ಮೈಸೂರು, ಜು.7- ರಸ್ತೆ ಬದಿ ನಿಲ್ಲಿಸಲಾಗಿದ್ದ ಅಂಬ್ಯುಲೆನ್ಸ್ ಸುಟ್ಟು ಕರಕಲಾಗಿರುವ ಘಟನೆ ನಗರದ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ದಾಸಪ್ಪ ವೃತ್ತದ ಬಳಿ ನಡೆದಿದೆ.
108 ತುರ್ತುವಾಹನವನ್ನು ದಾಸಪ್ಪ ವೃತ್ತದ ಬಳಿ ನಿಲ್ಲಿಸಲಾಗಿದ್ದು, ಇಂಜಿನ್ ಹೆಚ್ಚು ಬಿಸಿಯಾದ ಹಿನ್ನೆಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ದೇವರಾಜ ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ಮಮತಾ ಅವರು ಸ್ಥಳಕ್ಕೆ ದೌಡಾಯಿಸಿ ತುರ್ತು ವಾಹನದಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಹೊರತೆಗೆದಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ಘಟನೆ ನಡೆದ ಸಮೀಪ ಪೆಟ್ರೋಲ್ ಬಂಕ್ ಇದ್ದು, ಬೆಂಕಿಯ ಕೆನ್ನಾಲಿಗೆ ಬಂಕ್‌ಗೆ ಆವರಿಸಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಪೊಲೀಸರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.