ನವದೆಹಲಿ, ಜೂ.28- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನಾಳೆ ಸಂಜೆ ಭೇಟಿ ಮಾಡುತ್ತಿದ್ದು, ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಮತ್ತೆ ಮನವಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಿನ್ನೆ ಸಂಸದರ ಸಭೆ ನಡೆಸಿದ ಕುರಿತಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾವೇರಿ ನದಿ ನೀರಿನ ವಿವಾದ ಈಗಾಗಲೇ ನ್ಯಾಯಾಧಿಕರಣದಲ್ಲಿ ಇತ್ಯರ್ಥವಾಗಿದೆ. ತೀರ್ಪಿನಂತೆ ತಮಿಳುನಾಡಿಗೆ ಸಾಮಾನ್ಯ ವರ್ಷದಲ್ಲಿ 179 ಟಿಎಂಸಿ ನೀರು ಹರಿಸಲು ಕರ್ನಾಟಕ ಒಪ್ಪಿಕೊಂಡಿದೆ.
ಹೆಚ್ಚುವರಿ ನೀರಿನ ಸಂಗ್ರಹಕ್ಕೆ ನಮ ನೆಲದಲ್ಲಿ ನಮ ಹಣದಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟಲು ನಾವು ಯೋಜನೆ ರೂಪಿಸಿದ್ದೇವೆ. ತಮಿಳುನಾಡು ರಾಜಕೀಯ ಕಾರಣಕ್ಕೆ ತಕರಾರು ತೆಗೆದು ಸುಪ್ರೀಕೋರ್ಟ್ ಮೊರೆ ಹೋಗಿದೆ. ಆದರೂ ಯಾವ ನ್ಯಾಯಾಲಯದಲ್ಲೂ ತಡೆಯಾಜ್ಞೆ ಇಲ್ಲ. ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕಿದೆ ಎಂದು ವಿವರಿಸಿದರು.
ಕಳೆದ ವರ್ಷ ಡಿಸೆಂಬರ್ 19ರಂದು ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿದಾಗ ಮೇಕೆದಾಟು ಯೋಜನೆಯನ್ನು ಪ್ರಸ್ತಾಪಿಸಲಾಗಿತ್ತು. ನಾಳೆಯ ಭೇಟಿಯಲ್ಲಿಯೂ ಮತ್ತೆ ಪ್ರಸ್ತಾಪ ಮಾಡುತ್ತೇವೆ. ತಮಿಳುನಾಡು ಜೊತೆ ಸಭೆ ಕರೆಯಿರಿ ಎಂದು ನಾವು ಹೇಳುವುದಿಲ್ಲ. ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರದ ಮನವೋಲಿಸಬೇಕು ಅಥವಾ ಅನುಮತಿ ನೀಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದಲ್ಲಿ ಡಿಎಂಕೆ ಮಿತ್ರ ಪಕ್ಷವಾಗಿದೆ. ಹಾಗಾಗಿ ಕಾಂಗ್ರೆಸ್ ಸರ್ಕಾರ ಡಿಎಂಕೆಯವರ ಜೊತೆ ಚರ್ಚಿಸಬೇಕು ಎಂದು ಬಿಜೆಪಿ ಹೇಳುತ್ತಿರುವುದು ಅರ್ಥಹೀನ. ಗೋವಾದಲ್ಲಿ ಬಿಜೆಪಿ ಸರ್ಕಾರ ಇದೆ. ಅವರು ಮಾತನಾಡಿ ಮಹಾದಾಯಿ ಯೋಜನೆಗೆ ಅನುಮತಿ ಕೊಡಿಸುತ್ತಾರೆಯೇ ಎಂದು ಮರು ಪ್ರಶ್ನಿಸಿದರು.
ಮಹದಾಯಿ ಕುಡಿಯುವ ನೀರಿನ ಯೋಜನೆ 2018ರಲ್ಲಿ ಇತ್ಯರ್ಥವಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ಇದೆ ನಿನ್ನೆ ಸಭೆಗೂ ಮುನ್ನಾ ಕೇಂದ್ರ ಸಚಿವರು ನೀಡಿರುವ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಅದು ತಪ್ಪು ಮಾಹಿತಿ. ವಿವಾದ ಕುರಿತು ನ್ಯಾಯಾಧೀಕರಣದ ತೀರ್ಪು ನೀಡಿದೆ, ಅದು ಅಧಿಸೂಚನೆಯೂ ಆಗಿದೆ. ಅದರ ಆಧಾರದ ಮೇಲೆ ನಾವು ಮಹದಾಯಿ ಯೋಜನೆಗೆ ವಿಸ್ತ್ರ ಯೋಜನಾ ವರದಿ ಸಿದ್ದಪಡಿಸಿ, ಟೆಂಡರ್ ಕರೆದಿದ್ದೇವೆ.
