ಬೆಂಗಳೂರು, ನ.15- ಜಿದ್ದಾಜಿದ್ದಿನ ಕಣವಾಗಿದ್ದ ಪ್ರತಿಷ್ಠಿತ ಬಿಹಾರ ವಿಧಾನಸಭಾಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರ ಹಿಡಿದಿರುವ ಬೆನ್ನಲ್ಲೇ, ಬಾಕಿ ಇರುವ ರಾಜ್ಯಗಳ ಬಿಜೆಪಿ ಅಧ್ಯಕ್ಷರ ನೇಮಕಾತಿಗೆ ಚಾಲನೆ ಸಿಕ್ಕಿದೆ.
ಬಿಹಾರದಲ್ಲಿ ಸರ್ಕಾರ ರಚನೆಯಾಗಿ ಸಚಿವ ಸಂಪುಟ ವಿತರಣೆಯಾಗುತ್ತಿದ್ದಂತೆ ಕೇಂದ್ರ ಬಿಜೆಪಿ ವರಿಷ್ಠರು ಬಾಕಿ ಇರುವ ರಾಜ್ಯದ ಅಧ್ಯಕ್ಷರ ನೇಮಕಾತಿಗೆ ಚಾಲನೆ ನೀಡಲಿದ್ದಾರೆ. ದರೆ,ಅದಕ್ಕೂ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಮುಗಿದ ತಕ್ಷಣವೇ ಕರ್ನಾಟಕ ಮತ್ತು ಉತ್ತರ ಪ್ರದೇಶ ರಾಜ್ಯಗಳ ಬಿಜೆಪಿ ಅಧ್ಯಕ್ಷರ ನೇಮಕಾತಿ ಆಗಲಿದೆ ಎಂದು ತಿಳಿದು ಬಂದಿದೆ.
ಬಿಜೆಪಿಯ ಹಾಲಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರ ಅವಧಿ ಮುಗಿದು ಹಲವು ತಿಂಗಳುಗಳೇ ಕಳೆದಿವೆ. ಇದೀಗ ಬಿಹಾರ ವಿಧಾನಸಭಾ ಚುನಾವಣೆ ಮುಗಿದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಜೊತೆಗೆ ಹಲವು ರಾಜ್ಯಗಳ ಅಧ್ಯಕ್ಷರ ನೇಮಕಾತಿಗೆ ವರಿಷ್ಠರು ಒಲವು ತೋರಿದ್ದಾರೆ.
ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅಧ್ಯಕ್ಷರಾಗಿ ಎರಡು ವರ್ಷ ಪೂರ್ಣಗೊಳಿಸಿದ್ದಾರೆ. ಈ ಹಿಂದೆ ಅವರೇ ಮುಂದಿನ ಮೂರು ವರ್ಷಗಳ ಅವಧಿಗೆ ಮುಂದುವರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಪಕ್ಷದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದರಿಂದ ವರಿಷ್ಠರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಂತರ ನೇಮಕಾತಿ ಮಾಡಲು ಒಲವು ತೋರಿದರು. ಹೀಗಾಗಿ ವಿಳಂಬವಾಗಿದೆ.
ಹಲವು ಕಾರಣಗಳು, ಚುನಾವಣೆಗಳ ಹಿನ್ನಲೆಯಲ್ಲಿ ಇಂದು ನಾಳೆ ಎಂದು ಮುಂದೂಡಲ್ಪಡುತ್ತಿದ್ದ ಹಲವು ರಾಜ್ಯಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸದ್ಯದಲ್ಲೇ ಚಾಲನೆ ಸಿಗಲಿದೆ. ವಿಜಯೇಂದ್ರ ಬಣ, ವಿಜಯೇಂದ್ರ ವಿರೋಧಿ ಬಣ ಮತ್ತು ತಟಸ್ಥ ಬಣ ಎಂದು, ರಾಜ್ಯ ಬಿಜೆಪಿಯಲ್ಲಿ ಸಂವಹನದ ಕೊರತೆ ತೀವ್ರ ರೀತಿಯಲ್ಲಿ ಕಾಡುತ್ತಿತ್ತು. ಇದರಿಂದಾಗಿ, ಸಮರ್ಥ ವಿಪಕ್ಷವಾಗಿ ಕಮಲ ಪಡೆ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವ ಆಪಾದನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು.
ಕರ್ನಾಟಕದಿಂದ ಹಲವು ವರದಿಯನ್ನು ತರಿಸಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೆಲವು ದಿನಗಳ ಹಿಂದೆ, ಹಾಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹುಟ್ಟುಹಬ್ಬಕ್ಕೆ ದೂರವಾಣಿ ಮೂಲಕ ಶುಭವನ್ನು ಕೋರಿದ್ದರು. ಆ ವೇಳೆ, ಕಬ್ಬು ಬೆಳೆಗಾರರ ಅಹೋರಾತ್ರಿ ಹೋರಾಟದಲ್ಲಿ ರೈತರ ಜೊತೆಗಿದ್ದೇನೆ ಎಂದು ವಿಜಯೇಂದ್ರ, ಅಮಿತ್ ಶಾ ಅವರಿಗೆ ತಿಳಿಸಿದ್ದರು. ರೈತರಿಗೆ ನ್ಯಾಯ ಸಿಕ್ಕ ಮೇಲೆನೇ ನಾನು ಇಲ್ಲಿಂದ ಹೊರಡುವುದು ಎಂದು ವಿಜಯೇಂದ್ರ ಘರ್ಜಿಸಿದ್ದರು. ಕೊನೆಗೆ, ಸರ್ಕಾರ ಕಬ್ಬು ಖರೀದಿ ದರವನ್ನು ಪರಿಷ್ಕರಿಸಿತ್ತು.
