ಬೆಂಗಳೂರು, ಏ.2- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಭದ್ರತೆ ಹೆಚ್ಚಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹಾಗೂ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ದಿನದ 24 ಗಂಟೆಯೂ ಈ ಚೆಕ್ ಪೋಸ್ಟ್ ಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಚೆಕ್ ಪೋಸ್ಟ್ ಳಲ್ಲಿ ಪೊಲೀಸರ ಜೊತೆಗೆ ಆರ್ಟಿಒ ಅಬಕಾರಿ, ಕಂದಾಯ ಹಾಗೂ ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಇರುತ್ತಾರೆ ಎಂದು ಅವರು ಹೇಳಿದರು.ಈಗಾಗಲೇ ಚುನಾವಣಾ ಬಂದೋಬಸ್ತ್ಗಾಗಿ 15 ಕಂಪನಿ ಕೇಂದ್ರ ಪಡೆಗಳು ಬಂದಿವೆ. ಅವುಗಳನ್ನು ಸ್ಥಳೀಯ ಪೊಲೀಸರ ಜೊತಗೆ ವಿವಿಧ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಇನ್ನಷ್ಟು ಕೇಂದ್ರ ಪಡೆಯ ಕಂಪನಿಗಳು ರಾಜ್ಯಕ್ಕೆ ಆಗಮಿಸಲಿವೆ ಎಂದು ಅವರು ತಿಳಿಸಿದರು.
ಎಲ್ಲಾ ರೌಡಿಗಳ ಮನೆಗಳ ಮೇಲೆ ಈಗಾಗಲೇ ನಮ್ಮ ಪೊಲೀಸರು ದಾಳಿ ಮಾಡಿ, ಅವರಿಗೆ ಎಚ್ಚರಿಕೆ ನೀಡಿ ಬಾಲ ಬಿಚ್ಚದಂತೆ ತಾಕೀತು ಮಾಡಿದ್ದಾರೆ. ರೌಡಿಗಳು ರಾಜಕಾರಣಿಗಳ ಜೊತೆಯಿರಲಿ ಅಥವಾ ಎಲ್ಲೇ ಇರಲಿ, ಶಾಂತಿ ಮತ್ತು ಸುವ್ಯವಸ್ಥೆಗೆ ದಕ್ಕೆ ತಂದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರೌಡಿಗಳು ಅಥವಾ ಬೇರೆ ಯಾರೇಯಾಗಲಿ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದರೆ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.