ಮೈಸೂರು,ಜ.20- ದಾರಿ ಮಧ್ಯೆ ನಾಲ್ವರು ಮುಸುಕುದಾರಿ ದರೋಡೆಕೋರರು ಉದ್ಯಮಿಯೊ ಬ್ಬರ ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಬೆದರಿಸಿ. ಅವರನ್ನು ಎಳೆದಾಡಿ ಲಕ್ಷಾಂತರ ಹಣವಿದ್ದ ಬ್ಯಾಗ್ ಸಮೇತ ಕಾರನ್ನು ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಇಂದು ಹಾಡಹಗಲೇ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು ತಾಲ್ಲೂಕಿನ ಹಾರೋಹಳ್ಳಿ ಗ್ರಾಮದ ಬಳಿ ಈ ಘಟನೆ ಇಂದು ಬೆಳಗ್ಗೆ 9.15ರ ಸುಮಾರಿನಲ್ಲಿ ನಡೆದಿದೆ.ಕೇರಳದ ಉದ್ಯಮಿ ಅಶ್ರಫ್ ಎಂಬುವವರು ಅಡಿಕೆ ಬೆಳೆ (ಚೇಣಿ) ಖರೀದಿಸಲು ಲಕ್ಷಾಂತರ ಹಣವನ್ನು ಬ್ಯಾಗ್ನಲ್ಲಿಟ್ಟುಕೊಂಡು ಕಾರಿನಲ್ಲಿ ಇಂದು ಬೆಳಗ್ಗೆ ಜಯಪುರ ಹೋಬಳಿ ಮಾರ್ಗವಾಗಿ ಹೋಗುತ್ತಿದ್ದಾಗ ನಾಲ್ವರು ಮುಸುಕುದಾರಿ ದರೋಡೆಕೋರರು ಮಾರ್ಗಮಧ್ಯೆ ರಸ್ತೆಯಲ್ಲಿ ಎರಡು ಕಾರುಗಳನ್ನು ಅಡ್ಡಲಾಗಿ ನಿಲ್ಲಿಸಿ ಇವರ ಕಾರನ್ನು ತಡೆದಿದ್ದಾರೆ.
ನೋಡನೋಡುತ್ತಿದಂತೆ ದರೋಡೆಕೋರರು ಕಾರಿನ ಬಾಗಿಲನ್ನು ಬಲವಂತವಾಗಿ ತೆಗೆಸಿ ಅವರನ್ನು ಕಾರಿನಿಂದ ಹೊರಗೆ ಕರೆತಂದು ಬಲವಂತವಾಗಿ ಕಾರಿನ ಕೀಯನ್ನು ಚಾಲಕನಿಂದ ಕಿತ್ತುಕೊಂಡಿದ್ದಲ್ಲದೆ ಅವರ ಬಳಿಯಿದ್ದ ಹಣದ ಬ್ಯಾಗ್ನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಅಶ್ರಫ್ ಅವರ ಜೊತೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ರಘು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಕ್ಷಣ ಪೊಲೀಸರು ನಾಕಾಬಂಧಿ ಹಾಕಿ ದರೋಡೆಕೋರರಿಗಾಗಿ ಶೋಧ ನಡೆಸುತ್ತಿದ್ದಾರೆ. ಕಳೆದ ವಾರ ಬೀದರ್ನಲ್ಲಿ ಹಾಡಹಗಲೇ ಎಟಿಎಂಗೆ ಹಣ ತುಂಬುವ ಏಜೆನ್ಸಿ ವಾಹನದ ಸಿಬ್ಬಂದಿ ಮೇಲೆ ದರೋಡೆಕೋರರು ಗುಂಡು ಹಾರಿಸಿ ಒಬ್ಬರನ್ನು ಸಾಯಿಸಿ 93 ಲಕ್ಷ ಹಣ ದರೋಡೆ, ವಿಜಯಪುರದಲ್ಲಿ ನಡೆದಿರುವ ದರೋಡೆ ಹಾಗೂ ಮಂಗಳೂರಿನ ಉಲ್ಲಾಳದ ಸಹಕಾರಿ ಬ್ಯಾಂಕ್ ದರೋಡೆ ನಡೆದಿರುವ ಬೆನ್ನಲ್ಲೆ ಇಂದು ಕೇರಳ ಉದ್ಯಮಿಯ ಕಾರು ಅಡ್ಡಗಟ್ಟಿ ದರೋಡೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗಿದೆ.