Monday, November 25, 2024
Homeರಾಜ್ಯಅಂಜಲಿ ಹಂತಕ ವಿಶ್ವ ಅರೆಸ್ಟ್, ರೈಲಿನಲ್ಲಿ ಮತ್ತೊಬ್ಬ ಮಹಿಳೆಯ ಕೊಲೆಗೆ ಯತ್ನಿಸಿದಾಗ ಪ್ರಯಾಣಿಕರಿಂದ ಥಳಿತ

ಅಂಜಲಿ ಹಂತಕ ವಿಶ್ವ ಅರೆಸ್ಟ್, ರೈಲಿನಲ್ಲಿ ಮತ್ತೊಬ್ಬ ಮಹಿಳೆಯ ಕೊಲೆಗೆ ಯತ್ನಿಸಿದಾಗ ಪ್ರಯಾಣಿಕರಿಂದ ಥಳಿತ

ಹುಬ್ಬಳ್ಳಿ, ಮೇ 17- ಅಂಜಲಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಹಂತಕ ಮತ್ತೊಬ್ಬ ಮಹಿಳೆಯೊಬ್ಬರ ಕೊಲೆಗೆ ಯತ್ನಿಸಿ ಸಿಕ್ಕಿ ಬಿದ್ದಿದ್ದಾನೆ. ನಿನ್ನೆ ಆರೋಪಿ ವಿಶ್ವ ಅಲಿಯಾಸ್‌‍ ಗಿರೀಶ್‌ ದಾವಣಗೆರೆಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಗಲಾಟೆ ಮಾಡಿ ಅವರಿಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ.

ತಕ್ಷಣ ಸಹ ಪ್ರಯಾಣಿಕರು ಆತನಿಗೆ ಹಿಗ್ಗಾಮುಗ್ಗ ಥಳಿಸಿದಾಗ ರೈಲಿನಿಂದ ಜಿಗಿದು ತಪ್ಪಿಸಿಕೊಳ್ಳುವ ಭರದಲ್ಲಿ ಹಳಿಬಳಿ ಬಿದ್ದು ಗಾಯಗೊಂಡಿದ್ದಾನೆ.ದಾವಣಗೆರೆ ರೈಲ್ವೆ ಪೊಲೀಸರು ಆತನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ, ಆತನ ಪೂರ್ವಾಪರ ವಿಚಾರಿಸುತ್ತಿದ್ದಾಗ ಈತನೇ ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿಯನ್ನು ಕೊಲೆ ಮಾಡಿದ ಆರೋಪಿ ವಿಶ್ವ ಎಂಬುದು ಗೊತ್ತಾಗಿದೆ.

ತಕ್ಷಣ ಈ ವಿಷಯವನ್ನು ರೈಲ್ವೆ ಪೊಲೀಸರು ಹುಬ್ಬಳ್ಳಿ ಪೊಲೀಸರಿಗೆ ತಿಳಿಸುತ್ತಾರೆ. ರಾತ್ರಿಯೇ ಪೊಲೀಸರು ದಾವಣಗೆರೆಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಹುಬ್ಬಳ್ಳಿಗೆ ಕರೆತಂದು ಕಿಮ್ಸೌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಆಯುಕ್ತರ ಭೇಟಿ:
ಇಂದು ಬೆಳಗ್ಗೆ ಹುಬ್ಬಳ್ಳಿ- ಧಾರವಾಡ ಪೊಲೀಸ್‌‍ ಆಯುಕ್ತೆ ರೇಣುಕಾ ಸುಕುಮಾರ ಅವರು ಕಿಮ್ಸೌ ಆಸ್ಪತ್ರೆಗೆ ಭೇಟಿ ನೀಡಿ ಆರೋಪಿಯ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ಬೆಂಡಿಗೇರಿ ಪೊಲೀಸ್‌‍ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗಾಗಿ ಎಂಟು ತಂಡವನ್ನು ರಚನೆ ಮಾಡಿದ್ದೆವು. ನಿನ್ನೆ ರೈಲ್ವೆ ಪೊಲೀಸರ ಸಹಾಯದಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದರು.

ಆರೋಪಿ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿವೆ. ಆತ ಸದ್ಯ ಕೋಮ ಸ್ಥಿತಿಯಲ್ಲಿದ್ದಾನೆ. ರೈಲಿನಿಂದ ಏಕೆ ಕೆಳಗೆ ಬಿದ್ದ ಎಂಬುದನ್ನು ಆತನ ಹೇಳಿಕೆ ನಂತರವಷ್ಟೇ ತಿಳಿಯಬಹುದಾಗಿದೆ ಎಂದು ಅವರು ತಿಳಿಸಿದರು.

