Saturday, September 6, 2025
Homeರಾಜ್ಯಸೆ.7ರ ರಾತ್ರಿ ಅಪೂರ್ವ ಸಂಭವಿಸಲಿರುವ ಚಂದ್ರಗ್ರಹಣ ಕಣ್ತುಂಬಿಕೊಳ್ಳಲು ಸಾರ್ವಜನಿಕರಲ್ಲಿ ಮನವಿ

ಸೆ.7ರ ರಾತ್ರಿ ಅಪೂರ್ವ ಸಂಭವಿಸಲಿರುವ ಚಂದ್ರಗ್ರಹಣ ಕಣ್ತುಂಬಿಕೊಳ್ಳಲು ಸಾರ್ವಜನಿಕರಲ್ಲಿ ಮನವಿ

Appeal to the public to watch the rare lunar eclipse on the night of September 7

ಬೆಂಗಳೂರು,ಸೆ.5- ಸೆಪ್ಟೆಂಬರ್‌ 7ರ ರಾತ್ರಿ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದ್ದು, ಕರ್ನಾಟಕ ಸೇರಿದಂತೆ ಭಾರತದೆಲ್ಲೆಡೆ ಗೋಚರವಾಗಲಿದೆ. ಈ ಅಪರೂಪದ ಕ್ಷಣವನ್ನು ಬರಿಗಣ್ಣಿನಿಂದ ಸುಲಭವಾಗಿ ನೋಡಬಹುದಾಗಿದೆ.

ಈ ನೆರಳಿನ ಆಟವನ್ನು ಕಣ್ಣುಂಬಿಕೊಳ್ಳುವ ಅಪೂರ್ವ ಕ್ಷಣ. ಎಲ್ಲರೂ ಹೊರಗೆ ಬಂದು ಈ ಗ್ರಹಣವನ್ನು ಆನಂದಿಸಬೇಕು ಎಂದು ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಯ ನಿರುಜ್‌ ಮೋಹನ್‌ ರಾಮಾನುಜಂ, ಜವಾಹರಲಾಲ್‌ ನೆಹರು ತಾರಾಲಯನಿರ್ದೇಶ ಬಿ.ಆರ್‌.ಗುರುಪ್ರಸಾದ್‌ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ನಿಖರವಾಗಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಈ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರಿಂದ ಕೆಲಕಾಲ ಅದು ಮರೆಮಾಡಲ್ಪಡುತ್ತದೆ. ಭೂಮಿಯ ನೆರಳಿನಲ್ಲಿ ಎರಡು ಭಾಗಗಳಿರುತ್ತವೆ – ಒಳಗಿನ ಗಾಢ ಕತ್ತಲೆಯ ಭಾಗವನ್ನು ಅಂಬ್ರಾ ಎಂದು ಕರೆಯಲಾಗುತ್ತದೆ,

ಹೊರಗಿನ ಮಬ್ಬಾದ ಭಾಗವನ್ನು ಪೆನಂಬ್ರಾ ಎಂದು ಕರೆಯಲಾಗುತ್ತದೆ. ಚಂದ್ರನು ಅಂಬ್ರಾ ನೆರಳಿನೊಳಗೆ ಪ್ರವೇಶಿಸುವಾಗ ಅಥವಾ ಅದನ್ನು ತೊರೆಯುವಾಗ, ನಾವು ಪಾರ್ಶ್ವ ಚಂದ್ರಗ್ರಹಣವನ್ನು ಬರಿಗಣ್ಣಿನ ಮೂಲಕ ಸುಲಭವಾಗಿ ಗಮನಿಸಬಹುದು. ಚಂದ್ರನು ಸಂಪೂರ್ಣವಾಗಿ ಅಂಬ್ರಾ ನೆರಳಿನೊಳಗೆ ಪ್ರವೇಶಿಸಿದಾಗ, ಸಂಪೂರ್ಣ ಗ್ರಹಣವಾಗಿ ಚಂದ್ರ ತಾಮ್ರವರ್ಣದ ಅಥವಾ ಗಾಢ ಕೆಂಪು ಬಣ್ಣದಲ್ಲಿ ಕಾಣಿಸುಕೊಳ್ಳುತ್ತದೆ. ಪೆನಂಬ್ರಾ ನೆರಳಿನೊಳಗೆ ಚಂದ್ರ ಇರುವಾಗ, ಅದರ ಪ್ರಕಾಶದಲ್ಲಿ ಸ್ವಲ್ಪ ಕಡಿಮೆಯಾದರೂ ಅದನ್ನು ಬರಿಗಣ್ಣಿನಿಂದ ಗುರುತಿಸುವುದು ಕಷ್ಟ ಎಂದರು.

