ಆನೇಕಲ್, ಅ.24- `ಆನೇಕಲ್ ಭಾಗವನ್ನು ಭವಿಷ್ಯದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಲಾಗುವುದು’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಚಂದಾಪುರ, ಜಿಗಣಿ, ಕೋನಪ್ಪನ ಅಗ್ರಹಾರಕ್ಕೆ ಆಗಮಿಸಿ ಸ್ಥಳಗಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಆನೇಕಲ್‌ಗೆ ಈಗಾಗಲೇ ಕಾವೇರಿ ಕುಡಿಯುವ ನೀರು ನೀಡಲಾಗುತ್ತಿದೆ, ಭವಿಷ್ಯದಲ್ಲಿ ನೀಡಬೇಕಾದ ಎಲ್ಲಾ ಸವಲತ್ತುಗಳು ನೀಡುವ ಬಗ್ಗೆ ಚರ್ಚೆ ನಡೆಸಲಾಗುವುದು' ಎಂದು ಹೇಳಿದರು. ಈ ಭಾಗದಲ್ಲಿ ಈಗಿನಿಂದಲೇ ಸಂಚಾರ ದಟ್ಟಣೆ ನಿಯಂತ್ರಣ ಯೋಜನೆ ರೂಪಿಸಬೇಕು,. ನಗರ ಬೆಳವಣಿಗೆ ಆದ ನಂತರ ಯೋಜನೆ ರೂಪಿಸಲು ಕಷ್ಟವಾಗಲಿದೆ ‘ ಎಂದು ತಿಳಿಸಿದರು.
`ಜಿಬಿಎ ವ್ಯಾಪ್ತಿಗೆ ಭವಿಷ್ಯದಲ್ಲಿ ಸೇರಲು ಅರ್ಹತೆ ಗಡಿಭಾಗ, ಬೆಂಗಳೂರು ನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರದೇಶಗಳನ್ನು ನಾನೇ ಖುದ್ದು ವೀಕ್ಷಣೆ ಮಾಡಿದ್ದೇನೆ. ಕೆಲವು ನಗರ ಸಭೆಗಳು, ಪುರಸಭೆಗಳು, ಪಟ್ಟ ಪಂಚಾಯಿತಿಗಳು ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳ ಗಡಿ ಪ್ರದೇಶಗಳು ನನ್ನ ಇಲಾಖೆ ವ್ಯಾಪಿಗೆ ಸೇರಿದೆ. ಈ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
`ಬಯೋಕಾನ್ ಸಂಸ್ಥೆಯು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೆ. ಬೆಂಗಳೂರು ನಗರ ವ್ಯಾಪ್ತಿ ಹಾಗೂ ಪಂಚಾಯಿತಿ ವ್ಯಾಪ್ತಿ ಬೇರೆ ಬೇರೆ ಎಂಬುದನ್ನು ಅವರು ಅರಿಯಬೇಕು’ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಆನೇಕಲ್ ಕ್ಷೇತ್ರದ ಶಾಸಕ ಬಿ.ಶಿವಣ್ಣ , ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ.ರಮೇಶ್, ಮುಖಂಡರಾದ ಹಳೆ ಚಂದಾಪುರ ಶ್ರೀಧರ್, ಆನಂದ್‌ರೆಡ್ಡಿ, ರವಿ, ಹಾಪ್ ಕಾಮ್ಸೌ ಬಾಬುರೆಡ್ಡಿ, ಗಟ್ಟಹಳ್ಳಿ ಸೀನಪ್ಪ, ಚಂದಾಪುರ ಪುರಸಭೆ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಭಾಗವಹಿಸಿದ್ದರು.
