ಬೆಂಗಳೂರು,ಅ.23- ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು, ಎಲ್ಲಾ ಸಾಧ್ಯತೆಗಳೂ ಮುಕ್ತವಾಗಿರುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬಿಜೆಪಿ ನಾಯಕ ಹಾಗೂ ತಮ ರಾಜಕೀಯ ಎದುರಾಳಿ ಸಿ.ಪಿ.ಯೋಗೇಶ್ವರ್ರವರು ಇಂದು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡ ವೇಳೆಯಲ್ಲಿ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಇಂದು ಬೆಳಿಗ್ಗೆ 8 ಗಂಟೆಗೆ ತಮನ್ನು ಭೇಟಿ ಮಾಡಿ ತಾವು ಕಾಂಗ್ರೆಸ್ನಿಂದಲೇ ರಾಜಕೀಯ ಜೀವನ ಆರಂಭಿಸಿದ್ದೇನೆ. ಕಾಂಗ್ರೆಸ್ನಲ್ಲೇ ಮುಂದುವರೆಯುತ್ತೇನೆ ಎಂದು ಹೇಳಿದರು. ತಕ್ಷಣವೇ ತಾವು ಪಕ್ಷದ ಎಲ್ಲರ ಜೊತೆ ಚರ್ಚಿಸಿ ಸಹಮತಿ ಪಡೆದುಕೊಂಡಿದ್ದೇನೆ ಎಂದರು.
ಸಿ.ಪಿ.ಯೋಗೇಶ್ವರ್ ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅರ್ಜಿ ಸಲ್ಲಿಕೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿದ್ದಾರೆ. ರಾಜಕೀಯದಲ್ಲಿ ಅನೇಕ ಭಿನ್ನಾಭಿಪ್ರಾಯಗಳು ಸಹಜ. ಚನ್ನಪಟ್ಟಣ ತೆರವಾದ ಬಳಿಕ ತಾವು 15 ಬಾರಿ ಅಲ್ಲಿಗೆ ಭೇಟಿ ನೀಡಿ ಸಂಘಟನೆ ಮಾಡಿದ್ದೇನೆ. ಸ್ಥಳೀಯವಾಗಿ ಎಲ್ಲಾ ಮುಖಂಡರೂ ಇದಕ್ಕೆ ಕೈ ಜೋಡಿಸಿದರು. ನಮ ಕಾರ್ಯಕರ್ತರು, ಮುಖಂಡರಿಗೆ ಮುಜುಗರವಾಗದಂತೆ ನಡೆದುಕೊಳ್ಳಲು ಸಿ.ಪಿ.ಯೋಗೇಶ್ವರ್ ಅವರಿಗೂ ಸೂಚಿಸಲಾಗಿದೆ. ಈವರೆಗೂ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಬಲವಾಗಿ ಕಟ್ಟಿ ಬೆಳೆಸಿದ ರಘುನಂದ ರಾಮಣ್ಣ ಸೇರಿದಂತೆ ಯಾರಿಗೂ ತೊಂದರೆಯಾಗದಂತೆ ತಾವು ಮತ್ತು ಡಿ.ಕೆ.ಸುರೇಶ್ ಕಾಳಜಿ ವಹಿಸಿದ್ದೇವೆ. ಎಲ್ಲಾ ಭಿನ್ನಾಭಿಪ್ರಾಯಗಳನ್ನೂ ಮರೆತು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅನ್ನು ಮತ್ತಷ್ಟು ಸಬಲಗೊಳಿಸೋಣ.
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಅತ್ಯಗತ್ಯ ಎಂದರು. ಸಿ.ಪಿ.ಯೋಗೇಶ್ವರ್ ಮರಳಿ ಗೂಡಿಗೆ ಬಂದಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಮಾಜವಾದಿ ಪಕ್ಷ, ಬಿಎಸ್ಪಿ ಸೇರಿದಂತೆ ಎಲ್ಲಾ ಪಕ್ಷಗಳನ್ನು ನೋಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ಗೆ 16 ಸಾವಿರ ಮತಗಳು ಬಂದಿದ್ದರೆ, ಲೋಕಸಭಾ ಚುನಾವಣೆಯಲ್ಲಿ 85 ಸಾವಿರ ಮತ ಬಂದಿದ್ದವು. ಎನ್ಡಿಎ ಗೆಲುವಿಗೆ ಸಿ.ಪಿ.ಯೋಗೇಶ್ವರ್ ಮಹತ್ವದ ಪಾತ್ರ ವಹಿಸಿದ್ದರು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಕೊರತೆ ಇರಲಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಜೆಡಿಎಸ್-ಬಿಜೆಪಿ ಮೈತ್ರಿಯಿಂದಾಗಿ ಅವರಲ್ಲಿ ಸಾಕಷ್ಟು ಅಸಮಾಧಾನಗಳಿವೆ. ಜೆಡಿಎಸ್ ನಾಯಕರ ಒಂದು ಮಾತಿಗೆ ನಾಲ್ಕು ಅರ್ಥಗಳಿವೆ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು. ಯೋಗೇಶ್ವರ್ ಸೇರ್ಪಡೆಗೂ ಮುನ್ನ ನಮ ಎಲ್ಲಾ ಕಾರ್ಯಕರ್ತರ ಜೊತೆಗೂ ಚರ್ಚೆ ನಡೆಸಿ ಅಸಮಾಧಾನಗಳನ್ನು ಸರಿಪಡಿಸಿದ್ದೇನೆ. ಕೆಲವು ವೇಳೆ ಪಕ್ಷದಲ್ಲಿ ಹೊಂದಾಣಿಕೆ ಅನಿವಾರ್ಯ ಎಂದು ಹೇಳಿದರು. ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸಿ.ಪಿ.ಯೋಗೇಶ್ವರ್ ಸೇರ್ಪಡೆಯಿಂದ ಹಲವು ಕ್ಷೇತ್ರಕ್ಕೆ ಆನೆಬಲ ಬಂದಂತಾಗಿದೆ ಎಂದರು.
ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, ಸಿ.ಪಿ.ಯೋಗೇಶ್ವರ್ ಸೇರ್ಪಡೆ ಘರ್ ವಾಪಸಿ ಎಂದರು.
ಸಿ.ಪಿ.ಯೋಗೇಶ್ವರ್ ಮಾತನಾಡಿ, ಡಿ.ಕೆ.ಶಿವಕುಮಾರ್ ಜೊತೆಗೆ ರಾಜಕೀಯ ಜೀವನ ಆರಂಭಿಸಿದ್ದೆ. ಕೆಲವು ಭಿನ್ನಾಭಿಪ್ರಾಯಗಳಿಂದ ಪಕ್ಷ ಬಿಟ್ಟು ಹೋಗಿದ್ದೆ. ಮತ್ತೆ ಬಂದಿದ್ದೇನೆ. ಇನ್ನು ಮುಂದೆಯೂ ರಾಜಕೀಯವಾಗಿ ಕಾಂಗ್ರೆಸ್ ಪಕ್ಷದಲ್ಲೇ ಪೂರ್ಣಗೊಳಿಸುತ್ತೇನೆ ಎಂದರು.
ಕಳೆದ 2-3 ತಿಂಗಳಿನ ರಾಜಕೀಯ ಬೆಳವಣಿಗೆಗಳು ತಮಗೆ ಬೇಸರ ತರಿಸಿದೆ. ತಾವು ಕಟ್ಟಿದ ಮನೆಯಲ್ಲಿ ನಮಗೆ ವಾಸ ಮಾಡಲು ಕೆಲವೊಮೆ ಸಾಧ್ಯವಾಗುವುದಿಲ್ಲ. ಬಿಜೆಪಿ ಜೊತೆ ಜೆಡಿಎಸ್ ಸೇರ್ಪಡೆಯಾದ ಬಳಿಕ ನಮಗೆ ಉಸಿರುಗಟ್ಟುವಂತಾಯಿತು ಎಂದರು.
ಕಾಂಗ್ರೆಸ್ ನಾಯಕರನ್ನು ಕದ್ದುಮುಚ್ಚಿ ಭೇಟಿಯಾಗುವ ಅವಶ್ಯಕತೆ ಇರಲಿಲ್ಲ. ಬೆಳಿಗ್ಗೆ ನೇರವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಕೊನೆಗೂ ಮೂಲ ಪಕ್ಷಕ್ಕೆ ವಾಪಸ್ ಬಂದಿದ್ದೇನೆ ಎಂದು ಹೇಳಿದರು.
ಅಭಿವೃದ್ಧಿ ದೃಷ್ಟಿಯಿಂದ ತಾವು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಮುಂದಿನ ದಿನಗಲ್ಲಿ ಎಲ್ಲರೂ ಸೇರಿ ಒಟ್ಟಾಗಿ ಕೆಲಸ ನಿರ್ವಹಿಸೋಣ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಮರೆಯೋಣ ಎಂದರು. NDA ವಿರುದ್ಧ ಮುಂದಿನ ದಿನಗಳಲ್ಲಿ ನಮ ಹೋರಾಟ ತೀವ್ರವಾಗಿರುತ್ತವೆ. ನಾನು ಬಿಜೆಪಿ ಬಿಟ್ಟಿದ್ದಕ್ಕೆ ಅಲ್ಲಿನ ಕೆಲವು ನಾಯಕರಿಗೆ ನೋವಾಗಿದೆ. ಹಾಗಾಗಿ ಟೀಕೆ ಮಾಡುತ್ತಾರೆ. ನಾನು ಎಲ್ಲಿ ಇರುತ್ತೇನೋ ಅಷ್ಟೂ ದಿನ ಅಲ್ಲಿಗೆ ನಿಷ್ಠನಾಗಿರುತ್ತೇನೆ ಎಂದು ಬಿಜೆಪಿ ನಾಯಕ ಆರ್.ಅಶೋಕ್ ಅವರ ಟೀಕೆಗೆ ಪ್ರತ್ಯುತ್ತರಿಸಿದರು.
ರಾಜಕೀಯದಲ್ಲಿ ಏರಿಳಿತ ಸಹಜ. ಡಿ.ಕೆ.ಸುರೇಶ್ ಅವರನ್ನು 2-3 ಬಾರಿ ಗೆಲ್ಲಿಸಿದ್ದೇನೆ. ಒಂದು ಬಾರಿ ಸೋಲಿಸಲು ಕಾರಣನಾಗಿದ್ದೇನೆ ಎಂದರು. ಸಚಿವ ಚೆಲುವರಾಯಸ್ವಾಮಿ, ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕರಾದ ರವಿ, ಬೇಳೂರು ಗೋಪಾಲಕೃಷ್ಣ, ಡಾ.ರಂಗನಾಥ್, ಬಾಲಕೃಷ್ಣ ಸೇರಿದಂತೆ ರಾಮನಗರ ಜಿಲ್ಲೆಯ ನಾಯಕರು ಉಪಸ್ಥಿತರಿದ್ದರು.