ಬೆಂಗಳೂರು, ಮಾ.6- ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಬುಗಿಲೆದ್ದಿರುವ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಳೆ ಬೆಂಗಳೂರಿಗೆ ಆಗಮಿಸುತ್ತಿರುವುದು ಭಾರೀ ಕುತೂಹಲ ಕೆರಳಿಸಿದೆ. ಮೇಲ್ನೋಟಕ್ಕೆ ಇದೊಂದು ಖಾಸಗಿ ಕಾರ್ಯಕ್ರಮ ಎಂದು ಹೇಳಲಾಗುತ್ತಿದ್ದರೂ ಬಿಜೆಪಿಯೊಳಗೆ ನಡೆಯುತ್ತಿರುವ ಬಣ ಬಡಿದಾಟಕ್ಕೆ ಅಂಕುಶ ಹಾಕುವ ಸಾಧ್ಯತೆ ಇದೆ.
ಅಮಿತ್ ಷಾ ಭೇಟಿಯ ವೇಳೆ ರಾಜ್ಯದ ಯಾವುದೇ ಬಿಜೆಪಿ ನಾಯಕರನ್ನು ಭೇಟಿಯಾಗುವುದಿಲ್ಲ ಎಂದು ಹೇಳಲಾಗಿದೆ. ಆಸ್ಪತ್ರೆ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಲಿರುವ ಅವರು, ತಮಿಳುನಾಡಿನಿಂದ ನಗರಕ್ಕೆ ಭೇಟಿ ನೀಡಲಿದ್ದಾರೆ. ನೆಲಮಂಗಲದಲ್ಲಿ ವಿಶ್ವತೀರ್ಥ ಮಹಾಸ್ವಾಮಿಗಳು ಸ್ಥಾಪಿಸಿದ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ.
ರಾಜ್ಯ ಬಿಜೆಪಿಯಲ್ಲಿರುವ ಭಿನ್ನಮತದ ಕುರಿತು ಬೆಂಗಳೂರು ಪ್ರವಾಸದ ವೇಳೆ ಚರ್ಚೆ ನಡೆಸಲಾಗುತ್ತದೆಯೋ ಎನ್ನುವ ಕುತೂಹಲ ಮೂಡಿದೆ. ಸದ್ಯ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಬೂದಿ ಮುಚ್ಚಿದ ಕೆಂಡದ ಹಾಗಿದೆ.
ರಾಜ್ಯ ಬಿಜೆಪಿಯಲ್ಲಿ ಬಣ ಗುದ್ದಾಟ ಮತ್ತಷ್ಟು ತೀವ್ರಗೊಂಡಿದೆ. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಭುಗಿಲೆದ್ದ ಭಿನ್ನಮತ ಮತ್ತೊಂದು ಹೆಜ್ಜೆ ಮುಂದುವರಿದಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರುದ್ಧ ಪಕ್ಷದಲ್ಲಿ ಅವಿರೋಧಿ ಗುಂಪು ಬಲ ವೃದ್ಧಿಸಿಕೊಳ್ಳುತ್ತಿದ್ದು, ಯತ್ನಾಳ್ ಕ್ಯಾಂಪ್ ವಾದಕ್ಕೆ ಡಾ. ಕೆ ಸುಧಾಕರ್ ಕೂಡಾ ಧ್ವನಿಗೂಡಿಸಿದ್ದಾರೆ. ಈ ಮೂಲಕ ವಿಜಯೇಂದ್ರ ವಿರುದ್ಧದ ರೆಬೆಲ್ ಹೋರಾಟಕ್ಕೆ ಬಲ ಬಂದಿದೆ.
ಆರಂಭದಲ್ಲಿ ವಿಜಯೇಂದ್ರ ವಿರುದ್ಧ ಯತ್ನಾಳ್ ಒಬ್ಬರೇ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದರು. ಅವರಿಗೆ ನೇರ ಬೆಂಬಲಕ್ಕೆ ಯಾರೂ ಇರಲಿಲ್ಲ. ಆದರೆ ದಿನಬರುತ್ತಾ ಯತ್ನಾಳ್ ತಂಡ ವಿಸ್ತರಣೆಯಾಗತೊಡಗಿತ್ತು. ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ, ಬಿಪಿ ಹರೀಶ್ ಹೀಗೆ ತಂಡದ ಸಂಖ್ಯೆ ಹೆಚ್ಚಳವಾಗತೊಡಗಿತ್ತು.
