ಬೆಂಗಳೂರು, ಡಿ.8- ಕುಡಿದು ಬಂದು ಯುವತಿ ಜತೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಅಪಾರ್ಟ್ ಮೆಂಟ್ವೊಂದರ ಮಾಲೀಕರ ಮಗನನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಂಜಯನಗರದ ಪ್ಲಾನೆಟ್ ವಿಸ್ತಾ ಅಪಾರ್ಟ್ಮೆಂಟ್ನ ಮಾಲೀಕರ ಮಗ
ಮಂಜುನಾಥ್ ಬಂಧಿತ ಆರೋಪಿ. ಹೊಟೇಲ್ವೊಂದನ್ನು ನಡೆಸುತ್ತಿರುವ ಪಶ್ಚಿಮ ಬಂಗಾಳದ ಯುವತಿ ಪ್ಲಾನೆಟ್ ವಿಸ್ತಾ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಾರೆ.
ಕಳೆದ 3ರಂದು ರಾತ್ರಿ 10.30ರ ಸಮಯದಲ್ಲಿ ಯುವತಿ ಪಾರ್ಸಲ್ ತೆಗೆದುಕೊಳ್ಳಲು ಗೇಟ್ ಬಳಿ ಬಂದಾಗ ಆರೋಪಿ ಮಂಜುನಾಥ್ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆತ ಕುಡಿದಿದ್ದಾನೆ ಎಂದು ಏನೂ ಮಾತನಾಡದೆ ಯುವತಿ ಸುಮನಾಗಿದ್ದಾಳೆ.
ಮತ್ತೆ ಆರೋಪಿ ಬಯ್ಯುತ್ತಾ ಯುವತಿಯ ಕಪಾಳಕ್ಕೆ ಹೊಡೆದಿದ್ದಾನೆ. ಅಲ್ಲದೆ, ಬಿಗಿಯಾಗಿ ಕುತ್ತಿಗೆ ಹಿಡಿದಿದ್ದಾನೆ. ತಪ್ಪಿಸಿಕೊಳ್ಳಲು ಹೋದಾಗ ಬೆರಳು ಕಚ್ಚಿ ಗಾಯಗೊಳಿಸಿದ್ದಾನೆ. ನಂತರ ಯುವತಿಯನ್ನು ಮನೆಯೊಳಗೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ತಕ್ಷಣ ಯುವತಿ ಆತನಿಂದ ತಪ್ಪಿಸಿಕೊಂಡು ಮನೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ.
ಬೆಳಗ್ಗೆ ಆರೋಪಿ ಮಂಜುನಾಥ್ ಯುವತಿ ಮನೆಯ ಕಿಟಕಿಯಲ್ಲಿ ಇಣುಕಿ ಒಳಗೆ ಬರುತ್ತೇನೆ ಬಾಗಿಲು ತೆಗಿ ಎಂದು ಹೇಳಿದ್ದಾನೆ. ಆಗ ಯುವತಿ ಬಾಗಿಲು ತೆಗೆದಿಲ್ಲ. ಇದರಿಂದ ಕೋಪಗೊಂಡು ಮತ್ತೆ ನಿಂದಿಸಿ ಗಲಾಟೆ ಮಾಡಿ ಹೋಗಿದ್ದಾನೆ.
ಇದರಿಂದ ಮನನೊಂದ ಯುವತಿ ಸಂಜಯನಗರ ಠಾಣೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.