ಮಹಾರಾಷ್ಟ್ರದಿಂದ ತಲೆಮರೆಸಿಕೊಳ್ಳಲು ಯತ್ನ:
ಆರೋಪಿಯನ್ನು ಇಂದು ಬೆಳಗಿನ ಜಾವ 4.30ರ ಸುಮಾರಿಗೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಯು ಮೈಸೂರಿನಿಂದ ಗೋವಾ, ಮಹಾರಾಷ್ಟ್ರ ಕಡೆ ಹೋಗಿ ತಲೆಮರೆಸಿಕೊಳ್ಳಲು ಯತ್ನಿಸಿದ್ದ. ಆತನ ಮೇಲೆ ನಾಲ್ಕು ಬೈಕ್‌ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.

ಮೊಬೈಲ್‌ ಬಳಸುತ್ತಿರಲಿಲ್ಲ:
ಆರೋಪಿ ವಿಶ್ವ ಮೊಬೈಲ್‌ ಬಳಕೆ ಮಾಡುತ್ತಿರಲಿಲ್ಲ. ಹಾಗಾಗಿ ಆತನನ್ನು ಹುಡುಕುವುದು ಪೊಲೀಸರಿಗೆ ಕಷ್ಟವಾಗಿತ್ತು.

ಪ್ರತಿಭಟನೆ ಕಾವು:
ಅಂಜಲಿ ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ವಿವಿಧ ಮಠಾಧೀಶರು, ರಾಜಕೀಯ ಮುಂಡರು ಅಂಜಲಿ ಅವರ ಮನೆಗೆ ಹೋಗಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.

ಬಗೆದಷ್ಟು ಆರೋಪಿ ದುಷ್ಕೃತ್ಯ ಬಯಲು:
ಆರೋಪಿ ವಿಶ್ವನ ಬಗ್ಗೆ ಬಗೆದಷ್ಟು ಹಲವು ದುಷ್ಕೃತ್ಯಗಳು ಬಯಲಾಗುತ್ತಿವೆ.ಮದ್ಯವೆಸನಕ್ಕೆ ದಾಸನಾಗಿದ್ದ ಈತ ಹಲವು ಬಾರಿ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದನು.

ತಾಯಿ ಕಣ್ಣೀರು:
ಮಗನ ಅಪರಾಧಗಳನ್ನು ನೋಡಿ ನೊಂದಿದ್ದ ಆರೋಪಿಯ ತಾಯಿ ಸವಿತಾ ಅವರು, ಪ್ರತಿನಿತ್ಯ ಕಣ್ಣೀರು ಹಾಕುತ್ತಿದ್ದರು. ಹೊಟ್ಟೆಪಾಡಿಗಾಗಿ ಹೊಟೇಲ್‌ನಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು.

ಮನೆ ಖಾಲಿ ಮಾಡಲು ಒತ್ತಡ:
ಮತ್ತೊಂದು ಕಡೆ ಮನೆ ಮಾಲೀಕರು ಮನೆ ಖಾಲಿ ಮಾಡುವಂತೆ ಆರೋಪಿಯ ತಾಯಿಗೆ ಒತ್ತಡ ಹಾಕಿ ಮನೆಗೆ ಬೀಗ ಹಾಕಿದ್ದಾರೆ.ಆರೋಪಿ ವಿಶ್ವ ಯಾವಾಗಲಾದರೂ ಒಮೆ ಮಾತ್ರ ತಾಯಿಯನ್ನು ನೋಡಲು ಬರುತ್ತಿದ್ದ. ಈತನ ತಾಯಿಯ ಮುಖ ನೋಡಿಕೊಂಡು ಜನರು ಸುಮನಾಗುತ್ತಿದ್ದರು.ಆದರೆ ಅಂಜಲಿ ಹತ್ಯೆ ಬಳಿಕ ಇಲ್ಲಿನ ಜನರು ಆರೋಪಿಯನ್ನು ಎನ್‌ಕೌಂಟರ್‌ ಮಾಡಬೇಕೆಂದು ಆಕ್ರೋಶ ಹೊರಹಾಕಿದ್ದಾರೆ.

