ಬೆಂಗಳೂರು,ಫೆ.9- ಕೇಂದ್ರ ಗೃಹ ಸಚಿವ ಅಮಿತ್ ಶಾನಾಳೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಜೊತೆಗೆ ರಾಜ್ಯ ಬಿಜೆಪಿ ನಾಯಕರ ಜೊತೆಗೂ ಮಹತ್ವದ ಸಭೆಗಳನ್ನು ನಡೆಸಲಿದ್ದಾರೆ. ವಿಧಾನಸಭೆ ಚುನಾವಣೆ ಬಳಿಕ ಅಮಿತ್ ಷಾ ಅವರ ಮೊದಲ ಭೇಟಿ ಇದಾಗಿದೆ. ಟಿಕೆಟ್ ವಿಚಾರವಾಗಿ ಸೃಷ್ಟಿಯಾಗಿರುವ ಗೊಂದಲದ ಹಿನ್ನೆಲೆಯಲ್ಲಿ ಚರ್ಚೆ ನಡೆ ಯುವ ಸಾಧ್ಯತೆ ಇದೆ.
ನಾಳೆ ರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಅಮಿತ್ ಷಾ ನೇರವಾಗಿ ಮೈಸೂರಿಗೆ ಹೋಗಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಫೆ.11ರಂದು ಬೆಳಗ್ಗೆ 11 ಗಂಟೆಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ.
ಬಳಿಕ ಅಲ್ಲಿಂದ 11.45ಕ್ಕೆ ಹೆಲಿಕಾಪ್ಟರ್‍ನಲ್ಲಿ ಸುತ್ತೂರು ಗ್ರಾಮಕ್ಕೆ ಪ್ರಯಾಣ ಬೆಳಸಲಿದ್ದು, ಸುತ್ತೂರು ಜಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಅದೇ ದಿನ ಮಧ್ಯಾಹ್ನ 1.30ಕ್ಕೆ ಸುತ್ತೂರು ಮಠದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಅದನ್ನು ಮುಗಿಸಿಕೊಂಡು ಮಧ್ಯಾಹ್ನ 2.30ಕ್ಕೆ ರಾಡಿಸನ್ ಬ್ಲೂ ಹೋಟೆಲ್‍ಗೆ ಆಗಮಿಸಲಿದ್ದಾರೆ. ನಂತರ ಮಧ್ಯಾಹ್ನ 2.40ಕ್ಕೆ ಕೇಂದ್ರ ಸಚಿವವರು ಸಭೆ ನಿಗದಿಪಡಿಸಿದ್ದು, ಸುಮಾರು 2 ಗಂಟೆ ಕಾಲ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ ಹೇಳಲಾಗಿದೆ.
ಲಾಲೂ ಪತ್ನಿ, ಪುತ್ರಿಯರಿಗೆ ಮಧ್ಯಂತರ ಜಾಮೀನು ಮಂಜೂರು
ಈ ಸಭೆ ಮೂಲಕ ಚುನಾವಣಾ ಸಿದ್ಧತೆಗೆ ಅಮಿತ್ ಶಾ ಚಾಲನೆ ನೀಡಲಿದ್ದಾರಾ?, ಸುತ್ತೂರು ಜಾತ್ರಾ ಮಹೋತ್ಸವದ ನೆಪದಲ್ಲಿ ಚುನಾವಣೆಗೆ ರಣತಂತ್ರ ಹೆಣೆಯಲು ಬಿಜೆಪಿ ಚಾಣಕ್ಯ ಆಗಮಿಸಿದರಾ? ಇಂತಹ ಹತ್ತು ಹಲವು ಪ್ರಶ್ನೆಗಳು ಇದೀಗ ರಾಜಕೀಯ ಪಡಸಾಲೆಯಲ್ಲಿ ಪ್ರಾರಂಭವಾಗಿದೆ. ಅಲ್ಲದೆ ಲೋಕಸಭೆ ಕ್ಲಸ್ಟರ್ ಮಟ್ಟದ ಸಭೆಗಳನ್ನು ನಡೆಸಲಿದ್ದಾರೆ. ನಾಲ್ಕು ಲೋಕಸಭೆ ಕ್ಷೇತ್ರಗಳನ್ನು ಒಳಗೊಂಡ ಕ್ಲಸ್ಟರ್‍ಗಳ ಸಭೆ ನಡೆಸಲಿದ್ದು, ಕೆಲವೊಂದು ಪ್ರಮುಖ ತಂತ್ರಗಾರಿಕೆಗಳ ಬಗ್ಗೆ ಚರ್ಚೆ ನಡೆಸಿ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಬಳಿಕ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ.
ಅಮಿತ್ ಶಾ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಆಕಾಂಕ್ಷಿಗಳು ಅವರನ್ನು ಭೇಟಿ ಮಾಡುವ ಸಾಧ್ಯತೆಯೂ ಇದೆ. ಈಗಾಗಲೇ ಹಲವು ಆಕಾಂಕ್ಷಿಗಳು ಟಿಕೆಟ್‍ಗಾಗಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದೆಹಲಿ ಪ್ರವಾಸ ಮಾಡುತ್ತಿದ್ದಾರೆ. ಹಾವೇರಿ ಸೇರಿದಂತೆ ಕೆಲವೊಂದು ಕ್ಷೇತ್ರಗಳ ಟಿಕೆಟ್ ಫೈಟ್ ತೀವ್ರಗೊಂಡಿದೆ.
ಇನ್ನು ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿಯಾದರೂ ರಾಜ್ಯದ ಕೆಲವು ನಾಯಕರಿಗೆ ಅಸಮಾಧಾನವಿದೆ. ಮೈತ್ರಿಯ ಲಾಭ-ನಷ್ಟದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಎಷ್ಟು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡಬೇಕು ಹಾಗೂ ಯಾವ್ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಅಮಿತ್ ಶಾ ಜೊತೆಗಿನ ಸಭೆಯಲ್ಲಿ ಈ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ.