ಬೆಂಗಳೂರು,ಆ.22- ಅನನ್ಯಭಟ್ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್‌ಐಟಿ, ಹೆಚ್ಚಿನ ವಿವರ ನೀಡುವಂತೆ ದೂರುದಾರರಾದ ಸುಜಾತಾಭಟ್ ಅವರಿಗೆ ನೋಟೀಸ್ ನೀಡಿದೆ.
ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನನು ಹೂಳಲಾಗಿದೆ ಎಂಬ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿರುವ ನಡುವೆಯೇ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಭಟ್ ನಾಪತ್ತೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.ಸುಜಾತಾಭಟ್ ಎಂಬುವವರು ತಮ ಮಗಳು ಅನನ್ಯಭಟ್ ಕಾಣೆಯಾಗಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಜು.15 ರಂದು ದೂರು ನೀಡಿದ್ದರು.
ಈ ಪ್ರಕರಣವನ್ನು ಪೊಲೀಸ್ ಮಹಾ ನಿರ್ದೇಶಕರಾದ ಸಲೀಂ ಅವರು ಹೆಚ್ಚಿನ ತನಿಖೆಗಾಗಿ ಎಸ್‌ಐಟಿಗೆ ವಹಿಸಿದ್ದಾರೆ.ಈಗಾಗಲೇ ಈ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿರುವ ಎಸ್‌ಐಟಿ, ಸುಜಾತಾಭಟ್ ಅವರ ಹಿನ್ನೆಲೆ,ಕುಟುಂಬದ ಮಾಹಿತಿಗಳನ್ನು ಸಂಗ್ರಹಿಸಿರುವುದಲ್ಲದೇ, ಈ ಹಿಂದೆ ಸುಜಾತಾ ಅವರು ಯಾವ ಯಾವ ಸ್ಥಳಗಳಲ್ಲಿ ವಾಸವಾಗಿದ್ದರು, ಯಾವ ಕೆಲಸ ಮಾಡುತ್ತಿದ್ದರು,ಇವರು ಯಾರ ಜೊತೆಯಲ್ಲಿ ವಾಸವಾಗಿದ್ದರು ಎಂಬಿತ್ಯಾದಿ ಪ್ರಾಥಮಿಕ ಮಾಹಿತಿಗಳನ್ನು ಪಡೆದುಕೊಂಡಿದೆ.
ಈ ಪ್ರಕರಣದ ಹೆಚ್ಚಿನ ಮಾಹಿತಿಗಾಗಿ ಸುಜಾತಾಭಟ್ ಅವರಿಗೆ ಎಸ್‌ಐಟಿ ಕಚೇರಿಗೆ ಬಂದು ವಿವರ ನೀಡುವಂತೆ ಅವರಿಗೆ ನೋಟೀಸ್ ನೀಡಿದೆ.ಒಂದು ವೇಳೆ ವಿಚಾರಣೆಗೆ ಅವರು ಹಾಜರಾದರೇ ಅನನ್ಯಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಲಭ್ಯವಾಗಲಿವೆ.
ಈ ನಡುವೆ ಸುಜಾತಾಭಟ್ ಅವರು ತಮ ಮಗಳು ಅನನ್ಯಭಟ್ ಎಂದು ತೋರಿಸಿರುವ ಫೋಟೋ ಗೊಂದಲ ಮೂಡಿಸಿದ್ದು, ಆ ಫೋಟೋದಲ್ಲಿರುವುದು ತಮ ಸಹೋದರಿ ವಾಸಂತಿ ಎಂದು ಮಡಿಕೇರಿಯ ವ್ಯಕ್ತಿಯೊಬ್ಬರು ಸುದ್ದಿಗಾರರಿಗೆ ಹೇಳಿದ್ದಾರೆ.ಸುಜಾತಾಭಟ್ ಅವರಿಗೆ ಮಕ್ಕಳಿರಲಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ. ಈ ಎಲ್ಲಾ ಗೊಂದಲಗ ಬಗ್ಗೆ ಸುಜಾತಾಭಟ್ ಅವರು ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದರೆ ಇನ್ನಷ್ಟು ವಿವರಗಳು ಲಭ್ಯವಾಗಲಿವೆ.