Friday, October 18, 2024
Homeರಾಜ್ಯದೋಷಾರೋಪಣಾ ಪಟ್ಟಿ ಸಲ್ಲಿಕೆ ಬಳಿಕ ಜಾಮೀನಿಗೆ ಅರ್ಜಿ : ದರ್ಶನ್‌ ಪರ ವಕೀಲ

ದೋಷಾರೋಪಣಾ ಪಟ್ಟಿ ಸಲ್ಲಿಕೆ ಬಳಿಕ ಜಾಮೀನಿಗೆ ಅರ್ಜಿ : ದರ್ಶನ್‌ ಪರ ವಕೀಲ

ಬೆಂಗಳೂರು,ಜು.27- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಬಳಿಕ ನಟ ದರ್ಶನ್‌ ಹಾಗೂ ಇತರರಿಗೆ ಜಾಮೀನು ಅರ್ಜಿ ಸಲ್ಲಿಸುವುದಾಗಿ ವಕೀಲ ರಂಗನಾಥರೆಡ್ಡಿ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪೊಲೀಸರ ತನಿಖೆಯ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಜಾಮೀನು ಅರ್ಜಿ ಸಲ್ಲಿಕೆ ವಿಳಂಬವಾಗಬೇಕು ಎಂಬ ಕಾರಣಕ್ಕಾಗಿಯೇ ಅಭಿಯೋಜನೆ ಅಧಿಕಾರಿಗಳು ತನಿಖೆಯಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ಅಭಿಯೋಜನೆಯಲ್ಲಿ ಉದ್ದೇಶಪೂರ್ವಕವಾಗಿಯೇ ತನಿಖಾ ವರದಿ ಸಲ್ಲಿಕೆಯನ್ನು ವಿಳಂಬ ಮಾಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ನ್ಯಾಯಾಲಯದ ವಿಚಾರಣೆ ವೇಳೆ ತನಿಖೆಗೆ ಹಿನ್ನಡೆಯುಂಟು ಮಾಡುತ್ತದೆ ಎಂದಿದ್ದಾರೆ.

ರಿಮ್ಯಾಂಡ್‌ ಅರ್ಜಿಯಲ್ಲಿ ತನಿಖೆಯ ಸೂಕ್ತ ವಿವರಗಳನ್ನು ದಾಖಲಿಸದೆ ಜಾಮೀನು ಅರ್ಜಿ ಸಲ್ಲಿಕೆಗೆ ವಿಳಂಬವಾಗುವಂತೆ ಮಾಡಲಾಗುತ್ತಿದೆ. ಪೊಲೀಸ್‌‍ ಮ್ಯಾನ್ಯುಯೆಲ್‌ನಲ್ಲಿ 90 ದಿನಗಳಲ್ಲಿ ಅಂತಿಮ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲೇಬೇಕು. ಅನಂತರ ನಾವು ದರ್ಶನ್‌ ಹಾಗೂ ಇತರರ ಪರವಾಗಿ ಜಾಮೀನು ಅರ್ಜಿಯನ್ನು ಸಲ್ಲಿಸುತ್ತೇವೆ ಎಂದರು.

ಪೊಲೀಸರು ರಿಮ್ಯಾಂಡ್‌ ಅರ್ಜಿಯಲ್ಲಿ ಸಮರ್ಪಕ ಮಾಹಿತಿಯನ್ನು ನೀಡುತ್ತಿಲ್ಲ. ಯಾವ ಆರೋಪಿಯಿಂದ ಯಾವ ರೀತಿ ಹೇಳಿಕೆ ಪಡೆಯಲಾಗಿದೆ. ಯಾವ ವ್ಯಕ್ತಿ ಯಾವ ರೀತಿಯ ಸಾಕ್ಷಿಯಾಗಿದ್ದಾನೆ. ಪಂಚರ ಸಾಕ್ಷಿಯೇ, ಮಹಜರು ಸಾಕ್ಷಿಯೇ, ಪ್ರತ್ಯಕ್ಷ ಸಾಕ್ಷಿಯೇ, ಸಾಂದರ್ಭಿಕ ಸಾಕ್ಷಿಯೇ ಎಂಬ ವಿವರಣೆಗಳನ್ನು ನೀಡುತ್ತಿಲ್ಲ. ಇದರಿಂದ ಜಾಮೀನು ಅರ್ಜಿ ಸಲ್ಲಿಸಲು ತಡೆ ನೀಡುವ ಪ್ರಯತ್ನ ಆಗಿರಬಹುದು ಎಂದು ದೂರಿದರು.