ವಿಶ್ವ ಅಲಿಯಾಸ್‌‍ ಗಿರೀಶ್‌ ಬಂಧಿತ ಆರೋಪಿ. ಈತ ಕಳ್ಳತನ ಪ್ರವೃತ್ತಿ ಬೆಳೆಸಿಕೊಂಡಿದ್ದಲ್ಲದೆ, ಅಮಾಯಕ ಯುವತಿಯರನ್ನೇ ಟಾರ್ಗೆಟ್‌ ಮಾಡಿ ಮೋಸ ಮಾಡುತ್ತಿದ್ದುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಮೇ 15ರಂದು ಮುಂಜಾನೆ 5.30ರ ಸುಮಾರಿನಲ್ಲಿ ಅಂಜಲಿ ಮನೆ ಬಳಿ ಹೋಗಿ ಬಾಗಿಲು ತಟ್ಟಿದ್ದು, ಕದ ತೆಗೆಯುತ್ತಿದ್ದಂತೆಯೇ ಅಂಜಲಿ ಮೇಲೆ ಏಕಾಏಕಿ ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದನು.

ಈ ಪ್ರಕರಣ ಹುಬ್ಬಳ್ಳಿ ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಹಂತಕನ ಪತ್ತೆಗೆ ಎರಡು ತಂಡಗಳನ್ನು ರಚಿಸಿ ಪೊಲೀಸರು ಆತನ ಬಂಧನಕ್ಕೆ ವಿವಿಧ ರಸ್ತೆಗಳಲ್ಲಿನ ಸಿಸಿ ಕ್ಯಾಮರಾ ಪರಿಶೀಲಿಸಿ ಆತನ ಬಂಧನಕ್ಕೆ ಒಂದು ತಂಡ ಮೈಸೂರಿನಲ್ಲಿ ಮತ್ತೊಂದು ತಂಡ ದಾವಣಗೆರೆಯಲ್ಲಿ ಆರೋಪಿಗಾಗಿ ಹುಡುಕಾಟ ನಡೆಸುತ್ತಾ ಹಲವು ಮಾಹಿತಿಗಳನ್ನು ಕಲೆಹಾಕಿದ್ದಾರೆ.

ದಾವಣಗೆರೆಯ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ರಾತ್ರಿ ಹಂತಕನನ್ನು ಬಂಧಿಸಿ ಹುಬ್ಬಳ್ಳಿಗೆ ಕರೆದೊಯ್ದಿದ್ದಾರೆ. ಆರೋಪಿಯು ಬೈಕ್‌ ಕಳ್ಳತನ ಪ್ರಕರಣದ ಆರೋಪಿಯಾಗಿದ್ದು, ಅಮಾಯಕ ಯುವತಿಯರ ಜೊತೆ ಪ್ರೀತಿಯ ನಾಟಕವಾಡಿ, ಅವರನ್ನು ಓಲೈಸಿಕೊಂಡು ನಂತರ ಅವರಿಂದ ಹಣ, ಬೆಳ್ಳಿ, ಬಂಗಾರ ಪಡೆದು ಮೋಸ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.

ಆರೋಪಿಯು ಅಂಜಲಿಯನ್ನು ಅದೇ ರೀತಿ ಓಲೈಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಆಕೆ ಆತನ ಪ್ರೀತಿಯನ್ನು ಒಪ್ಪದಿದ್ದಾಗ ನೇಹಾ ರೀತಿಯಲ್ಲೇ ಕೊಲೆ ಮಾಡೊದಾಗಿ ಆಕೆಗೆ ಜೀವ ಬೆದರಿಕೆ ಹಾಕಿದ್ದಾನೆ.

ಈ ವಿಷಯವನ್ನು ಅಂಜಲಿ ತನ್ನ ಅಜ್ಜಿಗೆ ಹೇಳಿದ್ದರು. ಅಜ್ಜಿ ಬೆಂಡಿಗೇರಿ ಪೊಲೀಸ್‌‍ ಠಾಣೆಗೆ ಹೋಗಿ ವಿಶ್ವನ ಬಗ್ಗೆ ಹೇಳಿದರೂ, ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆರೋಪಿ ವಿಶ್ವ ಅಪರಾಧ ಹಿನ್ನೆಲೆವುಳ್ಳವನು ಎಂದು ಗೊತ್ತಿದ್ದರೂ ಪೊಲೀಸರು ಏಕೆ ನಿರ್ಲಕ್ಷ್ಯ ತಾಳಿದರು ಎಂಬುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

RELATED ARTICLES

Latest News