಸಮಯವನ್ನು ಭಾರತೀಯರು ಮೀಸಲಿಡುತ್ತಾರೆ ಎಂಬ ಮಾಹಿತಿ ಸಮೀಕ್ಷೆಯಿಂದ ಹೊರ ಬಿದ್ದಿದೆ. ಭಾರತೀಯರು ವಾರದ 12 ಗಂಟೆಗಳನ್ನು ಮಕ್ಕಳ ಹೋಮ್‍ವರ್ಕ್ ಮಾಡಿಸಲು ಸಮಯ ಮೀಸಲಿಟ್ಟರೆ. ಟರ್ಕಿಯವರು 7.5 ಗಂಟೆ, ಸಿಂಗಾಪುರದ ಪ್ರಜೆಗಳು 8 ಗಂಟೆ, ಚೀನಾ, 7, ಅಮೆರಿಕಾ 6, ಜರ್ಮನಿ 5, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ 4 ಗಂಟೆ, ಜಪಾನ್ ಮಂದಿ ಕೇವಲ ಎರಡು ಗಂಟೆಗಳನ್ನು ಮಾತ್ರ ಮಕ್ಕಳ ಹೋಮ್‍ವರ್ಕಿಗಾಗಿ ಮೀಸಲಿಡುತ್ತಾರೆ ಎಂದು ಹೇಳಲಾಗಿದೆ.