ಬೆಂಗಳೂರು,ಜ.7- ಮಾಜಿ ಸಂಸದ ಡಿ.ಕೆ.ಸುರೇಶ್ಸಹೋದರಿಯೆಂದು ಪರಿಚಯಿಸಿಕೊಂಡು ವಂಚನೆ ಮಾಡಿರುವ ಐಶ್ವರ್ಯಗೌಡ ಮೇಲೆ ಇದೀಗ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಇದುವರೆಗೂ ಮಂಡ್ಯ ಪೂರ್ವ ಪೊಲೀಸ್ ಠಾಣೆ ಸೇರಿದಂತೆ ಒಟ್ಟು 4 ಪ್ರಕರಣಗಳು ದಾಖಲಾಗಿದ್ದು, ಚಂದ್ರಲೇಔಟ್ ಹಾಗೂ ಆರ್ಆರ್ ನಗರ ಠಾಣೆಯಲ್ಲಿ ಶಿಲ್ಪಾಗೌಡ ಅವರು ನೀಡಿದ ದೂರಿನಲ್ಲಿ ಐಶ್ವರ್ಯಗೌಡಗೆ ಜಾಮೀನು ಲಭಿಸಿದೆ.
ವೈದ್ಯೆಗೆ ವಂಚನೆ :
ಆರ್ಆರ್ನಗರದ ಬಿಇಎಂಎಲ್, 4ನೇ ಹಂತದ ನಿವಾಸಿ, ಸ್ತ್ರೀರೋಗ ತಜ್ಞೆ ಡಾ.ಮಂಜುಳಾ ಎ ಪಾಟೀಲ್ ಅವರ ಬಳಿ ಚೆಕಪ್ಗೆ ಹೋಗಿದ್ದ ವೇಳೆ ಐಶ್ವರ್ಯಗೌಡ ತಾನು ಡಿ.ಕೆ.ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಅವರ ಆತೀಯತೆ ಬೆಳೆಸಿಕೊಂಡಿದ್ದಾಳೆ.ತದನಂತರದಲ್ಲಿ ಕೆಲವು ಕಡೆ ನನ್ನ ಹಣ ಸ್ಟ್ರಕ್ ಆಗಿದೆ, ಈಗ ಅರ್ಜೆಂಟಾಗಿ ಹಣ ಬೇಕೆಂದು ವೈದ್ಯೆಯಿಂದ ಪಡೆದು ನಂಬಿಕೆ ಗಳಿಸಲು ಈ ಹಣ ಹಿಂದಿರುಗಿಸಿದ್ದಾರೆ.
ಅದೇ ರೀತಿ 2022 ರಿಂದ ಹಂತಹಂತವಾಗಿ ಖಾತೆ ಮೂಲಕ ಹಣ ಪಡೆದುಕೊಂಡಿದ್ದ ಐಶ್ವರ್ಯಗೌಡ, ಹಣ ವಾಪಸ್ ಕೇಳಿದಾಗ ಸಬೂಬು ಹೇಳುತ್ತಾ ದಿನದೂಡಿದ್ದಾರೆ.
ಗೋಲ್‌್ಡ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಲಾಭವಿದೆಯೆಂದು ವೈದ್ಯೆಯನ್ನು ನಂಬಿಸಿ ಹಂತ ಹಂತವಾಗಿ ನಗದು ರೂಪದಲ್ಲಿ ಮತ್ತು ಖಾತೆ ಮೂಲಕ 2,52,60,000 ರೂ. ಹಣ ಹಾಗೂ 2 ಕೆಜಿ 350 ಗ್ರಾಂ ಚಿನ್ನದ ಒಡವೆಗಳನ್ನು ಐಶ್ವರ್ಯಗೌಡ ಪಡೆದುಕೊಂಡು ವಾಪಸ್ ನೀಡದೇ ನಂಬಿಕೆ ದ್ರೋಹವೆಸಗಿ ವಂಚಿಸಿದ್ದಾರೆ.
ಐಶ್ವರ್ಯಗೌಡ ವಂಚನೆ ಬಗ್ಗೆ ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡಿದ್ದ ವೈದ್ಯೆ ಹಣ ಕೇಳಲು ಜ.1 ರಂದು ಸಂಜೆ 7 ಗಂಟೆ ಸುಮಾರಿನಲ್ಲಿ ಐಶ್ವರ್ಯ ಮನೆ ಬಳಿ ಹೋಗಿದ್ದಾಗ ಕಾರು ಚಾಲಕ ಧನಂಜಯ ಮೊಬೈಲ್ ಕರೆ ಮಾಡಿ ಕೊಟ್ಟಿದ್ದಾರೆ.
ಮೊಬೈಲ್ನಲ್ಲಿ ಐಶ್ವರ್ಯಗೌಡ ಮತ್ತು ಹರೀಶ್ ಇಬ್ಬರೂ ಮಾತನಾಡಿ, ನಿನಗೆ ಕೊಡಬೇಕಾಗಿರುವ ಹಣ ಮತ್ತು ಆಭರಣದ ಬಗ್ಗೆ ಎಲ್ಲಿಯೂ, ಯಾವ ಪೊಲೀಸ್ಠಾಣೆಯಲ್ಲೂ ದೂರು ನೀಡಬಾರದು. ಒಂದು ವೇಳೆ ನೀವೇನಾದರೂ ಹಾಗೆ ಮಾಡಿದರೆ ಹಣ ಮತ್ತು ಆಭರಣ ಕೊಡುವುದಿಲ್ಲ. ಆಮೇಲೆ ನಾನೇನು ಮಾಡುತ್ತೇನೋ ನನಗೇ ಗೊತ್ತಿಲ್ಲ. ನಾನು ಡಿ.ಕೆ.ಸುರೇಶ್ ಮತ್ತು ಡಿ.ಕೆ.ಶಿವಕುಮಾರ್ ತಂಗಿ ಎಂದು ನಿನಗೆ ಗೊತ್ತಿದೆಯಲ್ಲಾ? ಎಂದು ಹೇಳಿ ಹೆದರಿಸಿದ್ದಾರೆ.
ವೈದ್ಯೆ ಮತ್ತೇನು ಮಾಡಬೇಕೆಂದು ತೋಚದೆ ಇದೀಗ ಆರ್ಆರ್ ನಗರ ಪೊಲೀಸ್ ಠಾಣೆಗೆ ಐಶ್ವರ್ಯಗೌಡ ಹಾಗೂ ಕಾರು ಚಾಲಕರಾದ ಅಶ್ವಥ್, ಧನಂಜಯ ಹಾಗೂ ಇತರರ ವಿರುದ್ಧ ಬೆದರಿಕೆ ದೂರು ನೀಡಿದ್ದಾರೆ.ಇದೀಗ ಪ್ರಕರಣ ದಾಖಲಿಸಿಕೊಂಡಿ ರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.