Friday, September 20, 2024
Homeರಾಜ್ಯಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ : ಸಿಎಂ ಸಿದ್ದರಾಮಯ್ಯ

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ : ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಆ.12- ರಾಜ್ಯದಲ್ಲಿ ಮಾನವ ಹಾಗೂ ವನ್ಯ ಜೀವಿ ಸಂಘರ್ಷವನ್ನು ಶೂನ್ಯ ಪ್ರಮಾಣಕ್ಕೆ ತಗ್ಗಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಆನೆ ಮತ್ತು ಮಾನವ ಸಂಘರ್ಷ ನಿರ್ವಹಣೆಯ ಅಂತಾರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, 2017ರ ಗಣತಿಯ ಪ್ರಕಾರ ವಿಶ್ವಾದ್ಯಂತ 30 ಸಾವಿರಕ್ಕೂ ಹೆಚ್ಚು ಆನೆಗಳಿವೆ. ಅದರಲ್ಲಿ ಕರ್ನಾಟಕ 6,395 ಆನೆಗಳನ್ನು ಹೊಂದಿರುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ಜಾಗತಿಕ ಆನೆಗಳ ಸಂಖ್ಯೆಯಲ್ಲಿ ಶೇ.25 ರಷ್ಟು ಪಾಲು ಹೊಂದಿದೆ.

2022 ರ ಅಖಿಲ ಭಾರತ ಹುಲಿ ಸಮೀಕ್ಷೆಯಲ್ಲಿ 563 ಹುಲಿಗಳನ್ನು ಹೊಂದುವ ಮೂಲಕ ರಾಜ್ಯವು ಎರಡನೇ ಸ್ಥಾನದಲ್ಲಿದೆ. ದೊಡ್ಡ ಸಸ್ತನಿಗಳು, ಉನ್ನತ ಪರಭಕ್ಷಕಗಳು, ಸಸ್ಯಾಹಾರಿಗಳು ಮತ್ತು ಅರಣ್ಯ ಸಂಪನೂಲಗಳ ಆರೋಗ್ಯಕರ ಜನಸಂಖ್ಯೆಯನ್ನು ಕರ್ನಾಟಕ ಹೊಂದಿದೆ.

ರಾಜ್ಯದಲ್ಲಿ ಮೈಸೂರು ಮತ್ತು ದಾಂಡೇಲಿಯಲ್ಲಿ ತಲಾ 10 ಸಾವಿರ ಚದರ ಕಿ.ಮೀ.ನಂತೆ ಎರಡು ಆನೆ ಮೀಸಲು ಪ್ರದೇಶಗಳನ್ನು ಹೊಂದಿದೆ. ಇವು ಆನೆಗಳ ಪಾಲನೆ ಪೋಷಣೆ ಮತ್ತು ಸಂರಕ್ಷಣೆಗೆ ನಿರ್ಣಾಯಕ ಪಾತ್ರ ವಹಿಸಿವೆ ಎಂದರು.

ಅಭಿವೃದ್ಧಿಯ ಒತ್ತಡಗಳು ಮತ್ತು ಅರಣ್ಯಪ್ರದೇಶಗಳ ವಿಘಟನೆಗಳಿಂದ ಇತ್ತೀಚಿನ ವರ್ಷಗಳಲ್ಲಿ ಮಾನವ ವನ್ಯ ಜೀವಿ ಸಂಘರ್ಷ ಹೆಚ್ಚಳವಾಗಿದೆ. ರಾಜ್ಯದಲ್ಲಿ 10 ವರ್ಷಗಳಿಂದೀಚೆಗೆ 2,500 ಕ್ಕೂ ಹೆಚ್ಚು ಆನೆ -ಮಾನವ ಸಂಘರ್ಷಗಳು ಘಟಿಸಿದ್ದು, 350 ಮಾನವ ಜೀವ ಹಾನಿಯಾಗಿದೆ. ಅಪಾರ ಪ್ರಮಾಣದ ಬೆಳೆನಷ್ಟ ಸಂಭವಿಸಿದೆ.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನಿರ್ವಹಣೆ ಮಾಡಲು ಬಜೆಟ್ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ. 150 ಕೋಟಿ ರೂ. ಹಣದಲ್ಲಿ 300 ಕಿ.ಮೀ.ಗಳಿಗಿಂತ ಹೆಚ್ಚಿನ ರೈಲ್ವೆ ಬ್ಯಾರಿಕೇಡ್ಗಳು, 800 ಕಿ.ಮೀ. ಸೌರ ಬೇಲಿಗಳನ್ನು ಅಳವಡಿಸಲಾಗಿದೆ. ಆನೆ ನಿರೋಧಕ ಕಂಕಗಳಂತಹ ಭೌತಿಕ ತಡೆಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಕಾಡುಪ್ರಾಣಿಗಳು ನಾಡಿನೊಳಗೆ ಪ್ರವೇಶಿಸುವುದನ್ನು ತಪ್ಪಿಸುವ ಪ್ರಯತ್ನ ನಡೆದಿದ್ದು, ಕೃಷಿಕರ ಬೆಳೆಗಳಿಗೆ ರಕ್ಷಣೆ ದೊರೆಯುತ್ತಿದೆ.

