ಬೆಂಗಳೂರು, ಮಾ.7- ಜಾನುವಾರುಗಳ ಆಕಸ್ಮಿಕ ಸಾವಿನಿಂದ ರೈತರು ಅನುಭವಿಸುವ ಆರ್ಥಿಕ ಸಂಕಷ್ಟ ನಿವಾರಣೆಗೆ ಅನುಗ್ರಹ ಯೋಜನೆ ಜಾರಿಗೆ ತರಲಾಗಿದ್ದು, ಇದರಡಿ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
2025-26ನೆ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು, ಈಗಾಗಲೇ ಅನುಗ್ರಹ ಯೋಜನೆ ಜಾರಿಗೆ ತರಲಾಗಿದ್ದು, ಇದರಡಿ ಹಸು, ಎಮ್ಮೆ ಮತ್ತು ಎತ್ತುಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು 10 ಸಾವಿರದಿಂದ 15 ಸಾವಿರ ರೂ.ಗಳಿಗೆ, ಕುರಿ-ಮೇಕೆಗಳಿಗೆ ನೀಡುತ್ತಿರುವ 5 ಸಾವಿರ ರೂ.ಗಳಿಂದ 7500ರೂ. ಹಾಗೂ 3 ರಿಂದ 6 ತಿಂಗಳ ಕುರಿ, ಮೇಕೆಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 3500ರೂ.ಗಳಿಂದ 5000ರೂ.ಗಳಿಗೆ ಹೆಚ್ಚಿಸಲಾಗುವುದು ಎಂದರು.
ಕಳೆದ ಎರಡು ವರ್ಷಗಳಲ್ಲಿ 60 ಹೊಸ ಪಶು ಚಿಕಿತ್ಸಾಲಯಗಳನ್ನು ಕಾರ್ಯಾರಂಭಗೊಳಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ನೂತನ 50 ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ನೂರು ಪಶು ವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ನಬಾರ್ಡ್ ಸಹಯೋಗದೊಂದಿಗೆ ನಿರ್ಮಿಸಲಾಗುವುದು. ರಾಜ್ಯದ ಹೆಮ್ಮೆಯ ತಳಿಗಳಾದ ಹಳ್ಳಿಕಾರ್, ಕಿಲಾರಿ, ಅಮೃತ್ ಮಹಲ್ ಹಾಗೂ ಬಂಡೂರ್ ಕುರಿ ತಳಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ 2 ಕೋಟಿ ರೂ. ಒದಗಿಸಲಾಗುವುದು ಎಂದು ಹೇಳಿದರು.
ಆಧುನಿಕ ಕುರಿ ಸಾಕಾಣಿಕೆ ಪದ್ಧತಿಗಳು ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಲಸೆ ಕುರಿಗಾರರಿಗೆ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.