ಬೆಂಗಳೂರು, ಮೇ 3– ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಅನುಷ್ಠಾನ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸದ್ಯದಲ್ಲಿಯೇ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೃಷ್ಣಾ ನ್ಯಾಯಾಧಿಕರಣ-2 ಗೆಜೆಟ್ ಅಧಿಸೂಚನೆ ಕುರಿತು ಚರ್ಚಿಸಲು ಕೇಂದ್ರ ಜಲಶಕ್ತಿ ಸಚಿವರು ಕರೆದಿರುವ ಕಣಿವೆ ರಾಜ್ಯಗಳ ಜಲಸಂಪನೂಲ ಸಚಿವರ ಸಭೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಯಿತು.
ರಾಜ್ಯದ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ರಾಜ್ಯದ ಪಾಲಿನ ನೀರನ್ನು ಪಡೆದುಕೊಳ್ಳಲು ಕಾನೂನು ಕ್ರಮಗಳು ಸೇರಿದಂತೆ ಎಲ್ಲಾ ಪ್ರಯತ್ನ ನಡೆಸುವಂತೆ ಮುಖ್ಯಮಂತ್ರಿ ಇದೇ ವೇಳೆ ಸೂಚನೆ ನೀಡಿದರು.
ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಗೆಜೆಟ್ ಅಧಿಸೂಚನೆ ಪ್ರಕಟಿಸಲು ಮತ್ತು ಈ ಕುರಿತಾಗಿ 2021 ಸೆಪ್ಟೆಂಬರ್ 16ರ ಸುಪ್ರೀಂಕೋರ್ಟ್ ಆದೇಶವನ್ನು ಮಾರ್ಪಡಿಸಲು ಕೋರಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ನಿರ್ಧರಿಸಲಾಯಿತು.
ನ್ಯಾಯಾಧಿಕರಣದ ಅಂತಿಮ ತೀರ್ಪು ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆಗೆ ಒಳಪಟ್ಟಿದ್ದು, ಈ ಕುರಿತಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಇನ್ನೂ ಅಧಿಸೂಚನೆ ಆಗಿಲ್ಲ. ಯಾಧಿಕರಣದ ಅಂತಿಮ ತೀರ್ಪು ನೀಡಿದ ದಿನಾಂಕದಿಂದ ಇದುವರೆಗೂ 15 ವರ್ಷಗಳೇ ಕಳೆದಿವೆ. ಉತ್ತರ ಕರ್ನಾಟಕದ ಯುಕೆಪಿ-3 ಯೋಜನೆಯ ಪ್ರದೇಶದಲ್ಲಿನ ರೈತರು ತಮ್ಮ ಹಕ್ಕಿನ ಪಾಲನ್ನು ಬಳಸಲು ಬಹಳ ವರ್ಷಗಳಿಂದ ಕಾಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅವರು ಹೇಳಿದರು.
ಕಾವೇರಿ ಜಲವಿವಾದ ನ್ಯಾಯಮಂಡಳಿ ತೀರ್ಪಿಗೆ ಸಂಬಂಧಿಸಿದಂತೆ ಸಿವಿಲ್ ಮೇಲನವಿಗಳು ಬಾಕಿ ಇರುವಾಗಲೂ ಕಾವೇರಿ ನ್ಯಾಯಾಧಿಕರಣದ ತೀರ್ಪು ಪ್ರಕಟಿಸಲು ಸುಪ್ರೀಂಕೋರ್ಟ್ ನಿರ್ದೇಶಿಸಿರುತ್ತದೆ. ಇದೇ ರೀತಿ ಮಹದಾಯಿ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಪ್ರಕಟಣೆಗೆ ಸುಪ್ರೀಂಕೋರ್ಟ್ 2020ರ ಫೆಬ್ರವರಿ 20ರಂದು ತನ್ನ ಆದೇಶದಲ್ಲಿ ನಿರ್ದೇಶಿಸಿದೆ.
ಅದರಂತೆ ಈ ಎರಡೂ ನ್ಯಾಯಾಧಿಕರಣಗಳ ತೀರ್ಪನ್ನು ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿರುತ್ತದೆ. ಇದೇ ರೀತಿಯಲ್ಲಿ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಲಾಯಿತು.
ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-2 ದಿನಾಂಕ 30-12-2010 ರಂದು ಕೃಷ್ಣಾ ನ್ಯಾಯಾಧಿಕರಣ-2 ರ ತೀರ್ಪು ನೀಡಿದ್ದು, ದಿನಾಂಕ 29-11-2013ರಂದು ಉಳಿದ ವರದಿ ನೀಡಿದೆ. ನ್ಯಾಯಾಧಿಕರಣದ ಅಂತಿಮ ತೀರ್ಪಿನಡಿ ಕರ್ನಾಟಕ ರಾಜ್ಯಕ್ಕೆ 173 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿರುತ್ತದೆ.
ಈ ಪೈಕಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಯೋಜನೆಗೆ 130 ಟಿಎಂಸಿ ಹಂಚಿಕೆ ನಿಗದಿಪಡಿಸಿರುತ್ತದೆ. ಆದರೆ ನ್ಯಾಯಮಂಡಳಿಯ ವರದಿ ಮತ್ತು ನ್ಯಾಯಾಧಿಕರಣದ ಅಂತಿಮ ಆದೇಶ ಪ್ರಶ್ನಿಸಿ ಆಂಧ್ರಪ್ರದೇಶ ಸುಪ್ರೀಂಕೋರ್ಟ್‌ನಲ್ಲಿ ಎಸ್‌ಎಲ್‌ಪಿ ದಾಖಲಿಸಿದೆ. ಈ ಕುರಿತು ಸುಪ್ರೀಂಕೋರ್ಟ್ ತನ್ನ 20211ರ ಸೆಪ್ಟೆಂಬರ್ 16ರ ಆದೇಶದಲ್ಲಿ ತನ್ನ ಮುಂದಿನ ಆದೇಶದವರೆಗೆ ನ್ಯಾಯಾಧಿಕರಣ ತೆಗೆದುಕೊಳ್ಳಬಹುದಾದ ಯಾವುದೇ ನಿರ್ಧಾರಗಳ ಅಧಿಸೂಚನೆ ಪ್ರಕಟಿಸದಂತೆ ಆದೇಶ ನೀಡಿದೆ ಎಂದು ತಿಳಿಸಿದ್ದಾರೆ.
ಡಿಸಿಎಂ ಹಾಗೂ ಜಲಸಂಪನೂಲ ಸಚಿವ ಡಿ.ಕೆ.ಶಿವ ಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಎಂ.ಬಿ. ಪಾಟೀಲ್, ಆರ್.ಬಿ.ತಿಮ್ಮಾಪುರ್, ಶರಣಬಸಪ್ಪ ಗೌಡ ದರ್ಶನಾಪುರ, ಡಾ.ಹೆಚ್.ಸಿ.ಮಹಾದೇವಪ್ಪ, ಶಿವಾನಂದ ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ನ್ಯಾಯವಾದಿ ಮೋಹನ್ ಕಾತರ್ಕಿ ಮತ್ತಿತರರು ಉಪಸ್ಥಿತರಿದ್ದರು.