Friday, November 22, 2024
Homeರಾಜ್ಯನಿಗಮ ಮಂಡಳಿಯ ನೇಮಕಾತಿ ವಿಳಂಬಕ್ಕೆ ಹೈಕಮಾಂಡ್ ಕಾರಣ : ಪರಮೇಶ್ವರ್

ನಿಗಮ ಮಂಡಳಿಯ ನೇಮಕಾತಿ ವಿಳಂಬಕ್ಕೆ ಹೈಕಮಾಂಡ್ ಕಾರಣ : ಪರಮೇಶ್ವರ್

ಬೆಂಗಳೂರು,ಜ.23- ನಿಗಮ ಮಂಡಳಿಯ ನೇಮಕಾತಿಯಲ್ಲಿ ರಾಜ್ಯನಾಯಕರುಗಳೊಂದಿಗೆ ಸಮಾಲೋಚನೆ ನಡೆಸಲು ಹೈಕಮಾಂಡ್ ನಾಯಕರೇ ಪಟ್ಟಿ ತಯಾರಿಸುವುದರಿಂದಾಗಿ ಗೊಂದಲಗಳಾಗಿವೆ. ಅದನ್ನು ಸರಿಪಡಿಸುತ್ತಿರುವುದರಿಂದಾಗಿ ವಿಳಂಬವಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಈ ಮೂಲಕ ನಿಗಮಮಂಡಳಿಯ ನೇಮಕಾತಿಯಲ್ಲಿ ಹೈಕಮಾಂಡ್ ಹಸ್ತಕ್ಷೇಪದ ಬಗ್ಗೆ ಪರಮೇಶ್ವರ್ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೇಮಕಾತಿ ಪಟ್ಟಿಗೆ ಸಂಬಂಧಪಟ್ಟಂತೆ ತಮ್ಮೊಂದಿಗೆ ಯಾರೂ ಚರ್ಚಿಸಿಲ್ಲ, ಅಭಿಪ್ರಾಯವನ್ನೂ ಕೇಳಿಲ್ಲ. ನಿಮ್ಮ ಕಡೆಯ ಒಂದೆರೆಡು ಹೆಸರುಗಳನ್ನು ಕೊಡಿ ಎಂದಷ್ಟೇ ಕೇಳಿದ್ದರು ಎಂದು ಸ್ಪಷ್ಟಪಡಿಸಿದರು. ಹೈಕಮಾಂಡ್ ನಾಯಕರಿಗೆ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವವರ ಪೂರ್ಣ ಮಾಹಿತಿ ಇರುವುದಿಲ್ಲ. ಜಿಲ್ಲಾ ಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ನಮ್ಮಂತಹ ನಾಯಕರುಗಳಿಗೆ ಹೆಚ್ಚಿನ ವಿವರಗಳಿರುತ್ತವೆ. ನಮ್ಮಂತವರ ಜೊತೆ ಚರ್ಚೆ ಮಾಡಬೇಕಿತ್ತು. ಹೈಕಮಾಂಡ್‍ನವರಿಗೆ ಮಾಹಿತಿ ಇರುವುದಿಲ್ಲ ಎಂದರು.

ಜೊತೆಗೆ ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿಗೆ ನೇಮಕಾತಿಯ ಹೊಣೆಗಾರಿಕೆಯನ್ನು ಬಿಡಬೇಕಿತ್ತು. ಆದರೆ ಎಐಸಿಸಿಯ ಪ್ರಧಾನ ಕಾರ್ಯದರ್ಶಿಯವರೇ ನೇರವಾಗಿ ಪಟ್ಟಿ ನೀಡುತ್ತಿದ್ದಾರೆ. ಅದರಿಂದಾಗಿ ವಿಳಂಭವಾಗುತ್ತಿದೆ ಎಂದು ಹೇಳಿದರು.

ತಾವು 8 ವರ್ಷ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಕಳೆದ ಚುನಾವಣೆ ಹಾಗೂ ಸತತವಾಗಿ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಿದವರು ಯಾರು ಎಂದು ತಮಗೆ ಮಾಹಿತಿ ಇರುತ್ತದೆ. ನಮ್ಮೊಂದಿಗೆ ಚರ್ಚೆ ನಡೆಸದೇ ಇರುವುದರಿಂದಲೇ ಗೊಂದಲವಾಗುತ್ತದೆ ಎಂದರು.