ರೈತರು ಸ್ವಯಂ ಸೌರ ಬೇಲಿಗಳನ್ನು ಅಳವಡಿಸಿಕೊಳ್ಳಲು ಸಹಾಯಧನ ನೀಡುತ್ತಿರುವುದರಿಂದ 50 ಸಾವಿರ ಹೆಕ್ಟೇರ್ಗೂ ಹೆಚ್ಚಿನ ಕೃಷಿ ಭೂಮಿ ಸಂರಕ್ಷಿಸಿದಂತಾಗಿದೆ. ರಾಜ್ಯದಲ್ಲಿ 8 ವಿಶೇಷ ಆನೆ ಕಾರ್ಯಪಡೆಗಳು, 9 ಕಡೆ ಆನೆ ಕಾರ್ಯಪಡೆ ತಂಡಗಳನ್ನು ಸ್ಥಾಪಿಸಲಾಗಿದೆ. ಇವು 1200 ಕ್ಕೂ ಹೆಚ್ಚು ಸಂಘರ್ಷಗಳನ್ನು ಒಂದು ವರ್ಷದಲ್ಲಿ ತಡೆದಿವೆ ಎಂದು ಹೇಳಿದರು.

ಅರಣ್ಯದಲ್ಲಿ ವನ್ಯಜೀವಿಗಳಿಗೆ ಸೂಕ್ತ ಆವಾಸ ಸ್ಥಾನ ಅಭಿವೃದ್ಧಿ, ಹುಲ್ಲುಗಾವಲು, ಬಿದಿರಿನ ಪುನರ್ ಉತ್ಪಾದನೆ, ಸೌರ ಪಂಪ್ಗಳ ಮೂಲಕ ನೀರಿನ ಸೌಲಭ್ಯ ಸೇರಿದಂತೆ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.

ಸಾವಿರಾರು ವರ್ಷಗಳಿಂದಲೂ ಆನೆ ಮತ್ತು ಮನುಷ್ಯ ಸಹಬಾಳ್ವೆ ಮತ್ತು ಸಹಿಷ್ಣುತೆಯಿಂದ ಬದುಕು ನಡೆಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ನಗರೀಕರಣ, ಕೃಷಿ ವಿಸ್ತರಣೆ, ಹೆದ್ದಾರಿ, ಗಣಿಗಾರಿಕೆ, ಕೈಗಾರಿಕಾ ಬೆಳವಣಿಗೆಗಳಿಂದಾಗಿ ಆನೆಗಳ ಆವಾಸ ಸ್ಥಾನ ತಗ್ಗಿದೆ.

ಕೃಷಿ ಪ್ರದೇಶಗಳು ವಿಸ್ತಾರಗೊಂಡಿದ್ದರಿಂದಾಗಿ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಹೀಗಾಗಿ ಆನೆಗಳು ಮತ್ತು ವನ್ಯಜೀವಿಗಳು ನಾಡಿನತ್ತ ಬಂದು ಸಂಘರ್ಷ ಉಂಟಾಗುತ್ತಿದೆ. ಇದೊಂದು ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಹೊಂದಿರುವ ಸಂಕೀರ್ಣ ಸಮಸ್ಯೆ.

ತಾಪಮಾನ ಹೆಚ್ಚಳವೂ ಪರಿಣಾಮ ಬೀರುತ್ತದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಮಾನವ ಹಾಗೂ ವನ್ಯಜೀವಿ ಸಂಘರ್ಷಕ್ಕೆ ತನ್ನದೇ ಆದ ಕಾರ್ಯತಂತ್ರಗಳನ್ನು ಅನ್ವೇಷಣೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಅದಕ್ಕೆ ಅಗತ್ಯ ಬೆಂಬಲ ನೀಡಲು ಸರ್ಕಾರ ಸಿದ್ಧವಿದೆ.

