ಕಲಬುರಗಿ,ಡಿ.30- ಬೀದರ್ನ ಗುತ್ತಿಗೆದಾರ ಸಚಿನ್ ಪಾಂಚಾಳ್ಅವರ ಆತಹತ್ಯೆ ಪ್ರಕರಣಕ್ಕೆ ಭಿನ್ನ ತಿರುವು ದೊರೆತಿದ್ದು, ಆರೋಪಿ ರಾಜ ಕಪನೂರು ಅವರ ಸಹೋದರ ಪ್ರಕಾಶ್ ಕಪನೂರು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಸಚ್ಚಿನ್ ಪಾಂಚಾಳ್ ಅವರು ಆತಹತ್ಯೆಗೂ ಮುನ್ನ ಬರೆದಿರುವ ಪತ್ರದಲ್ಲಿ ಕಲಬುರಗಿಯ ಪಾಲಿಕೆ ಮಾಜಿ ಸದಸ್ಯ ರಾಜು ಕಪನೂರು ತಮಗೆ ಹಣ ನೀಡಬೇಕಿತ್ತು. ಅದನ್ನು ವಾಪಸ್ ಕೊಡದೆ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ರಾಜು ಕಪನೂರು ಸಚಿವ ಪ್ರಿಯಾಂಕ್ ಖರ್ಗೆಯವರ ಆಪ್ತರಾಗಿದ್ದು, ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆಯವರ ಪಾತ್ರವಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸಚಿವರ ರಾಜೀನಾಮೆಗೂ ಒತ್ತಡಗಳು ಹೆಚ್ಚಾಗುತ್ತಿವೆ.
ಈ ನಡುವೆ ಪ್ರಕಾಶ್ ಕಪನೂರು ಕಲಬುರಗಿಯಲ್ಲಿ ದಾಖಲಾತಿಗಳನ್ನು ಬಿಡುಗಡೆ ಮಾಡಿದ್ದು, ಸಚ್ಚಿನ್ ಪಾಂಚಾಳ್ ಅವರಿಗೆ ಗುತ್ತಿಗೆಯೊಂದಕ್ಕೆ ಟೆಂಡರ್ ಸಲ್ಲಿಸಲು ಇಎಂಡಿ ಪಾವತಿಗಾಗಿ 60 ಲಕ್ಷ ರೂ.ಗಳನ್ನು ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ತಮ ಸಹೋದರ ರಾಜು ಕಪನೂರು ಅವರ ವ್ಯಾವಹಾರಿಕ ಸ್ನೇಹಿತರಾದ ಸೊಲ್ಲಾಪುರದ ಮನೋಜ್ ಸೆಲೆ, ಅಪ್ಪು ಪಾಟೀಲ್, ಸಿದ್ಧಾರ್ಥ್ ಅವರುಗಳ ಖಾತೆಯಿಂದ ಹಣವನ್ನು ಸಚ್ಚಿನ್ ಪಾಂಚಾಳ್ಅವರ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಬ್ಯಾಂಕಿನ ವಹಿವಾಟಿನ ದಾಖಲೆಗಳಿವೆ. ಇದನ್ನು ವಾಪಸ್ ನೀಡದೇ ಮರೆಮಾಚಿ ಸಚ್ಚಿನ್ ಪಾಂಚಾಳ್ ಅವರು ರಾಜು ಕಪನೂರು ಅವರೇ ಹಣ ನೀಡಬೇಕು ಎಂದು ಹೇಳುವ ಮೂಲಕ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.