ಆರಂಭದಲ್ಲಿ ವಿಜಯೇಂದ್ರ ವಿರುದ್ಧ ಯತ್ನಾಳ್ ಒಬ್ಬರೇ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದರು. ಅವರಿಗೆ ನೇರ ಬೆಂಬಲಕ್ಕೆ ಯಾರೂ ಇರಲಿಲ್ಲ. ಆದರೆ ದಿನಬರುತ್ತಾ ಯತ್ನಾಳ್ ತಂಡ ವಿಸ್ತರಣೆಯಾಗತೊಡಗಿತ್ತು. ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ, ಬಿಪಿ ಹರೀಶ್ ಹೀಗೆ ತಂಡದ ಸಂಖ್ಯೆ ಹೆಚ್ಚಳವಾಗತೊಡಗಿತ್ತು.
ಏನಾಗಲಿದೆ ಪರಿಣಾಮ?: ಯತ್ನಾಳ್ ನೇತೃತ್ವದ ರೆಬೆಲ್ ಟೀಂ ಹಾಗೂ ಇದೀಗ ಡಾ. ಕೆ ಸುಧಕಾರ್ ಆರೋಪ ಇರುವುದು ವಿಜಯೇಂದ್ರ ನಡವಳಿಕೆಯ ಕುರಿತಾಗಿ. ವಿಜಯೇಂದ್ರ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವಾಗ ಪಕ್ಷದ ಹಿರಿಯರನ್ನು ಗಣನೆಗೆ ತಗೆದುಕೊಳ್ಳುವುದಿಲ್ಲ ಎಂಬುವುದು ಅವರ ಆರೋಪವಾಗಿತ್ತು..
ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಬೇಕು ಎಂಬುವುದು ಬೇಡಿಕೆಯಾಗಿದೆ. ಅಲ್ಲದೆ ಭ್ರಷ್ಟಚಾರ, ಹೊಂದಾಣಿಕೆಯ ರಾಜಕಾರಣದ ಆರೋಪಗಳು ಅವರ ಮೇಲಿದೆ. ಹೀಗಿದ್ದರೂ ಹೈಕಮಾಂಡ್ ವಿಜಯೇಂದ್ರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಇದೆ.
ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಆಗಿರುವ ನೇಮಕಾತಿಯಲ್ಲೂ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವ ಸುಳಿವು ಸ್ಪಷ್ಟವಾಗಿ ಕಾಣಸಿಗುತ್ತಿದೆ. 23 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಪಟ್ಟಿ ಘೋಷಣೆಯಾಗಿದ್ದು, ಇದರಲ್ಲಿ ಬಹುತೇಕ ವಿಜಯೇಂದ್ರ ಬಣದವರೇ
ಇದ್ದಾರೆ. ಹಾಗಾಗಿ ಅಧ್ಯಕ್ಷರಾಗಿ ಮುಂದುವರಿಯಲು ವಿಜಯೇಂದ್ರ ಅವರಿಗೆ ತೊಡಕಾಗುವ ಸಾಧ್ಯತೆ ಇಲ್ಲ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಸಲಾಗಿದೆ.
ಈ ಸಭೆಯಲ್ಲಿ ಯತ್ನಾಳ್ ತಂಡ ಚರ್ಚೆ ನಡೆಸಿ ಮುಂದಿನ ಹೆಜ್ಜೆ ಇಡಲು ತೀರ್ಮಾನ ಮಾಡಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿರುವ ಬಣ ಕಿತ್ತಾಟ ಮತ್ತಷ್ಟು ಮುಂದುವರಿಸುವ ಸುಳಿವು ದಟ್ಟವಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಅಮಿತ್ ಷಾ ಪರಿಹಾರ ರೂಪಿಸಲಿದ್ದಾರೆ ಎಂಬುದು ಯಕ್ಷ ಪ್ರಶ್ನೆ.