ಚೆನ್ನೈ,ಡಿ.21- ಕೊಯಮತ್ತೂರಿನಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮತ್ತು ಇತರ ಹಲವು ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. 1998ರ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ ಬಾಷಾ ಅವರನ್ನು ವೈಭವೀಕರಿಸುವುದನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಅಣ್ಣಾಮಲೈ ಅವರನ್ನು ಬಂಧಿಸಲಾಗಿದೆ.
ಬಾಷಾ ಜೈಲಿನಿಂದ ಹೊರಬಂದು ಡಿ.17ರಂದು ಮೃತಪಟ್ಟಿದ್ದಾನೆ. ಬಾಂಬ್ ಸ್ಫೋಟ ಪ್ರಕರಣದಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಆದರೆ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ. ಈತನ ಸಾವಿನ ಬಳಿಕ ಸಾವಿರಾರು ಜನರು ಈತನನ್ನು ನೋಡಲು ಆಗಮಿಸಿದರು. ಇದಕ್ಕಾಗಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.
56 ಜನರ ಸಾವಿಗೆ ಕಾರಣನಾದ ಅಪರಾಧಿ ಭಯೋತ್ಪಾದಕನ ಶವಯಾತ್ರೆಗೆ ಅನುಮತಿ ನೀಡಿದ್ದಕ್ಕಾಗಿ ಅಣ್ಣಾಮಲೈ ಅವರು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬ ಭಯೋತ್ಪಾದಕನ ಸಾವನ್ನು ವೈಭವೀಕರಿಸಲಾಗುತ್ತಿದೆ ಎಂದು ಡಿಎಂಕೆ ಸರ್ಕಾರದ ವಿರುದ್ಧ ಆರೋಪ ಮಾಡಿ ಕಳೆದ ದಿನ ಪ್ರತಿಭಟನೆ ಮಾಡುವ ವೇಳೆ ಅಣ್ಣಾಮಲೈ ಅವರನ್ನು ಪೊಲೀಸರು ಬಂಧಿಸಿದ್ದರು.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಎಸ್ಎ ಬಾಷಾ ಅವರ ಅಂತ್ಯಕ್ರಿಯೆಗೆ ಅನುಮತಿ ನೀಡಿದ್ದಕ್ಕಾಗಿ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಟೀಕಿಸಿ ಪೋಸ್ಟ್ ಮಾಡಿದ್ದಾರೆ.
ಡಿಎಂಕೆ ಸರ್ಕಾರ ಪೊಲೀಸರ ಮೂಲಕ ಹಿಂದೂ ಮುನ್ನಾನಿ ರಾಜ್ಯಾಧ್ಯಕ್ಷ ಕಾಡೇಶ್ವರ್ ಸಿ.ಸುಬ್ರಮಣ್ಯಂ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶಿವಲಿಂಗಂ ಮತ್ತು ನನ್ನನ್ನು ಬಂಧಿಸಿತು ಎಂದು ಹೇಳಿದ್ದಾರೆ.
ಯಾಕೆಂದರೆ ಅವರು ಕೊಯಮತ್ತೂರು ಬಾಂಬ್ ಸ್ಫೋಟದ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಡಿಎಂಕೆ ಸರ್ಕಾರವನ್ನು ಖಂಡಿಸಲು ಕರಾಳ ದಿನಾಚರಣೆಯ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಭಯೋತ್ಪಾದಕರ ಅಂತಿಮ ಸಂಸ್ಕಾರಕ್ಕೆ ಭದ್ರತೆ ಒದಗಿಸುವ ಮೂಲಕ ಡಿಎಂಕೆಯು ವೋಟ್ ಬ್ಯಾಂಕ್ ರಾಜಕಾರಣದ ಆಟ ಆಡುತ್ತಿದೆ ಎಂದು ಅಣ್ಣಾಮಲೈ ಆರೋಪಿಸಿದರು. ಇದಕ್ಕೆ ತಮಿಳುನಾಡಿನ ಜನರು ಶೀಘ್ರದಲ್ಲೇ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಅಣ್ಣಾಮಲೈ ಆಕ್ರೋಶ ಹೊರಹಾಕಿದ್ದಾರೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನಂತರ ಕೇಂದ್ರ ಸಚಿವ ಎಲ್ ಮುರುಗನ್ ಕೂಡ ಖಂಡಿಸಿ ಡಿಎಂಕೆ ತಮಿಳುನಾಡು ಸರ್ಕಾರ 56 ಜನರ ಸಾವಿಗೆ ಕಾರಣವಾದ 1998ರ ಕೊಯಮತ್ತೂರು ಸ್ಫೋಟದಲ್ಲಿ ಭಾಗಿಯಾದ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ ಎಂದು ಟೀಕಿಸಿದ್ದಾರೆ.
ಇದರೊಂದಿಗೆ ಮಹಾರಾಷ್ಟ್ರ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಕೂಡ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಸರ್ಕಾರ ಅಮಾಯಕರ ಹತ್ಯೆಯನ್ನು ಉತ್ತೇಜಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಆದರೆ ಮೆರವಣಿಗೆಯನ್ನು ಸಮರ್ಥಿಸಿಕೊಂಡಿರುವ ಡಿಎಂಕೆ ವಕ್ತಾರ ಟಿಕೆಎಸ್ ಇಳಂಗೋವನ್, ಇದು ಕುಟುಂಬದ ಹಕ್ಕು ಮತ್ತು ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.