ಸೆ. 7ರಂದು ರಾತ್ರಿ 9:57 ಕ್ಕೆ ಚಂದ್ರನು, ಭೂಮಿಯ ಗಾಢ ನೆರಳಾದ ಅಂಬ್ರಾ ಒಳಗೆ ಪ್ರವೇಶಿಸಲು ಆರಂಭಿಸುತ್ತದೆ, ಇದು ಪಾರ್ಶ್ವ ಚಂದ್ರಗ್ರಹಣದ ಆರಂಭ. ನಂತರ ಚಂದ್ರನ ಹೆಚ್ಚಿನ ಭಾಗ ಭೂಮಿಯ ನೆರಳಿನಿಂದ ಆವರಿಸಲ್ಪಡುತ್ತಾ, 11:01ಕ್ಕೆ ಅದು ಸಂಪೂರ್ಣವಾಗಿ ಅಂಬ್ರಾದೊಳಗೆ ಸೇರುತ್ತದೆ. ಸಂಪೂರ್ಣ ಚಂದ್ರಗ್ರಹಣವು 82 ನಿಮಿಷಗಳವರೆಗೆ, ಅಂದರೆ 12:23ರವರೆಗೆ, ಮುಂದುವರಿಯುತ್ತದೆ.

ಬಳಿಕ ಚಂದ್ರನು ನಿಧಾನವಾಗಿ ಅಂಬ್ರಾದಿಂದ ಹೊರಬರಲಾರಂಭಿಸಿ, ಈ ಪಾರ್ಶ್ವ ಹಂತವು 1:26ರವರೆಗೆ ಮುಂದುವರಿಯುತ್ತದೆ. ಪಾರ್ಶ್ವಛಾಯಾ ಹಂತವು ರಾತ್ರಿ 8:58ಕ್ಕೆ ಆರಂಭವಾಗಿ, ಬೆಳಗಿನ ಜಾವ 2:25ಕ್ಕೆ ಅಂತ್ಯಗೊಳ್ಳುತ್ತದೆ. ಸಂಪೂರ್ಣ ಚಂದ್ರಗ್ರಹಣದ ಹಂತದಲ್ಲಿ, ಚಂದ್ರನು ಭೂಮಿಯ ನೆರಳಿನೊಳಗೆ ಪ್ರವೇಶಿಸಿದಾಗ ಅದು ಆಕಾಶದಲ್ಲಿ ಕಾಣಿಸದೆ ಹೋಗುತ್ತದೆ ಎಂದು ನಾವು ಭಾವಿಸಬಹುದು. ಆದರೆ ಹಾಗಾಗದೆ, ಅದು ಗಾಢ ಕೆಂಪು ಅಥವಾ ತಾಮ್ರವರ್ಣದಲ್ಲಿ ಗೋಚರಿಸುತ್ತದೆ.

ಇದಕ್ಕೆ ಕಾರಣವೆಂದರೆ, ಸೂರ್ಯನ ಬೆಳಕಿನ ಕೆಂಪು ಬಣ್ಣದ ಕಿರಣಗಳು ಭೂಮಿಯ ತೆಳುವಾದ ವಾತಾವರಣದ ಮೂಲಕ ಹಾದುಹೋಗಿ ಚಂದ್ರನ ಮೇಲೆ ತಲುಪುತ್ತವೆ. ನೀಲಿ ಬಣ್ಣದ ಕಿರಣಗಳು ಮಾತ್ರ ಭೂಮಿಯ ಹಗಲಿನ ಆಕಾಶದಲ್ಲಿ ಆಗುವಂತೆ ಚದುರಿಬಿಡುತ್ತವೆ. ಚಂದ್ರಗ್ರಹಣವನ್ನು ವೀಕ್ಷಿಸಲು ಯಾವುದೇ ವಿಶೇಷ ಸಾಧನಗಳ ಅಗತ್ಯವಿಲ್ಲ. ಬರಿಗಣ್ಣಿನಿಂದ ನೋಡಲು ಇದು ಸಂಪೂರ್ಣ ಸುರಕ್ಷಿತ. ಆದರೆ ದೂರದರ್ಶಕ ಅಥವಾ ದುರ್ಬೀನನ್ನು ಬಳಸಿದರೆ ವೀಕ್ಷಣೆಯ ಅನುಭವ ಇನ್ನಷ್ಟು ಸುಂದರವಾಗುತ್ತದೆ. ಗ್ರಹಣವೆಂಬುದು ನೆರಳಿನ ಆಟ ಮಾತ್ರ ಇದನ್ನು ಭಾರತದಲ್ಲಿ ಆರ್ಯಭಟನ ಕಾಲದಲ್ಲೇ ತಿಳಿಯಲಾಗಿತ್ತು. ಇದರಿಂದ ಮಾನವರಿಗೆ, ಪ್ರಾಣಿಗಳಿಗೆ, ಸಸ್ಯಗಳಿಗೆ ಅಥವಾ ಆಹಾರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಆದ್ದರಿಂದ ಜನರು ಹೊರಗೆ ಬಂದು ಗ್ರಹಣವನ್ನು ವೀಕ್ಷಿಸುವಾಗ ಆಹಾರ ಸೇವಿಸುವುದೂ ಸಂಪೂರ್ಣ ಸುರಕ್ಷಿತ ಎಂದು ಅವರು ಮಾಹಿತಿ ನೀಡಿದರು.

RELATED ARTICLES

Latest News