Friday, November 22, 2024
Homeರಾಜ್ಯವಿಧಾನಪರಿಷತ್‌ ಚುನಾವಣೆಗೆ ಬಿಜೆಪಿಯಿಂದ ಪ್ರಚಾರ ಪ್ರಭಾರಿಗಳ ನೇಮಕ

ವಿಧಾನಪರಿಷತ್‌ ಚುನಾವಣೆಗೆ ಬಿಜೆಪಿಯಿಂದ ಪ್ರಚಾರ ಪ್ರಭಾರಿಗಳ ನೇಮಕ

ಬೆಂಗಳೂರು,ಮೇ18- ವಿಧಾನಪರಿಷತ್‌ಗೆ ನಡೆಯುವ ಮೂರು ಪದವೀಧರ ಹಾಗೂ ಮೂರು ಶಿಕ್ಷಕರ ಕ್ಷೇತ್ರಗಳ ಬಿಜೆಪಿ-ಜೆಡಿಎಸ್‌‍ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೂ ಸಹ ಬಂಡಾಯದ ಬಿಸಿ ತಟ್ಟಿದೆ. ಆದ್ದರಿಂದ ಬಿಜೆಪಿ ಘಟಕ ಬಂಡಾಯ ಶಮನ, ಚುನಾವಣಾ ಪ್ರಚಾರಕ್ಕಾಗಿ ಪ್ರಭಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಈಶಾನ್ಯ ಪದವೀಧರ ಕ್ಷೇತ್ರದ ಡಾ. ಚಂದ್ರಶೇಖರ ಪಾಟೀಲ, ನೈಋತ್ಯ ಪದವೀಧರ ಕ್ಷೇತ್ರದ ಆಯನೂರು ಮಂಜುನಾಥ, ಬೆಂಗಳೂರು ಪದವೀಧರ ಕ್ಷೇತ್ರದ ಎ. ದೇವೇಗೌಡ ಜೂನ್‌ 21ರಂದು ನಿವೃತ್ತರಾಗಲಿದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರದ ಡಾ. ವೈ. ಎ. ನಾರಾಯಣ ಸ್ವಾಮಿ, ನೈಋತ್ಯ ಶಿಕ್ಷಕರ ಕ್ಷೇತ್ರದ ಎಸ್‌‍. ಎಲ್‌‍.ಭೋಜೇಗೌಡ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ಮರಿತಿಬ್ಬೇ ಗೌಡ ಸಹ ನಿವೃತ್ತರಾಗಲಿದ್ದು, ಈ 6 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯಗೊಂಡಿದೆ. ನಾಮಪತ್ರ ವಾಪಸ್‌‍ ಪಡೆಯಲು ಮೇ 20 ಕೊನೆಯ ದಿನವಾಗಿದೆ.

ಯಾವ ಕ್ಷೇತ್ರಕ್ಕೆ ಯಾರು ಪ್ರಭಾರಿಗಳು:
ಈಶಾನ್ಯ ಪದವೀಧರ ಕ್ಷೇತ್ರಕ್ಕೆ ವಿಧಾನಪರಿಷತ್‌ ಮುಖ್ಯ ಸಚೇತಕರಾದ ಎನ್‌ .ರವಿಕುಮಾರ್‌ ಪ್ರಭಾರಿ. ಕ್ಷೇತ್ರ ವ್ಯಾಪ್ತಿಗೆ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಸೇರುತ್ತವೆ.

ನೈಋತ್ಯ ಪದವೀಧರ, ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್‌ಕುಮಾರ್‌ ಪ್ರಭಾರಿ, ರಾಜ್ಯ ಕಾರ್ಯದರ್ಶಿ ಡಿ.ಎಸ್‌‍.ಅರುಣ್‌ (ಸಹ ಪ್ರಭಾರಿ). ಕ್ಷೇತ್ರ ವ್ಯಾಪ್ತಿಗೆ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆ (ಹೊನ್ನಾಳಿ, ಚನ್ನಗಿರಿ ವಿಧಾನಸಭಾ ಕ್ಷೇತ್ರ) ಸೇರುತ್ತವೆ.

ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ರಾಜ್ಯ ಮುಖ್ಯ ವಕ್ತಾರರಾದ ಅಶ್ವತ್ಥನಾರಾಯಣ ಪ್ರಭಾರಿಗಳು. ಕ್ಷೇತ್ರದ ವ್ಯಾಪ್ತಿಗೆ ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಸೇರುತ್ತವೆ.

ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌‍. ನವೀನ್‌ ಪ್ರಭಾರಿಗಳು. ಕ್ಷೇತ್ರದ ವ್ಯಾಪ್ತಿಗೆ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ದಾವಣಗೆರೆಯ (ಹರಿಹರ, ಜಗಳೂರು, ದಾವಣಗೆರೆ ವಿಧಾನಸಭಾ ಕ್ಷೇತ್ರಗಳು).
ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ರಾಜ್ಯ ಉಪಾಧ್ಯಕ್ಷರಾದ ಎಂ. ರಾಜೇಂದ್ರ ಪ್ರಭಾರಿಗಳು. ಕ್ಷೇತ್ರದ ವ್ಯಾಪ್ತಿಗೆ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಸೇರುತ್ತವೆ.

ಕರ್ನಾಟಕ ವಿಧಾನ ಪರಿಷತ್‌ನ 3 ಪದವೀಧರ ಮತ್ತು 3 ಶಿಕ್ಷಕರ ಕ್ಷೇತ್ರದ ಚುನಾವಣೆ ಘೋಷಣೆಯಾಗಿದೆ. ಜೂನ್‌ 3ರಂದು ಚುನಾವಣೆ ನಡೆಯಲಿದ್ದು, ಜೂನ್‌ 6ರಂದು ಫಲಿತಾಂಶ ಪ್ರಕಟವಾಗಲಿದೆ. ಜೆಡಿಎಸ್‌‍ ಜೊತೆ ಮೈತ್ರಿ ಮಾಡಿಕೊಂಡು ಪಕ್ಷ ಚುನಾವಣೆ ಎದುರಿಸುತ್ತಿದೆ.

RELATED ARTICLES

Latest News