ನವದೆಹಲಿ, ಮಾ. 22: ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸುವವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಸಭೆಯಲ್ಲಿ ತೀಕ್ಷ್ಯ ತಿರುಗೇಟು ನೀಡಿದ್ದಾರೆ.
ಭಾಷೆಯ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಕೆಲಸ ಮಾಡಬಾರದು ಎಂದ ಅವರು, ಪ್ರಾದೇಶಿಕ ಭಾಷೆಗಳ ಉತ್ತೇಜನಕ್ಕಾಗಿ ಡಿಸೆಂಬರ್‌ನಿಂದ ರಾಜ್ಯಗಳ ಜತೆ ಅಲ್ಲಿನ ಪ್ರಾದೇಶಿಕ ಭಾಷೆಯಲ್ಲೇ ಪತ್ರ ವ್ಯವಹಾರ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಕರ್ನಾಟಕದ ಜತೆ ಕನ್ನಡದಲ್ಲಿ, ತಮಿಳುನಾಡು ಸರ್ಕಾರದ ಜತೆ ತಮಿಳು ಹಾಗೂ ಇತರ ರಾಜ್ಯಗಳ ಜತೆ ಅಲ್ಲಿನ ಭಾಷೆಯಲ್ಲೇ ಪತ್ರ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ತಮ್ಮ ಭ್ರಷ್ಟಾಚಾರವನ್ನು ಮರೆಮಾಚಲು ಭಾಷೆಯ ಹೆಸರಿನಲ್ಲಿ ರಾಜಕೀಯ ನಡೆಸುವವರಿಗೆ ಇದು ಬಲವಾದ ಪ್ರತ್ಯುತ್ತರವಾಗಿದೆ ಎಂದು ಅಮಿತ್ ಶಾ ಹೇಳಿದರು. ಬಿಜೆಪಿ ದಕ್ಷಿಣ ಭಾರತದ ಭಾಷೆಗಳನ್ನು ವಿರೋಧಿಸುತ್ತದೆ ಎಂಬ ಆರೋಪಗಳನ್ನು ತಿರಸ್ಕರಿಸಿದ ಅಮಿತ್ ಶಾ, ಅವರು ನಾವು ದಕ್ಷಿಣದ ಭಾಷೆಗಳನ್ನು ವಿರೋಧಿಸುತ್ತೇವೆಯೇ? ಇದು ಹೇಗೆ ಸಾಧ್ಯ? ನಾನು ಗುಜರಾತ್‌ನಿಂದ ಬಂದವನು. ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು. ಹೀಗಿದ್ದಾಗ ನಾವು ಪ್ರಾದೇಶಿಕ ಭಾಷೆಗಳನ್ನು ಹೇಗೆ ವಿರೋಧಿಸಬಹುದು ಎಂದು ಪ್ರಶ್ನಿಸಿದರು.
ಭಾಷೆಯ ಹೆಸರಿನಲ್ಲಿ ದೇಶವನ್ನು ವಿಭಜಿಸುವವರು ತಮ್ಮ ಕಾರ್ಯಸೂಚಿಯನ್ನು ಜಾರಿಗೊಳಿಸಲು ಬಿಡಬಾರದು. ಅಧಿಕೃತ ಭಾಷಾ ಇಲಾಖೆಯ ಅಡಿಯಲ್ಲಿ, ನರೇಂದ್ರ ಮೋದಿ ಸರ್ಕಾರವು ಎಲ್ಲಾ ಭಾರತೀಯ ಭಾಷೆಗಳ ಬಳಕೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ.ಅದಕ್ಕಾಗಿ ತಮಿಳು, ತೆಲುಗು, ಮರಾಠಿ, ಗುಜರಾತಿ, ಪಂಜಾಬಿ, ಅಸ್ಸಾ ಮಿ, ಬಂಗಾಳಿ ಸೇರಿದಂತೆ ಎಲ್ಲಾ ಭಾಷೆಗಳಿಗಾಗಿ ಭಾರತೀಯ ಅಧಿಕೃತ ಭಾಷಾ ಇಲಾಖೆಯನ್ನು ಸ್ಥಾಪಿಸಿದೆ ಎಂದು ಶಾ ಹೇಳಿದರು.
ಹಿಂದಿ ಎಲ್ಲಾ ಭಾರತೀಯ ಭಾಷೆಗಳಿಗೆ ಒಡನಾಡಿಯಾಗಿದೆ. ಹಿಂದಿ ಎಲ್ಲಾ ಭಾರತೀಯ ಭಾಷೆಗಳನ್ನು ಬಲಪಡಿಸುತ್ತದೆ ಮತ್ತು ಎಲ್ಲಾ ಭಾರತೀಯ ಭಾಷೆಗಳು ಹಿಂದಿಯನ್ನು ಬಲಪಡಿಸುತ್ತವೆ. ಇಲ್ಲಿ ಭಾಷೆಗಳ ನಡುವೆ ಕೊಡು ಕೊಳ್ಳುವಿಕೆ ಇದೆ ಎಂದಿದ್ದಾರೆ. ಭ್ರಷ್ಟಾಚಾರ ಮರೆಮಾಚಲು ಭಾಷೆಯನ್ನು ದಾಳವಾಗಿ ಬಳಸುವವರ ಬಂಡವಾಳವನ್ನು ಹಳ್ಳಿ ಹಳ್ಳಿಗೆ ತೆರಳಿ ಬಯಲಿಗೆಳೆಯುತ್ತೇವೆ ಎಂದು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದರು.
ನಿಮಗೆ (ಡಿಎಂಕೆ) ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳನ್ನು ತಮಿಳು ಭಾಷೆಗೆ ಭಾಷಾಂತರಿಸಲು ಧೈರ್ಯವಿಲ್ಲ ಎಂದೂ ಹೇಳಿದರು. ಜತೆಗೆ, ನಾವು ಸರ್ಕಾರ ರಚಿಸಿದಾಗ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ ಗಳನ್ನು ತಮಿಳು ಭಾಷೆಗೆ ಭಾಷಾಂತರಿಸುತ್ತೇವೆ ಎಂದೂ ಹೇಳಿದರು.