ಬೆಂಗಳೂರು,ಡಿ.29- ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು ಕೋಟ್ಯಂತರ ರೂಪಾಯಿ ಚಿನ್ನ ವಂಚನೆ ಮಾಡಿರುವ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾದ ಐಶ್ವರ್ಯಗೌಡ ಮತ್ತು ಆಕೆಯ ಪತಿ ಹರೀಶ್ ಅವರ ವಿರುದ್ಧ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.
ರಿಯಲ್ ಎಸ್ಟೇಟ್ ಉದ್ಯೋಗಿ ಸೋನು ಲಮಾಣಿ ತಮಗೆ 5 ಕೋಟಿ ರೂ. ವಂಚನೆಯಾಗಿದೆ ಎಂದು ಆರೋಪಿಸಿದ್ದು ದೂರು ನೀಡಲು ಮುಂದಾಗಿದ್ದರೆ, ಮತ್ತೊಬ್ಬ ಕಾಂಗ್ರೆಸ್ ನಾಯಕರ ಸಂಬಂಧಿಯಿಂದ ಹಣ ಕೀಳುವ ಪ್ರಯತ್ನ ನಡೆದಿರುವ ಆಡಿಯೋ ಸೋರಿಕೆಯಾಗಿದೆ.
ಸೋನು ಲಮಾಣಿ ವಿಡಿಯೋ ಮೂಲಕ ತಮಗಾದ ವಂಚನೆಯನ್ನು ಹೇಳಿಕೊಂಡಿದ್ದು, ಐಶ್ವರ್ಯ ಗೌಡ ತನ್ನನ್ನು ತಾನು ವ್ಯಾಪಾರಸ್ಥರು ಎಂದು ಪರಿಚಯಿಸಿಕೊಂಡಿದ್ದರು. ನನ್ನ 15-16 ನಿವೇಶನಗಳನ್ನು ಮಾರಾಟ ಮಾಡಿಸಿಕೊಟ್ಟಿದ್ದರು. ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡಿದ್ದರು. ತಗಾದೆ ಇರುವ ಆಸ್ತಿಗಳನ್ನು ಮಾರಿಸಿಕೊಡುತ್ತೇನೆ ಎಂದು ನಂಬಿಸಿದ್ದರು. ಹೀಗಾಗಿ ಅವರ ಮತ್ತು ನಮ ನಡುವೆ ಕೊಡು-ಕೊಳ್ಳುವಿಕೆಯ ವ್ಯವಹಾರ ನಡೆದಿತ್ತು ಎಂದು ತಿಳಿಸಿದ್ದಾರೆ.
ರಾಜ್ಯಸರ್ಕಾರದ ಬಹುತೇಕ ಸಚಿವರು ಹಾಗೂ ಪ್ರಮುಖರ ಜೊತೆ ಫೋಟೊ, ವಿಡಿಯೋಗಳನ್ನು ಐಶ್ವರ್ಯ ತಮಗೆ ತೋರಿಸಿದ್ದರು. ನಟ ಧರ್ಮ ಅವರಿಂದ ಡಿ.ಕೆ.ಸುರೇಶ್ ಅವರ ಧ್ವನಿಯಲ್ಲಿ ಮಾತನಾಡಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಕಾಲ್ರೆಕಾರ್ಡಿಂಗ್ ನನ್ನ ಬಳಿ ಇದೆ ಎಂದು ಹೇಳಿದರು.
ಕಳೆದ 15 ದಿನಗಳ ಹಿಂದೆಯೂ ನನ್ನೊಂದಿಗೆ ದೂರವಾಣಿಯಲ್ಲಿ ಐಶ್ವರ್ಯ ಮಾತನಾಡಿದ್ದರು. ವನಿತಾ ಅವರಿಗೆ ವಂಚನೆ ಮಾಡಿದ ಪ್ರಕರಣ ಹೊರಬಂದ ಬಳಿಕ ನೀವು ದೂರು ನೀಡಬೇಡಿ ಎಂದು ನನ್ನ ಮೇಲೆ ಒತ್ತಡ ಹೇರಿದ್ದರು.
ಅವರದೇ ಊರಿನ ಶಾಸಕರೊಬ್ಬರು ನನ್ನ ಜೊತೆ ಮಾತನಾಡಿ, ಎಲ್ಲರೂ ಒಟ್ಟಾಗಿ ಸೇರಿದ್ದೇವೆ. ಯಾವುದೇ ವಿವಾದಗಳಿಲ್ಲದೆ ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳೋಣ. ದೂರು ನೀಡಿ, ಗೊಂದಲ ಮಾಡಿಕೊಳ್ಳಬೇಡಿ ಎಂದು ಸೂಚಿಸಿದ್ದರು ಎಂದು ಸೋನು ಲಮಾಣಿ ಹೇಳಿದ್ದಾರೆ.
