ಬೆಂಗಳೂರು, ಡಿ.19- ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಆಡಳಿತ ಪಕ್ಷದ ಶಾಸಕರೇ ಪ್ರತಿಭಟನೆ ನಡೆಸಿದ್ದರಿಂದ ಕೆಲ ಕಾಲ ಕಲಾಪ ಮುಂದೂಡಬೇಕಾದ ಪ್ರಸಂಗ ನಡೆಯಿತು. ಸದನ ಮುಂದೂಡಿಕೆಯಾದ ನಂತರವೂ ಪ್ರತಿಭಟನೆ ಮುಂದುವರೆದಿದ್ದು ವಿಶೇಷವಾಗಿತ್ತು.
ನಿಯಮ 69ರ ಅಡಿ ಸಾರ್ವಜನಿಕ ಮಹತ್ವದ ವಿಷಯವನ್ನಾಗಿ ಬಳ್ಳಾರಿ ಜಿಲ್ಲೆಯಲ್ಲಿನ ಬಾಣಂತಿಯರ ಸಾವಿನ ಪ್ರಕರಣದ ಮೇಲೆ ನಡೆದ ಚರ್ಚೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸುದೀರ್ಘ ಉತ್ತರ ನೀಡಿದರು.
ಬಳಿಕ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕೆಲ ಸ್ಪಷ್ಟನೆಗಳನ್ನು ಕೇಳುತ್ತಿದ್ದರು. ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ, ಸಚಿವರು ಸಮರ್ಥವಾಗಿ ಉತ್ತರ ನೀಡಿದ್ದಾರೆ. ಮತ್ತೊಂದು ಮಹತ್ವದ ವಿಚಾರ ಇಲ್ಲಿ ಚರ್ಚೆಯಾಗಬೇಕು, ನಿರ್ಣಯವೂ ಅಂಗೀಕಾರಗೊಳ್ಳಬೇಕು ಎಂದು ವಿಷಯ ಪ್ರಸ್ತಾಪಿಸಿದರು.
ಕಾಂಗ್ರೆಸ್‌ನ ಎಲ್ಲಾ ಶಾಸಕರು ಇದಕ್ಕೆ ಬೆಂಬಲ ವ್ಯಕ್ತ ಪಡಿಸಿದರು. ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ತಮ ಸ್ಥಾನದಿಂದಲೇ ಪ್ರದರ್ಶನ ಮಾಡಿ ಪ್ರತಿಭಟನೆ ವ್ಯಕ್ತ ಪಡಿಸಿದರು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.ಸದನದ ಒಳಗೆ ಯಾವುದೇ ಭಿತ್ತಿಪತ್ತ ಹಾಗೂ ಭಾವಚಿತ್ರಗಳನ್ನು ಪ್ರದರ್ಶನ ಮಾಡುವಂತಿಲ್ಲ ಎಂದು ಸಭಾಧ್ಯಕ್ಷರು ತಿಳಿ ಹೇಳಿದರು.
ಆದರೆ ಕಾಂಗ್ರೆಸ್ ಶಾಸಕರು ಇದಕ್ಕೆ ಕಿವಿಗೊಡದೆ ಪ್ರತಿಭಟನೆಯನ್ನು ಮುಂದುವರೆಸಿದರು. ಗೊಂದಲದ ವಾತಾವರಣ ಮುಂದುವರೆದಾಗ ಸಭಾಧ್ಯಕ್ಷರು 10 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದರು.
ನಂತರವೂ ಕಾಂಗ್ರೆಸ್ ಶಾಸಕರು ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ಮುಂದುವರೆಸಿದರು. ಜೈ ಭೀಮ್ ಘೋಷಣೆಗಳನ್ನು ಕೂಗಿದರು. ಸದನದಲ್ಲಿ ಕುಳಿತಿದ್ದು ಮುಖ್ಯಮಂತ್ರಿಯವರು ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ತಮ ಶಾಸಕರ ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದರು.
ಕಲಾಪ ಮುಂದೂಡಿದ ಬಳಿಕ ಸದನದ ಒಳಗೆ ಯಾವುದೇ ರೀತಿಯ ಚಟುವಟಿಕೆಗಳು ಮುಂದುವರೆಯುವುದಿಲ್ಲ ಮತ್ತು ಅವು ಕಡತದಲ್ಲಿ ದಾಖಲಾಗುವುದಿಲ್ಲ. ಆದರೆ ಇಂದು ಅಂಬೇಡ್ಕರ್ ವಿಚಾರದಲ್ಲಿ ಕಲಾಪ ಮುಂದೂಡಿಕೆಯಾದ ಬಳಿಕವೂ ಪ್ರತಿಭಟನೆಗಳು ಮುಂದುವರೆದವು.
ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಧಿಕ್ಕಾರಗಳ ವಿನಿಮಯವಾಯಿತು. ಮತ್ತೆ ಸದನ ಸಮಾವೇಶಗೊಳ್ಳುವವರೆಗೂ ಈ ಪ್ರತಿಭಟನೆ ನಡೆದು ನಂತರ ಕಲಾಪದಲ್ಲೂ ಮುಂದುವರೆಯಿತು.ಸದನ ನಡೆಯದಿದ್ದಾಗಲೂ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಪರಸ್ಪರ ಟೀಕೆಗಳನ್ನು ಮಾಡಿಕೊಳ್ಳುತ್ತಿದ್ದರು.