ಅದಕ್ಕೆ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಮಾತ್ರ ಬಾಕಿ ಇದೆ. ಅದಕ್ಕೆ ನ್ಯಾಯಾಲಯದಲ್ಲಿ ಪ್ರಕರಣ ಇದೆ ಎಂದು ನೆಪ ಹೇಳಬೇಡಿ ಕೇಂದ್ರದಿಂದ ಅನುಮತಿ ಕೊಡಿಸಿ ಎಂದು ಕೇಂದ್ರ ಸಚಿವರು ಹಾಗೂ ಸಂಸದರದಲ್ಲಿ ಮನವಿ ಮಾಡಿದ್ದೇವೆ ಎಂದರು.
ಭದ್ರ ಮೇಲ್ಡಂಡೆ ಯೋಜನೆಗೆ 5300 ಕೋಟಿ ನೀಡುವುದಾಗಿ 2023-24ರ ಆರ್ಥಿಕ ವರ್ಷದಲ್ಲಿ ಘೋಷಣೆ ಮಾಡಿದ್ದರು. ಹಣ ಬಿಡುಗಡೆಯಾಗಿಲ್ಲ. ರಾಜ್ಯದಿಂದ ತಾಂತ್ರಿಕ ಸಮಸ್ಯೆ ಇದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಆ ರೀತಿ ಸಮಸ್ಯೆ ಇದೆ ಎಂದು ಈವರೆಗೂ ನಮಗೆ ಹೇಳಿರಲಿಲ್ಲ, ಅಸಲಿಗೆ ಯಾವುದೇ ಸಮಸ್ಯೆಯೂ ಇಲ್ಲ. ಹಣ ಬಿಡುಗಡೆ ಮಾಡುವಂತೆ ನಾವು ಪತ್ರ ಬರೆದಿದ್ದೇವೆ. ಹಣ ಸಿಗಲಿದೆ ಎಂಬ ಆಶಾಭಾವನೆ ಇದೆ. ಅದೇ ರೀತಿಕೃಷ್ಣ ನ್ಯಾಯಾಧೀಕರಣ ತೀರ್ಪಿನ ಅಧಿಸೂಚನೆಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ಆಗ್ರಹಿಸಿದ್ದೇವೆ ಎಂದು ಹೇಳಿದರು.
ರಾಜಕೀಯಕ್ಕಾಗಿ ಕೇಂದ್ರ ಸಚಿವರ ಪತ್ರ:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರ ಬರೆದು ಕರ್ನಾಟಕದಲ್ಲಿ ವಿತ್ತಿಯ ಕೊರತೆ ಹೆಚ್ಚಾಗಿದೆ ಎಂದು ಹೇಳಿರುವುದರ ಹಿಂದೆ ರಾಜಕೀಯ ಅಡಗಿದೆ.ವಿತ್ತಿಯ ಶೇ.2.1ರಿಂದ ಶೇ.3ಕ್ಕೆ ಹೋಗಿದೆ ಎಂಬುದು ತಪ್ಪು ಮಾಹಿತಿ. ವಿತ್ತಿಯ ಜವಾಬ್ದಾರಿ ಶೇ.3ರಷ್ಟಿರಬೇಕು ಎಂಬ ನಿಯಮ ಇದೆ. ರಾಜ್ಯದಲ್ಲಿ ವಿತ್ತಿಯ ಕೊರತೆ ಶೇ.2.6ರಷ್ಟಿದ್ದು, ಕಾನೂನು ರೀತಿ ಮಿತಿಯಲ್ಲಿದೆ. ಕೇಂದ್ರ ಸರ್ಕಾರ ವಿತ್ತಿಯ ಕೊರತೆ ನಿರ್ವಹಣೆಯಲ್ಲಿ ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿದೆಯೇ ಎಂದು ಪ್ರಶ್ನಿಸಿದರು.
ನಮಲ್ಲಿ ಕಂದಾಯ ವೆಚ್ಚ ಹೆಚ್ಚಾಗಿರುವುದು ನಿಜ. ಇದರಿಂದಾಗಿ ಕಂದಾಯ ಕೊರತೆ ಹೆಚ್ಚಾಗಿದೆ. ಮುಂದಿನ ವರ್ಷ ಇದನ್ನು ಸರಿ ಪಡಿಸಿಕೊಳ್ಳಲಾಗುವುದು. ಒಟ್ಟು ಸಾಲ ಜಿಡಿಪಿಯ ಶೇ.25ರ ಒಳಗೆ ಇರಬೇಕು ಎಂದಿದೆ. ನಮ ಆರ್ಥಿಕ ಸ್ಥಿತಿ ನಿಯಮ ಅನುಸಾರ ಮಿತಿಯಲ್ಲಿದೆ. ಕೇಂದ್ರ ಸಚಿವರ ಪತ್ರಕ್ಕೆ ಸವಿಸ್ತಾರವಾಗಿ ಉತ್ತರ ನೀಡಲಾಗುವುದು ಎಂದು ಹೇಳಿದರು.
