ನವದೆಹಲಿ, ಮಾ.18: ಡೊನಾಲ್ಡ್ ಟ್ರಂಪ್ ಅವರ ಅಮೆರಿಕ ಮೊದಲು ನೀತಿಯನ್ನು ಅಮೆರಿಕ ಮಾತ್ರ ಎಂದು ತಪ್ಪಾಗಿ ಅರ್ಥೈಸಬಾರದು ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ತುಳಸಿ ಗಬ್ಬಾರ್ಡ್ ಹೇಳಿದ್ದಾರೆ.
ರೈಸಿನಾ ಸಂವಾದದಲ್ಲಿ ಮಾತನಾಡಿದ ಅವರು, ಭಾರತ-ಯುಎಸ್ ಸಂಬಂಧವನ್ನು ವಿಸ್ತರಿಸುವಲ್ಲಿ ದೊಡ್ಡ ಅವಕಾಶ ಇದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಕಳೆದ ತಿಂಗಳು ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಭೆಯಲ್ಲಿ ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವ ದೃಷ್ಟಿಕೋನವನ್ನು ಮಂಡಿಸಿದರು.
ಟ್ರಂಪ್ ಅವರ ಅಮೆರಿಕ ಮೊದಲು ನೀತಿಯಂತೆಯೇ, ಪ್ರಧಾನಿ ಮೋದಿ ಭಾರತ ಮೊದಲು ವಿಧಾನಕ್ಕೆ ಬದ್ಧರಾಗಿದ್ದಾರೆ ಎಂದು ಗಬ್ಬಾರ್ಡ್ ಹೇಳಿದರು. ಅಮೆರಿಕ ಮೊದಲು ಎಂದರೆ ಅಮೆರಿಕ ಮಾತ್ರ ಎಂದು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಅವರು ಹೇಳಿದರು.ನಮ್ಮ ಎರಡೂ ದೇಶಗಳ ನಡುವಿನ ಈ ಪಾಲುದಾರಿಕೆ ಮತ್ತು ಸ್ನೇಹವು ಬೆಳೆಯುತ್ತಲೇ ಇರುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದರು.
ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಮೋದಿ-ಟ್ರಂಪ್ ಭೇಟಿಯನ್ನು ಇಬ್ಬರು ಹಳೆಯ ಸ್ನೇಹಿತರ ಮರುಸಂಪರ್ಕ ಎಂದು ಗಬ್ಬಾರ್ಡ್ ಬಣ್ಣಿಸಿದರು. ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆಯ ಬಗ್ಗೆ ಮಾತನಾಡಿದ ಗಬ್ಬಾರ್ಡ್, ಅಧ್ಯಕ್ಷ ಟ್ರಂಪ್ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧರಾಗಿದ್ದಾರೆ ಎಂದು ಹೇಳಿದರು.ಟ್ರಂಪ್ ಅಚಲ ಸ್ವಭಾವದವರು ಎನ್ನುವುದನ್ನು ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.