ಗಣಪತಿ ಹಬ್ಬಕ್ಕೆ ಅವರ ಊರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದರು. ವಿವಾದಿತ ಆಸ್ತಿಗಳನ್ನು ನಿಮಗೆ ನೋಂದಣಿ ಮಾಡಿಸಿಕೊಡುವುದಾಗಿ ಹೇಳಿ ನನ್ನಿಂದ ಹಣ ಪಡೆದುಕೊಂಡಿದ್ದಾರೆ. ನನ್ನ ಮತ್ತು ಅವರ ನಡುವೆ ಚಿನ್ನದ ವ್ಯವಹಾರವಾಗಿಲ್ಲ. ನಿಮಿಂದ ಪಡೆದ ಎಲ್ಲಾ ಹಣವನ್ನೂ 20 ದಿನದೊಳಗಾಗಿ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದರು. ಈಗ ಅದು ಆಗಿಲ್ಲ. ಹೀಗಾಗಿ ಆಕೆ ಮತ್ತು ಆಕೆಯ ಪತಿ ವಿರುದ್ಧ ದೂರು ನೀಡಲು ವಕೀಲರನ್ನು ಸಂಪರ್ಕಿಸಿದ್ದೇನೆ. ನನ್ನ ಬಳಿ ಎಲ್ಲಾ ದಾಖಲೆಗಳೂ ಇದ್ದು, ಶೀಘ್ರವೇ ಜೆ.ಪಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಈ ನಡುವೆ ಮಾಜಿ ಸಂಸದರೊಬ್ಬರ ಸಂಬಂಧಿ ಶ್ರೇಯಸ್ ಎಂಬುವರೊಂದಿಗೆ ಹಣದ ವಹಿವಾಟಿನ ಬಗ್ಗೆ ಚರ್ಚೆಯಾಗಿರುವ ಕಾಲ್ ರೆಕಾರ್ಡಿಂಗ್ ವೈರಲ್ ಆಗಿದೆ. ಐಶ್ವರ್ಯ ಗೌಡ ಅವರುಶ್ರೇಯಸ್ ಅವರಿಂದ ಡಿ.ಕೆ.ಸುರೇಶ್ ಎಂದು ಹೇಳಿ ಕರೆ ಮಾಡಿಸಿದ್ದು, ಆ ಕಡೆಯಿಂದ ಮಾತನಾಡುವ ವ್ಯಕ್ತಿಯ ಧ್ವನಿ ಡಿ.ಕೆ.ಸುರೇಶ್ ಅವರಿಗೆ ಹೋಲುವಂತಿದೆ. ಶ್ರೇಯಸ್ ಆರ್.ಆರ್.ನಗರ ರಸ್ತೆಗೆ ಸಂಬಂಧಪಟ್ಟಂತೆ ನಿಮ ಬಳಿ ಮಾತನಾಡಬೇಕು ಎಂದು ಹೇಳಿದರೆ, ಇದನ್ನೆಲ್ಲಾ ಫೋನಿನಲ್ಲಿ ಚರ್ಚೆ ಮಾಡುವುದು ಬೇಡ, ನೇರವಾಗಿ ಭೇಟಿಯಾಗು ಎಂದು ಆ ಕಡೆಯ ಧ್ವನಿ ಸೂಚನೆ ನೀಡುತ್ತದೆ.
ನಾನು ದುಬೈಗೆ ಹೋಗುತ್ತಿದ್ದು, ಅಲ್ಲಿಂದ ಬಂದ ಬಳಿಕ ಭೇಟಿಯಾಗುವುದಾಗಿ ಶ್ರೇಯಸ್ ಹೇಳುತ್ತಾರೆ. ಈ ನಡುವೆ ತಾವು ಸಂಬಂಧಿಯಾಗಿರುವ ಹಿರಿಯ ನಾಯಕರೊಬ್ಬರ ಹೆಸರನ್ನು ಶ್ರೇಯಸ್ ಪ್ರಸ್ತಾಪಿಸುತ್ತಾರೆ. ಡಿ.ಕೆ.ಸುರೇಶ್ ಧ್ವನಿ ಹೋಲುವ ವ್ಯಕ್ತಿ ಆ ಕಡೆಯಿಂದ ತಾವು 15 ಕೋಟಿ ರೂ.ಗಳನ್ನು ಹೊಂದಿಸುತ್ತಿದ್ದು, ಈಗ 12 ನ್ನು ರೆಡಿ ಮಾಡಿಕೊಂಡಿದ್ದೇವೆ. ಇನ್ನೂ 3 ಬಾಕಿ ಇದೆ. ಅದರ ವ್ಯವಸ್ಥೆ ಮಾಡಲು ಸಾಧ್ಯವೇ ಎಂದು ಕೇಳಿದ್ದಾರೆ. ಈ ಆಡಿಯೋ ಭಾರಿ ವೈರಲ್ ಆಗಿದೆ.