ಪೆಟ್ರೋಲ್ ಡಿಸೇಲ್ ದರ ಹೆಚ್ಚಿಸಿದವರು ಕೇಂದ್ರ ಸರ್ಕಾರ. ಕೇಂದ್ರ ಅಬಕಾರಿ ತೆರಿಗೆಯನ್ನು ಹೆಚ್ಚಿಸಿದ್ದು ನರೇಂದ್ರ ಮೋದಿಯವರು ಹೀಗಾಗಿ ತೈಲ ಬೆಲೆ ಮತ್ತು ಅಗುಗೆ ಅನಿಲ ಹೆಚ್ಚಾಗಿದೆ. ನಮ ಸರ್ಕಾರ ಹಾಲಿನ ದರ ಹೆಚ್ಚಿಸಿಲ್ಲ. ಹಾಲಿನ ಸಂಗ್ರಹ ಹೆಚ್ಚಾಗಿದೆ. ಅದಕ್ಕಾಗಿ ಹಾಲಿನ ಪ್ರಮಾಣವನ್ನು ಹೆಚ್ಚು ಮಾಡಿ ಅದಕ್ಕೆ ತಗಲುವ ವೆಚ್ಚವನ್ನು ಗ್ರಾಹಕರಿಂದ ಪಡೆಯುತ್ತಿದ್ದೇವೆ. ಹಿಂದೆ ಮೂರು ರೂಪಾಯಿ ದರ ಹೆಚ್ಚಿಸಿದಾಗಲೂ ಅದನ್ನು ಸಂಪೂರ್ಣ ರೈತರಿಗೆ ನೀಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಬೆಲೆ ಹೆಚ್ಚಿಸಲಾಗುತ್ತಿದೆ ಎಂದು ಬಿಜೆಪಿ ಅನಗತ್ಯವಾಗಿ ಆರೋಪ ಮಾಡುತ್ತಿದೆ. ಕಳೆದ ಐದಾರು ವರ್ಷದಿಂದ ಕಂದಾಯ ಇಲಾಖೆಯಲ್ಲಿ ಮಾರ್ಗಸೂಚಿ ಬೆಲೆ ಪರಿಷ್ಕರಣೆಯಾಗಿರಲಿಲ್ಲ. ಅದಕ್ಕಾಗಿ ಹೆಚ್ಚಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ಹಣದುಬ್ಬರ ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿಗಿಂತ ರಾಜ್ಯದಲ್ಲಿ ಹಣದುಬ್ಬರ ಕಡಿಮೆ ಇದೆ. ಶೇ.80ರಷ್ಟು ಹಣದುಬ್ಬರಕ್ಕೆ ಕೇಂದ್ರ ಸರ್ಕಾರ ಕಾರಣವಾಗಿದೆ ಎಂದು ದೂರಿದರು.ಬರ ಪರಿಹಾರಕ್ಕೆ ನ್ಯಾಯಾಲಯಕ್ಕೆ ಮೇಲನವಿ ಸಲ್ಲಿಸಿ ಕಾನೂನು ಸಂಘರ್ಷದಿಂದ ಆರ್ಥಿಕ ನೆರವು ಪಡೆದುಕೊಳ್ಳಲಾಗಿದೆ. ಹಾಗಿದ್ದರೆ ಕೇಂದ್ರ ಸಚಿವರ ಜವಾಬ್ದಾರಿ ಏನು ಎಂದು ಪ್ರಶ್ನಿಸಿದರು.ವಾಲೀಕಿ ಅಭಿವೃದ್ಧಿ ನಿಗಮ ಎಸ್‌ಐಟಿ ತನಿಖೆಯಾಗಿದೆ, ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ.
ಬ್ಯಾಂಕ್ ಹಗರಣವಾಗಿರುವುದರಿಂದ ಸಿಬಿಐ ತನಿಖೆಯೂ ನಡೆಯುತ್ತಿದೆ. ನಾವು ಪೊಲೀಸ್‌ರಿಗೆ ದೂರು ನೀಡಿದ್ದೇವೆ. ಅದರ ತನಿಖೆ ಮಾಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಒಂದು ಪ್ರಕರಣವನ್ನೂ ಸಿಬಿಐಗೆ ವಹಿಸಿಲ್ಲ. ಅಧಿಕಾರದಲ್ಲಿ ಇಲ್ಲದಿದ್ದಾಗ ಸಿಬಿಐ ತನಿಖೆ ಬೇಕು ಎನ್ನುತ್ತಾರೆ ಎಂದು ತಿರುಗೇಟು ನೀಡಿದರು.