ಬೆಂಗಳೂರು, ಫೆ. 11- ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಬಿಬಿಎಂಪಿಯ ಮಹದೇವಪುರ ವಲಯದಲ್ಲಿ ಸಲಹೆ ಮತ್ತು ಅಭಿಪ್ರಾಯ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಬಹುತೇಕರು ಮೊದಲು ಬಿಬಿಎಂಪಿ ಚುನಾವಣೆ ನಡೆಸಿ ಬಳಿಕ ಗ್ರೇಟರ್ ಬೆಂಗಳೂರು ವಿಧೇಯಕ ತನ್ನಿ ಎಂಬ ಕೂಗು ಕೇಳಿ ಬಂದವು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಶಾಸಕರಾದ ಬೈರತಿ ಬಸವರಾಜ, ರಿಜ್ವಾನ್ ಹರ್ಷದ್, ಜಂಟಿ ಆಯುಕ್ತೆ ದಾಕ್ಷಾಯಿಣಿ, ರಮೇಶ್ ಅವರನ್ನೊಳಗೊಂಡ ತಂಡ ಆಯೋಜಿಸಿದ್ದ ಸಭೆಯಲ್ಲಿ ಬಿಬಿಎಂಪಿ ಚುನಾವಣೆ ನಡೆದು ಐದು ವರ್ಷಗಳು ಕಳೆಯುತ್ತಾ ಬರುತ್ತಿದೆ. ಇದೀಗ ಗ್ರೇಟರ್ ಬೆಂಗಳೂರು ಎಂದು ಹೇಳಿ ಮತ್ತೆ ಚುನಾವಣೆ ಮುಂದೂಡಲು ಸಂಚು ರೂಪಿಸುತ್ತಿದ್ದೀರ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಗ್ರೇಟರ್ ಬೆಂಗಳೂರಿನಿಂದ ಭಾಷೆ ಕುತ್ತು ಬರಲಿದೆ, ಕೆಂಪೇಗೌಡರು ಕಟ್ಟಿದ ನಾಡು ಛಿದ್ರವಾಗುತ್ತದೆ, ಅನ್ಯಭಾಷಿಗರ ಹಾವಳಿ ಹೆಚ್ಚುತ್ತದೆ, ಎಂಎಲ್ ಎ ಗಳೇ ಅನುದಾನ ಪಡೆಯಲು ತಾರತಮ್ಯ ನಡೆಯುತ್ತಿದೆ. ಇನ್ನು ಗ್ರೇಟರ್ ಬೆಂಗಳೂರು ಆದರೆ ಸಚಿವರ ಮನೆ ಬಾಗಿಲಿನಲ್ಲಿ ಕಾರ್ಪೋರೇಟರ್ಗಳು ಇರಬೇಕಾಗುತ್ತದೆ, ಇನ್ನು ಹತ್ತು ವರ್ಷ ಗ್ರೇಟರ್ ಬೆಂಗಳೂರು ಬೇಡ, ಕಾವೇರಿ ನೀರು ಬೆಂಗಳೂರಿಗೆ ಸಾಕಾಗುತ್ತಿಲ್ಲ ಇನ್ನು ಪಕ್ಕದ ಪಂಚಾಯಿತಿಗಳಿಗೆ ಹೇಗೆ ಕೊಡುವುದು ಎಂಬುದು ಸೇರಿದಂತೆ ಸಾಕಷ್ಟು ವಿಷಯಗಳು ಚರ್ಚೆಗೆ ಬಂದವು.
