ಬೆಂಗಳೂರು,ಮೇ20– ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಕಾಲ ಐಸಿಯುನಲ್ಲಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ಒಂದು ವರ್ಷ ಪೂರೈಸಿದೆ. 5 ಗ್ಯಾರಂಟಿಗಳನ್ನು ಹೊರತುಪಡಿಸಿದರೆ ಸರ್ಕಾರದ ಸಾಧನೆ ಇನ್ನೇನಿದೆ ಎಂದು ಪ್ರಶ್ನಿಸಿದರು.
ಐದು ಗ್ಯಾರಂಟಿಗಳ ಬಗ್ಗೆ ಮಾಧ್ಯಮದಲ್ಲಿ ಜಾಹಿರಾತು ನೀಡಿ ಪ್ರಚಾರ ಮಾಡಿದ್ದು ಒಂದು ಕಡೆಯಾದರೆ ಇನ್ನೊಂದು ಕಡೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿನಿತ್ಯ ಸಂಘರ್ಷ ಮಾಡಿದ್ದು ಮತ್ತೊಂದು ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ತೀವ್ರ ಸ್ವರೂಪದ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದು ಎಲ್ಲೂ ಕಾಣಲಿಲ್ಲ. ಇಂದೂ ಒಬ್ಬ ರೈತರು ಆತಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ ಎಂದರು.
ಬರ ಪರಿಹಾರಕ್ಕೆ ನೀಡಿದ್ದ ಹಣವನ್ನು ರೈತರು ಪಡೆದಿದ್ದ ಸಾಲಕ್ಕೆ ವಜಾ ಹಾಕುತ್ತಿರುವುದು ಕೇಳಿಬರುತ್ತಿದೆ. ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹಧನ 600ರಿಂದ 700 ಕೋಟಿ ರೂ. ಪಾವತಿಯಾಗಿಲ್ಲ. ಹಲವು ಇಲಾಖೆಗಳಲ್ಲಿ ಎರಡುಮೂರು ತಿಂಗಳಿನಿಂದ ಸಂಬಳವನ್ನೇ ಕೊಟ್ಟಿಲ್ಲ. ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ಎಷ್ಟು ಸಭೆ ನಡೆಸಿ ಅಧಿಕಾರಿಗಳಿಗೆ ಆಡಳಿತ ಹಾಗೂ ಅಭಿವೃದ್ಧಿಯ ಪ್ರಗತಿಗೆ ಸೂಚನೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.