ಬೆಂಗಳೂರು,ಜ.13- ಮನೆಯೊಂದರಲ್ಲಿ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಅಸ್ಸಾಂ ದಂಪತಿ ಸೇರಿದಂತೆ ಐದು ಮಂದಿ ಗಾಯಗೊಂಡಿರುವ ಘಟನೆ ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಚೊಕ್ಕ ಸಂದ್ರದ ಪಾಪಯ್ಯಲೇಔಟ್ನ ಮೂರು ಅಂತಸ್ತಿನ ಮೊದಲನೇ ಮಹಡಿ ಮನೆಯಲ್ಲಿ ಅಸ್ಸಾಂ ಮೂಲದ ಬಿಜುದಾಸ್ (34), ಅಂಜಲಿದಾಸ್(27) ದಂಪತಿ ತಮ ನಾಲ್ಕು ವರ್ಷದ ಹೆಣ್ಣು ಮಗು ಮಂಜುಶ್ರೀ ಜೊತೆ ಬಾಡಿಗೆಗೆ ವಾಸವಿದ್ದಾರೆ.
ರಾತ್ರಿ ದಂಪತಿ ಹಾಗೂ ಮಗು ಊಟ ಮಾಡಿ ನಿದ್ರೆಗೆ ಜಾರಿದ್ದಾರೆ. ಆ ಸಂದರ್ಭದಲ್ಲಿ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿರುವುದು ದಂಪತಿ ಗಮನಕ್ಕೆ ಬಂದಿಲ್ಲ.ಇಂದು ಬೆಳಗ್ಗೆ 8.30ರ ಸುಮಾರಿನಲ್ಲಿ ಅಂಜಲಿಯವರು ಹಾಲು ಕಾಯಿಸಲು ಅಡುಗೆ ಮನೆಗೆ ಹೋಗಿ ಲೈಟ್ ಆನ್ ಮಾಡುತ್ತಿದ್ದಂತೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ.
ಬೆಂಕಿಯಿಂದಾಗಿ ದಂಪತಿ ಹಾಗೂ ಮಗುವಿಗೆ ಸುಟ್ಟ ಗಾಯಗಳಾಗಿವೆ. ಅಲ್ಲದೇ ಸ್ಫೋಟದ ರಭಸಕ್ಕೆ ಮನೆಯ ಕಿಟಕಿ-ಗಾಜುಗಳು ಸಿಡಿದು ಹೊರಗೆ ಹಾರಿದ ಪರಿಣಾಮ ಮನೆಯ ಮುಂದೆ ಕಸ ಗುಡಿಸುತ್ತಿದ್ದ ಶೋಭಾ ಅವರಿಗೆ ಹಾಗೂ ನೆರೆಮನೆ ನಿವಾಸಿ ಮಂಜುನಾಥ ಎಂಬುವವರಿಗೆ ಗಾಜು ಬಡಿದ ಪರಿಣಾಮ ಇಬ್ಬರೂ ಗಾಯಗೊಂಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೀಣ್ಯಾ ಠಾಣೆೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿ ಗಾಯಗೊಂಡಿದ್ದ ದಂಪತಿ ಸೇರಿದಂತೆ ಐದು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಸ್ಫೋಟದ ರಭಸಕ್ಕೆ ಅಕ್ಕ-ಪಕ್ಕದ ಐದು ಮನೆಗಳಿಗೂ ಹಾನಿಗಳಾಗಿವೆ. ಪೀಣ್ಯಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.