Friday, November 22, 2024
Homeರಾಜ್ಯಪ್ರತಿದಿನ ಠಾಣೆಗೆ ಭೇಟಿ ನೀಡುವಂತೆ ಹಿರಿಯ ಪೊಲೀಸ್‌‍ ಅಧಿಕಾರಿಗಳಿಗೆ ಅಲೋಕ್‌ ಮೋಹನ್‌ ಸೂಚನೆ

ಪ್ರತಿದಿನ ಠಾಣೆಗೆ ಭೇಟಿ ನೀಡುವಂತೆ ಹಿರಿಯ ಪೊಲೀಸ್‌‍ ಅಧಿಕಾರಿಗಳಿಗೆ ಅಲೋಕ್‌ ಮೋಹನ್‌ ಸೂಚನೆ

ಬೆಂಗಳೂರು,ಜು.17- ಹಿರಿಯ ಪೊಲೀಸ್‌‍ ಅಧಿಕಾರಿಗಳು ಪ್ರತಿದಿನ ಕನಿಷ್ಠ ಪಕ್ಷ ಒಂದು ಠಾಣೆಗೆ ಭೇಟಿ ನೀಡಬೇಕು, ಘೋರ ಅಪರಾಧಗಳು ನಡೆದ ಸಂದರ್ಭದಲ್ಲಿ ತಕ್ಷಣ ಆ ಸ್ಥಳಕ್ಕೆ ಭೇಟಿ ನೀಡಬೇಕೆಂದು ರಾಜ್ಯದ ಪೊಲೀಸ್‌‍ ಮಹಾ ನಿರ್ದೇಶಕರಾದ ಡಾ.ಅಲೋಕ್‌ ಮೋಹನ್‌ ಅವರು ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಡಿಜಿ ಕಚೇರಿಯಲ್ಲಿ ಇತ್ತೀಚಗೆ ನಡೆದ ಹಿರಿಯ ಪೊಲೀಸ್‌‍ ಅಧಿಕಾರಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರು ಪಾಲ್ಗೊಂಡು ಕೆಲವು ಸೂಚನೆಗಳನ್ನು ನೀಡಿದ್ದರು.ಈ ಹಿನ್ನೆಲೆಯಲ್ಲಿ ಡಿಜಿಯವರು 20 ಅಂಶಗಳ ಪಟ್ಟಿ ಮಾಡಿ ಹಿರಿಯ ಅಧಿಕಾರಿಗಳಿಗೆ ಕಳುಹಿಸಿ ಅವುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ತಿಳಿಸಿದ್ದಾರೆ.

ಎಸ್‌‍ಪಿ, ಡಿಸಿಪಿ, ಐಜಿಪಿ, ಡಿಐಜಿ, ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು ಪ್ರತಿದಿನ ಕನಿಷ್ಟ ಒಂದು ಠಾಣೆಗೆ ಭೇಟಿ ನೀಡಿ, ಅಲ್ಲಿನ ಕಾರ್ಯನಿರ್ವಹಣೆಯನ್ನು ಪರಿಶೀಲಿಸಬೇಕು. ಪೊಲೀಸರು ನಾಗರಿಕ ಕೇಂದ್ರಿತ ವಿಧಾನದಲ್ಲಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

ಕ್ಲಬ್‌ಗಳು, ಜೂಜು, ಮಟ್ಕಾ ಸೇರಿದಂತೆ ಎಲ್ಲಾ ಸಂಘಟಿತ ಅಪರಾಧಗಳನ್ನು ತಕ್ಷಣವೇ ನಿಲ್ಲಿಸಬೇಕು. ಅಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ಬಗ್ಗೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಶಾಲೆ ಮತ್ತು ಕಾಲೇಜುಗಳಿಗೆ ಭೇಟಿ ನೀಡಬೇಕು.