ಕಬ್ಬು ಬೆಳೆಗಾರರ ಹೋರಾಟದಲ್ಲಿ ವಿಜಯೇಂದ್ರ ಅವರ ಪಾತ್ರದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಇದು ದೆಹಲಿಗೂ ತಲುಪಿದೆ ಎನ್ನುವ ಸುದ್ದಿಯಿಂದ, ವಿಜಯೇಂದ್ರ ವಿರೋಧಿ ಬಣಕ್ಕೆ ಶಾಕ್ ಹೊಡೆದಂತಾಗಿತ್ತು. ಸದ್ಯದ ಮಾಹಿತಿಯ ಪ್ರಕಾರ, ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಬಿಹಾರದಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಮುಗಿದ ನಂತರ ದೆಹಲಿಯಿಂದಲೇ ಇದು ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿದೆ.
ರಾಜ್ಯ ಬಿಜೆಪಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ಆಯ್ಕೆ ಮಾಡುವುದಕ್ಕೆ ಅಪಸ್ವರವೆತ್ತಿರುವ ಪಕ್ಷದ ತಟಸ್ಥ ಬಣ ಮತ್ತು ಅಸಮಾಧಾನಿತ ಬಣದವರನ್ನು ವಿಶ್ವಾಸಕ್ಕೆ ತಗೆದುಕೊಂಡೇ ಹೊಸ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಬೇಕೆನ್ನುವ ಧೋರಣೆಯನ್ನು ಪಕ್ಷದ ಹೈಕಮಾಂಡ್ ಹೊಂದಿದೆ ಎಂದು ಹೇಳಲಾಗಿದೆ.
ಕೇಂದ್ರ ಸಚಿವ ವಿ.ಸೋಮಣ್ಣ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಧ್ಯಕ್ಷ ಸ್ಥಾನ ನೀಡುವುದಾದರೆ ಕೇಂದ್ರ ಸಚಿವ ಸ್ಥಾನವನ್ನು ಸಹ ಬಿಟ್ಟು ಬರಲು ಸಿದ್ಧವೆನ್ನುವ ಸಂದೇಶವನ್ನು ಸಹ ಸೋಮಣ್ಣ ಹೈಕಮಾಂಡ್‌ಗೆ ರವಾನಿಸಿದ್ದಾರೆ. ಪಕ್ಷದ ಹಿರಿಯ ಮುಖಂಡರಾದ ಸಿ.ಟಿ. ರವಿ, ಮಾಜಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಅರವಿಂದ ಲಿಂಬಾವಳಿ, ಮಾಜಿ ಸಚಿವ ಸುನೀಲ್ ಕುಮಾರ್, ಮಾಜಿ ಸಿಎಂ ಬಸವರಾಜ ಬೊಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪಕ್ಷ ಅವಕಾಶ ನೀಡಿದರೆ ರಾಜ್ಯ ಬಿಜೆಪಿ ಅಧ್ಯಕ್ಷ ಗಾದಿಗೇರಲು ಒಲವನ್ನು ಹೊಂದಿದ್ದಾರೆ ಎನ್ನಲಾಗಿದೆ.
ಬಿಜೆಪಿ ಹೈಕಮಾಂಡ್ ಈ ಎಲ್ಲಾ ಹೆಸರುಗಳನ್ನು ಪರಿಶೀಲಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವ ಮತ್ತು ಮಾಜಿ ಸಿಎಂ ಯಡಿಯೂರಪ್ಪನವರ ಆಶೀರ್ವಾದ ಇರುವ ವಿಜಯೇಂದ್ರ ಆಯ್ಕೆಯೇ ಸಮಯೋಚಿತ ಎನ್ನುವ ನಿಲುವನ್ನು ದೆಹಲಿ ವರಿಷ್ಠರು ಹೊಂದಿದ್ದಾರೆನ್ನಲಾಗಿದೆ. ವಿಜಯೇಂದ್ರ ಅಧ್ಯಕ್ಷರಾಗಿ ನೇಮಕಗೊಂಡರೆ ಅತೃಪ್ತರ ಬಣಕ್ಕೆ ಮತ್ತು ತಟಸ್ಥ ಬಣದವರಿಗೆ ಪಕ್ಷದಲ್ಲಿ ಬೇರೆ ಗುರುತರ ಜವಾಬ್ದಾರಿ ನೀಡುವ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದ್ದಾರೆ.