ಯಾವುದೇ ಪ್ರಕರಣದಲ್ಲಾದರೂ ರಿಮ್ಯಾಂಡ್‌ ಅರ್ಜಿಯಲ್ಲಿ ಸಂಪೂರ್ಣ ವಿವರವನ್ನು ದಾಖಲಿಸುವುದು ಪೊಲೀಸರ ಕರ್ತವ್ಯ. ಆದರೆ ಈ ಪ್ರಕರಣದಲ್ಲಿ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಜಾಮೀನು ಅರ್ಜಿ ಸಲ್ಲಿಕೆಯಲ್ಲಿ ವಿಳಂಬವಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಈ ಪ್ರಕರಣ ಸಾಂದರ್ಭಿಕ ಸಾಕ್ಷ್ಯಗಳ ಮೇಲೆ ಅವಲಂಬಿತವಾಗಿದೆ. ಅಪಹರಣ, ಹಲ್ಲೆ ಮತ್ತು ನರಹತ್ಯೆ, ಮೂರನೆಯದಾಗಿ ಸಾಕ್ಷ್ಯ ನಾಶ ಆರೋಪಗಳಿವೆ. ಮೃತದೇಹವನ್ನು ವಿಲೇವಾರಿ ಮಾಡಿದ ಕೆಲ ಆರೋಪಿಗಳು ಠಾಣೆಗೆ ಹೋಗಿ ಶರಣಾಗಲು ಯತ್ನಿಸಿದ್ದರು ಎಂಬುದು ಪೊಲೀಸರ ಆರೋಪವಾಗಿದೆ.ತನಿಖೆಯಲ್ಲಿ ಎಲ್ಲಾ ಖಚಿತ ಮಾಹಿತಿಗಳನ್ನು ದಾಖಲಿಸಬೇಕಿತ್ತು. ಸೆಲಬ್ರೆಟಿ ಇದ್ದಾರೆ ಎಂಬ ಕಾರಣಕ್ಕಾಗಿ ಪಾರದರ್ಶಕ ದಾರಿಯನ್ನು ತಪ್ಪಿಸಲಾಗುತ್ತಿದೆ ಎಂದು ದೂರಿದರು.

ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿ ಸಾಕ್ಷಿ ಇದೆ ಎಂದು ಒಂದು ಬಾರಿ ಹೇಳಿದ್ದಾರೆ. ಮತ್ತೊಂದು ಬಾರಿ ವಿಡಿಯೋ ಸಾಕ್ಷ್ಯ ಇದೆ ಎಂದಿದ್ದಾರೆ. ನಾಲ್ಕನೇ ಬಾರಿ ರಿಮ್ಯಾಂಡ್‌ ಅರ್ಜಿಯಲ್ಲಿ ವಿಡಿಯೋ ಇರುವ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಈ ರೀತಿ ನಾನಾ ರೀತಿಯ ಗೊಂದಲಗಳು ಕಂಡುಬರುತ್ತಿದೆ ಎಂದು ಹೇಳಿದ್ದಾರೆ.

ಸೆಲೆಬ್ರೆಟಿಗಳು ಇದ್ದಾರೆ ಎಂಬ ಕಾರಣಕ್ಕಾಗಿ ಪ್ರಕರಣವನ್ನು ಬಲಪಡಿಸುವ ತಪ್ಪು ಪ್ರಯತ್ನವನ್ನು ಅಭಿಯೋಜನೆ ನಡೆಸುತ್ತಿದೆ. ಇದು ಸರಿಯಲ್ಲ. ಇದಕ್ಕಿಂತಲೂ ಗಂಭೀರವಾದ ಪ್ರಕರಣಗಳಲ್ಲಿ ಜಾಮೀನು ದೊರೆತ ಸಾಕಷ್ಟು ಉದಾಹರಣೆಗಳಿವೆ ಎಂದು ಹೇಳಿದರು.

RELATED ARTICLES

Latest News