ರಾಜ್ಯವನ್ನು ಮಾದಕದ್ರವ್ಯ ಮುಕ್ತವನ್ನಾಗಿ ಮಾಡಲು ಪ್ರತಿದಿನವೂ ಆ ಬಗ್ಗೆ ತೀವ್ರ ಕಾರ್ಯಾಚರಣೆ ನಡೆಸಬೇಕು. ಎಲ್ಲಾ ಪೊಲೀಸ್‌‍ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇ-ಬೀಟ್‌ ಅಪ್ಲಿಕೇಷನ್‌ ನಿರ್ವಹಣೆಯನ್ನು ಅರಿತು ಅರ್ಥಪೂರ್ಣವಾಗಿ ಅನುಷ್ಠಾನ ಮಾಡಬೇಕು.
ಪೊಲೀಸ್‌‍ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಿಗ್ಗೆ 9 ರಿಂದ 11 ರವರೆಗೆ ಮತ್ತು ಸಂಜೆ 6 ರಿಂದ 9 ರವರೆಗೆ ಪೊಲೀಸ್‌‍ ಸಮವಸ್ತ್ರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ಮಾಡಬೇಕು. ಶಾಲಾ-ಕಾಲೇಜು ಆರಂಭ ಹಾಗೂ ಮುಕ್ತಾಯದ ಸಂದರ್ಭದಲ್ಲಿ ಈವ್‌-ಟೀಸಿಂಗ್‌ ನಡೆಯದಂತೆ ನೋಡಿಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳ ಸುತ್ತ ಮಾದಕದ್ರವ್ಯ ಮಾರಾಟ ತಡೆಯುವ ರೀತಿಯಲ್ಲಿ ಬೀಟ್‌ಗಳನ್ನು ನಿರ್ವಹಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಠಾಣೆಯಲ್ಲಿ ಸ್ವೀಕರಿಸುವ ಎಲ್ಲಾ ದೂರುಗಳನ್ನು ಕಾನೂನು ಪ್ರಕಾರ ದಾಖಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು.ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಡೆಗಟ್ಟುವ ನಿಟ್ಟನಲ್ಲಿ ರಸ್ತೆ ಬದಿ ನಿಲ್ಲಿಸಿದ ಎಲ್ಲಾ ವಾಹನಗಳು ತಮ್ಮ ಪಾರ್ಕಿಂಗ್‌ ದೀಪಗಳನ್ನು ಆನ್‌ ಮಾಡಿರುವುದನ್ನು ಹಾಗೂ ರಸ್ತೆಯಿಂದ ಸಾಕಷ್ಟು ದೂರ ನಿಲ್ಲಿಸಿರುವುದನ್ನು ಗಸ್ತು ತಿರುಗುವ ವಾಹನಗಳು ಖಚಿತಪಡಿಸಿಕೊಳ್ಳಬೇಕು.

ಜಿಲ್ಲಾ ಮತ್ತು ನಗರಮಟ್ಟದ ಪೊಲೀಸ್‌‍ ಠಾಣೆಗಳಲ್ಲಿ ನಿಯಮಿತವಾಗಿ ಶಾಂತಿ ಸಮಿತಿ ಸಭೆಗಳನ್ನು ಆಯೋಜಿಸುವ ಮೂಲಕ ಎಲ್ಲಾ ಸಮುದಾಯದವರು ಉತ್ತಮ್ಮವಾದ ಬಾಂಧವ್ಯವನ್ನು ಕಾಪಾಡಿಕೊಳ್ಳಬೇಕು.

ಪಿಎಸ್‌‍ಐ ಮಟ್ಟದಿಂದ ಎಸ್ಪಿ-ಡಿಸಿಪಿವರೆಗಿನ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಜನಸ್ಪಂದನ ಸಭೆಗಳನ್ನು ನಿರಂತರವಾಗಿ ನಡೆಸುವ ಮೂಲಕ ಸಾರ್ವಜನಿಕರ ಕುಂದುಕೊರತೆಗಳನ್ನು ನಿಯಮಿತವಾಗಿ ಪರಿಹರಿಸುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಅವರು ಸೂಚಿಸಿದ್ದಾರೆ.
ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ ಪೊಲೀಸ್‌‍ ಠಾಣೆಗಳಲ್ಲಿ ಕಾಣೆಯಾದ ಹೆಣ್ಣುಮಕ್ಕಳು, ಮಹಿಳೆಯರ ಪತ್ತೆ ಕಾರ್ಯಕ್ಕೆ ಚಾಲನೆ ನೀಡಬೇಕು. ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಿಸುವ ಕೆಎಸ್‌‍ಆರ್‌ಪಿ ಪ್ಲಟೂನ್‌ಗಳನ್ನು ನಿಯೋಜಿಸುವ ಮೊದಲು ಗರಿಷ್ಠ ಸಂಖ್ಯೆಯ ಡಿ.ಎ.ಆರ್‌/ಸಿ.ಎ.ಆರ್‌ ಘಟಕದ ಸಿಬ್ಬಂದಿ ನಿಯೋಜಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಎಸ್ಪಿಗಳು ತಮ್ಮ ವ್ಯಾಪ್ತಿಯಲ್ಲಿರುವ ಕೆಎಸ್‌‍ಆರ್‌ಪಿ ಮತ್ತು ಅಗತ್ಯ ಸಂಸ್ಥೆಗಳಿಗೆ ಆಗಾಗ್ಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಬೇಕು. ಅಲ್ಲದೆ ಜಿಲ್ಲಾ ಎಸ್ಪಿಗಳು, ಡಿಸಿಪಿಗಳು ಕಾರಾಗೃಹಗಳ ಮೇಲೆ ದಿಢೀರ್‌ ತಪಾಸಣೆ ನಡೆಸಬೇಕು ಹಾಗೂ ತಲೆಮರೆಸಿಕೊಂಡಿರುವ ಖೈದಿಗಳ ಬಂಧನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.

ದ್ವೇಷ ಭಾಷಣ ಮತ್ತು ಪ್ರಚೋದನಕಾರಿ ಘೋಷಣೆಗಳನ್ನು ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಲೋಕ್‌ ಮೋಹನ್‌ ಅವರು ಹಿರಿಯ ಪೊಲೀಸ್‌‍ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

RELATED ARTICLES

Latest News