ಸಮುದಾಯದ ಸಹಭಾಗಿತ್ವವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಕೇವಲ ಅರಣ್ಯ ಸಿಬ್ಬಂದಿಗಳಷ್ಟೇ ಅರಣ್ಯ ರಕ್ಷಣೆ, ವನ್ಯಜೀವಿ ಸಂಘರ್ಷ ತಡೆಯಲು ಸಾಧ್ಯವಿಲ್ಲ. ಆಧುನಿಕ ತಂತ್ರಜ್ಞಾನ ಮತ್ತು ಅರಣ್ಯದ ನೆರೆಹೊರೆಯ ಜನರ ಸಹಯೋಗವೂ ಅಗತ್ಯವಿದೆ ಎಂದರು.

ಅರಣ್ಯ ಸಚಿವ ಈಶ್ವರ್ಖಂಡ್ರೆ ಮಾತನಾಡಿ, ಆನೆ-ಮಾನವ ಸಂಘರ್ಷ ಒಂದು ರಾಜ್ಯದ ಸಮಸ್ಯೆಯಲ್ಲ. ಜಾಗತಿಕ ಸಂಕೀರ್ಣ ಸಮಸ್ಯೆಯಾಗಿದೆ. ರಾಜ್ಯದಲ್ಲಿ 43,282 ಚ.ಕಿ.ಮೀ. ಅರಣ್ಯಪ್ರದೇಶವಿದ್ದು, ಒಟ್ಟು ಭೌಗೋಳಿಕ ಭೂಭಾಗದ 22 ರಷ್ಟು ಮಾತ್ರ ಹಸಿರು ಹೊದಿಕೆಯಿದೆ ಎಂದು ವಿವರಿಸಿದದರು.

ರಾಜ್ಯದಲ್ಲಿ ಕಳ್ಳಬೇಟೆ ನಿಗ್ರಹಕ್ಕೆ ಕ್ರಮ ಕೈಗೊಂಡಿದ್ದರಿಂದಾಗಿ ವನ್ಯಮೃಗಗಳ ಸಂಖ್ಯೆ ಹೆಚ್ಚಾಗಿದೆ. ಇದು ಮಾನವ ಮತ್ತು ವನ್ಯಮೃಗಗಳ ಸಂಘರ್ಷಕ್ಕೂ ಕಾರಣವಾಗಿದ್ದು, ಪ್ರತಿವರ್ಷ ಸರಾಸರಿ 30 ಜನ ಆನೆದಾಳಿಯಿಂದ ಸಾವಿಗೀಡಾಗಿದ್ದಾರೆ. ಈ ವರ್ಷ ಜನವರಿಯಿಂದ 25 ಜನ ಮೃತಪಟ್ಟಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ವನ್ಯಜೀವಿಗಳ ಸಂಖ್ಯೆಗನುಗುಣವಾಗಿ ಅರಣ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕಳೆದ ವರ್ಷ 3995 ಹೆಕ್ಟೇರ್ ಅನ್ನು ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ. 2500 ಎಕರೆ ಅರಣ್ಯ ಒತ್ತುವರಿಯನ್ನು ತೆರವು ಮಾಡಲಾಗಿದೆ. ಅರಣ್ಯ ಅಪರಾಧ ತಡೆಯಲು ಆನ್ಲೈನ್ ಎಫ್ಐಆರ್ ದಾಖಲು ಮಾಡಲಾಗುತ್ತಿದೆ. ಕಾಡ್ಗಿಚ್ಚು ನಂದಿಸಲು ದೂರ ಸಂವೇದಿ ತಂತ್ರಜ್ಞಾನ ಉಪಗ್ರಹಗಳ ನೆರವಿನಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ವಿವರಿಸಿದರು.

ಕೇರಳದ ಅರಣ್ಯ ಸಚಿವ ಎ.ಕೆ.ಶಶಿಂದ್ರನ್, ತಮಿಳುನಾಡಿನ ಅರಣ್ಯ ಸಚಿವ ಮತಿವೆಂದನ್, ತೆಲಂಗಾಣದ ಅರಣ್ಯ ಸಚಿವೆ ಕೊಂಡಾ ಸುರೇಖ, ಜಾರ್ಖಂಡ್ನ ಅರಣ್ಯ ಸಚಿವ ಬೈದ್ಯನಾಥನ್, ಶಾಸಕ ಎ.ಎಸ್.ಪೊನ್ನಣ್ಣ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News