Wednesday, August 20, 2025
Homeರಾಜ್ಯಅನನ್ಯಭಟ್‌ ನಾಪತ್ತೆ ಪ್ರಕರಣ ; ಅಧಿಕಾರಿಗಳ ಜೊತೆ ಮೊಹಂತಿ ಸಭೆ

ಅನನ್ಯಭಟ್‌ ನಾಪತ್ತೆ ಪ್ರಕರಣ ; ಅಧಿಕಾರಿಗಳ ಜೊತೆ ಮೊಹಂತಿ ಸಭೆ

Ananya Bhatt missing case; Mohanty meets officials

ಬೆಂಗಳೂರು,ಆ.20-ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನನ್ನು ಎಸ್‌‍ಐಟಿ ವಿಚಾರಣೆಗೆ ಒಳಪಡಿಸಿದಾಗ ಆತ ಗೊಂದಲಕಾರಿ ಹೇಳಿಕೆಗಳನ್ನು ನೀಡಿರುವುದು ಹಾಗೂ ಅನನ್ಯಭಟ್‌ ವಿಷಯದಲ್ಲಿ ಹಲವಾರು ಅನುಮಾನಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಎಸ್‌‍ಐಟಿ ಮುಖ್ಯಸ್ಥ ಪ್ರಣವ್‌ಮೊಹಂತಿ ಅವರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಇಂದು ಬೆಳಗ್ಗೆ ಬೆಳ್ತಂಗಡಿಗೆ ತೆರಳಿರುವ ಅವರು ಎಸ್‌‍ಐಟಿ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.ದೂರುದಾರ ತೋರಿಸಿರುವ 17 ಸ್ಥಳಗಳಲ್ಲಿ ಉತ್ಖನನ ನಡೆಸಲಾಗಿದ್ದು, ಯಾವುದೇ ಮಹತ್ವದ ಕುರುಹುಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಆತನನ್ನು ಎಸ್‌‍ಐಟಿ ಕಳೆದ ಎರಡು- ಮೂರು ದಿನಗಳಿಂದ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಆ ಸಂದರ್ಭದಲ್ಲಿ ಆತ ಕೆಲವು ಗೊಂದಲಕಾರಿ ಹೇಳಿಕೆಗಳು ಹಾಗೂ ಅನುಮಾನಾಸ್ಪದ ರೀತಿ ಉತ್ತರ ನೀಡಿದ್ದಾರೆಂಬುವುದು ಗೊತ್ತಾಗಿದೆ.

ಅನನ್ಯಭಟ್‌ ನಾಪತ್ತೆ ಪ್ರಕರಣದಲ್ಲಿ ಸುಜಾತಾಭಟ್‌ ನೀಡಿರುವ ಹೇಳಿಕೆ ಬಗ್ಗೆ ಹಲವು ಗೊಂದಲಗಳು ಮೂಡಿದ್ದು,ಸುಜಾತಾಭಟ್‌ ನೀಡಿರುವ ವಿವರಗಳ ಬಗ್ಗೆ ಎಸ್‌‍ಐಟಿ ತನಿಖೆ ಕೈಗೊಂಡಾಗ ಅವರಿಗೆ ಮಗಳೇ ಇಲ್ಲ ಎಂಬ ಮಾಹಿತಿ ಬಂದಿದೆ.ನನ್ನ ಸಹೋದರಿ ವಾಸಂತಿ:ನನ್ನ ಸಹೋದರಿ ವಾಸಂತಿಯ ಫೋಟೋ ಇಟ್ಟುಕೊಂಡು ಸುಜಾತಾ ಭಟ್‌ ಅವರು ತಮ ಮಗಳು ಅನನ್ಯಭಟ್‌ ಎಂದು ಹೇಳಿಕೊಳ್ಳುತ್ತಿದ್ದಾರೆಂದು ಮಡಿಕೇರಿಯ ವಿಜಯ್‌ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸುಜಾತಾಭಟ್‌ ನೀಡಿರುವ ಫೋಟೋ ನೋಡಿ ಅಘಾತವಾಯಿತು. ನನ್ನ ಸಹೋದರಿ ವಾಸಂತಿ ಫೋಟೋವನ್ನು ಅನನ್ಯಭಟ್‌ ಎಂದು ಹೇಳುತ್ತಿದ್ದಾರೆ. ಕುಟುಂಬದವರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.ಎಸ್‌‍ಐಟಿ ಈ ಬಗ್ಗೆ ತನಿಖೆ ನಡೆಸುತ್ತಿದೆ. ಆದ್ದರಿಂದ ಸತ್ಯಾಂಶ ಹೊರ ಬರಲಿದೆ ಎಂದು ಅವರು ಹೇಳಿದರು.

ಈ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರಣವ್‌ಮೊಹಂತಿ ಅವರು ಬೆಳ್ತಂಗಡಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸುತ್ತಿದ್ದಾರೆ.ಧರ್ಮಸ್ಥಳ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಉತ್ಖನನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ಉತ್ಖನನದ ವೇಳೆ 6 ಹಾಗೂ ಮತ್ತೊಂದು ಜಾಗದಲ್ಲಿ ಸಿಕ್ಕಿರುವ ಅಸ್ತಿಪಂಜರದ ಎಫ್‌ಎಸ್‌‍ಎಲ್‌ ವರದಿಗಾಗಿ ಎಸ್‌‍ಐಟಿ ಕಾಯುತ್ತಿದೆ.ಈ ನಡುವೆ ಅನನ್ಯಭಟ್‌ ಯಾರು,ಅವರು ಯಾವಾಗ, ಯಾವ ಸ್ಥಳದಿಂದ ನಾಪತ್ತೆಯಾಗಿದ್ದಾರೆ, ಅವರು ಈಗ ಏನಾಗಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಎಸ್‌‍ಐಟಿ ಕಲೆಹಾಕುತ್ತಿದ್ದು, ಸತ್ಯಾಂಶ ತಿಳಿಸಬೇಕಾಗಿದೆ.

RELATED ARTICLES

Latest News