ಬೆಂಗಳೂರು,ಮಾ.17- ಲೈಂಗಿಕ ಅಲ್ಪಸಂಖ್ಯಾತ ಹಕ್ಕುಗಳ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ಅವರು ರಾಜ್ಯಸರ್ಕಾರ ನೀಡಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯತ್ವವನ್ನು ತಿರಸ್ಕರಿಸಿರುವುದರಿಂದ ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅಕ್ಕಯ್ ಪದ್ಮಶಾಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರನ್ನಾಗಿ ನನ್ನನ್ನು ಗುರುತಿಸಿ, ಆಯ್ಕೆ ಮಾಡಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆಗಳು. ಆದರೆ ನನ್ನ ಸದಸ್ಯತ್ವವನ್ನು ಕೈಬಿಡಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸಾಮಾಜಿಕ ಹಾಗೂ ರಾಜಕೀಯ ವಿಚಾರವಾಗಿ ತಾವು ನಡೆಸಿರುವ ಹೋರಾಟ ಪ್ರಪಂಚದಾದ್ಯಂತ ಪಸರಿಸಿದೆ. ನಮ್ಮ ಸಮುದಾಯದ ಸಂಪೂರ್ಣ ಶ್ರೇಯೋಭಿವೃದ್ಧಿಗಾಗಿ ಮತ್ತು ಸಾಮಾಜಿಕ ಬಹಿಷ್ಕಾರದ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.
ತಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ವಿಧಾನಪರಿಷತ್‍ನ ಸದಸ್ಯತ್ವ ಅಥವಾ ರಾಜ್ಯಸಭೆಯ ಸದಸ್ಯತ್ವ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸರ್ವಜನಾಂಗದ ಸಾಂಕೇತದಡಿಯಲ್ಲಿ ನಾವು ಸಾಕ್ಷಿಯಾಗಬೇಕಾಗಿರುವ ವಾತಾವರಣ ನಿರ್ಮಾಣವಾಗಬೇಕಿದೆ. ಹೀಗಾಗಿ ವಿಶೇಷ ಕಾಳಜಿ ವಹಿಸಿ ನಮ್ಮ ಸಮುದಾಯಕ್ಕೆ ಆದ್ಯತೆ ನೀಡಬೇಕೆಂದು ಮನವಿ ಸಲ್ಲಿಸಿದರು.