ಶಾಸಕ ಬೈರತಿ ಬಸವರಾಜ ಮಾತನಾಡಿ, ಗ್ರೇಟರ್ ಬೆಂಗಳೂರು ವಿಧೇಯಕ್ಕೆ ನಮ ವಿರೋಧವಿದೆ. ಅಧಿಕಾರ ವಿಕೇಂದ್ರೀಕರಣ ಮಾಡಿ ಹೆಚ್ಚಿನ ಶಕ್ತಿ ವಲಯ ಆಯುಕ್ತರಿಗೆ ನೀಡಿ, ಬೆಂಗಳೂರು ನಗರದ ಬಗ್ಗೆ ತಿಳಿದಿರುವವರಿಗೆ ಬೆಂಗಳೂರು ಉಸ್ತುವರಿ ನೀಡಿ, ಕೆಂಪೇಗೌಡರು ನಿರ್ಮಾಣ ಮಾಡಿರುವ ಬೆಂಗಳೂರಿಗೆ ಕಪ್ಪುಚುಕ್ಕೆ ಬರದಂತೆ ನೋಡಿಕೊಳ್ಳಿ ಎಂದು ತಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕ ರಿಜ್ವಾನ್ ಹರ್ಷದ್ ಮಾತನಾಡಿ, ಜಿಬಿಎ ಬಗ್ಗೆ ಜನರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ, ಬಿಬಿಎಂಪಿ ಬೆಸ್ಟ್ ಅಲ್ಲ ಆದ್ದರಿಂದ ಇನ್ನಷ್ಟು ಅಭಿವೃದ್ಧಿ ಮಾಡುವುದಕ್ಕಾಗಿ ಗ್ರೇಟರ್ ಬೆಂಗಳೂರು ತರುತ್ತಿದ್ದೇವೆ. ಈಗಾಗಲೇ ಎಲ್ಲಾ ಪಕ್ಷದ ಶಾಸಕರನ್ನು ಒಳಗೊಂಡಂತೆ 18 ಸಭೆಗಳನ್ನು ಮಾಡಿ ಸಲಹೆಗಳನ್ನು ಸ್ವೀಕರಿಸಿದ್ದೇವೆ, ನಿಮ ವಲಯ ಸಮಸ್ಯೆ ಬಗೆಹರಿಸಲು ನಿಮ ವಲಯದಲ್ಲೇ ಚರ್ಚೆ ಮಾಡಲು ಈ ಗ್ರೇಟರ್ ಬೆಂಗಳೂರು ತರುತ್ತಿದ್ದೇವೆ. ಜನರಿಂದ ಸಲಹೆ ಪಡೆದು ಮುಂದಿ ಅಧಿವೇಶನದಲ್ಲೇ ಈ ಬಿಲ್ ತರುತ್ತೇವೆ, ಈ ಬಗ್ಗೆ ಸ್ಪೀಕರ್ಗೆ ವರದಿ ನೀಡುತ್ತೇವೆ ಎಂದು ಹೇಳಿದರು.
ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಗ್ರೇಟರ್ ಬೆಂಗಳೂರು ಬರುವುದಕ್ಕೆ ಸ್ವಾಗತಾರ್ಹ, ಇನ್ಫ್ರಾಸ್ಟ್ರಕ್ಚರ್ ಸಮಸ್ಯೆ ಬರಬಹುದು ಈ ಬಗ್ಗೆ ಗಮನವಿರಲಿ, ಐದಾರು ತಿಂಗಳಲ್ಲಿ ಈ ವಿಧೇಯಕ ಬಂದು ಬೇಗ ಬಿಬಿಎಂಪಿ ಚುನಾವಣೆ ನಡೆಯಲಿ ಹಾಗೂ ಗ್ರೇಟರ್ ಬೆಂಗಳೂರಿಗೆ ಶ್ರೇಷ್ಠ ಬೆಂಗಳೂರು ಎಂದು ಹೆಸರಿಡಲು ಮನವಿ ಮಾಡಿದರು.
ಪಾಲಿಕೆ ಮಾಜಿ ಸದಸ್ಯರಾದ ಜಯಪ್ರಕಾಶ್, ಶ್ರೀಕಾಂತ್, ವೀರಣ್ಣ, ಸುರೇಶ್, ಸಿದ್ದಲಿಂಗಯ್ಯ,ಸುಗುಮಾರ್, ಎಸ್.ಜಿ.ನಾಗರಾಜ್, ಉದಯ್ಕುಮಾರ್, ಸ್ಥಳೀಯ ಮುಖಂಡರಾದ ಮುನೇಗೌಡ, ಇಟಾಚಿ ಮಂಜು, ಸಂಪತ್, ಮಾರ್ಕೆಟ್ ರಮೇಶ್, ಲೋಕೇಶ್, ಜಯರಾಂ, ಜಯರಾಂ ರೆಡ್ಡಿ, ಸುನೀಲ್ ಹಾಜರಿದ್ದರು.