ಶ್ರೀರಾಮನಿಗೆ 11 ಕೋಟಿ ಮೌಲ್ಯದ ವಜ್ರಖಚಿತ ಕಿರೀಟ ಸಮರ್ಪಿಸಿದ ಉದ್ಯಮಿ ಮುಖೇಶ್ ಪಟೇಲ್‍

ಪಕ್ಷದಲ್ಲಿ ಕೆಲಸ ಮಾಡಿದವರಿಗೆ ಆದ್ಯತೆ ನೀಡಬೇಕು. ಕೆಲಸ ಮಾಡದೇ ಇದ್ದವರಿಗೆ ಅವಕಾಶ ಕೊಟ್ಟಾಗ ಪ್ರಾಮಾಣಿಕರ ಮನಸ್ಸಿಗೆ ನೋವಾಗುತ್ತದೆ. ಹೀಗಾಗಿ ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಜಿಲ್ಲಾ ಪ್ರಮುಖರ ಜೊತೆ ಚರ್ಚೆ ಮಾಡಬೇಕು. ಏಕಾಏಕಿ ಯಾರ್ಯಾರದ್ದೋ ಹೆಸರುಗಳು ಪಟ್ಟಿಯಲ್ಲಿ ಬಂದರೆ ಸಮಸ್ಯೆಯಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೈ ಶ್ರೀರಾಮ್ ಎಂದು ಹೇಳುವುದರಲ್ಲಿ ತಪ್ಪೇನಿದೆ ಎಂದು ಮರುಪ್ರಶ್ನಿಸಿದ ಪರಮೇಶ್ವರ್, ನಾವೆಲ್ಲಾ ಜೈ ಶ್ರೀರಾಮ್ ಎಂದು ಹೇಳುತ್ತೇವೆ. ನಾವೆಲ್ಲರೂ ಶ್ರೀರಾಮನ ಭಕ್ತರು. ರಾಮನ ಆದರ್ಶಗಳನ್ನು ಪಾಲಿಸಬೇಕು ಎನ್ನುತ್ತೇವೆ. ಒಂದು ವೇಳೆ ಜೈ ಶ್ರೀರಾಮ್ ಎನ್ನದಿದ್ದರೆ ಕಾಂಗ್ರೆಸ್‍ನವರು ಶ್ರೀರಾಮನನ್ನು ಜಪಿಸುವುದಿಲ್ಲ ಎನ್ನುತ್ತಾರೆ. ಜೈ ಶ್ರೀರಾಮ್ ಎಂದರೆ ಕಾಂಗ್ರೆಸ್‍ನವರು ರಾಮನ ಹೆಸರು ಹೇಳುತ್ತಾರೆ ಎಂದು ಅದಕ್ಕೂ ಮಾತನಾಡುತ್ತಾರೆ. ಇದರಲ್ಲಿ ಯಾವ ನಿಲುವು ಸರಿ ಎಂದು ಪ್ರಶ್ನಿಸಿದ ಅವರು, ನಮಗೆ ದಶರಥ ರಾಮ ಬೇಕು. ಮೋದಿ ರಾಮ ಬೇಡ ಎಂದರು.

ಕಾಂಗ್ರೆಸ್‍ನ ನಾಯಕ ರಾಹುಲ್‍ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆಯಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ. ಈ ಮೊದಲು ರಾಹುಲ್‍ಗಾಂಧಿ 3,600 ಕಿ.ಮೀ. ಶಾಂತಿಯುತ ಪಾದಯಾತ್ರೆ ಮಾಡಿದ್ದರು. ಅದರಲ್ಲೂ ವಿರೋಧ ಪಕ್ಷದ ಆಡಳಿತ ಇರುವ ರಾಜ್ಯದಲ್ಲೇ ಪಾದಯಾತ್ರೆ ನಡೆದಿದ್ದರೂ ಎಲ್ಲಿಯೂ ಅಡ್ಡಿಯಾಗಿರಲಿಲ್ಲ. ಈಗ 6,712 ಕಿ.ಮೀ. ಯಾತ್ರೆಗೆ ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಅಡ್ಡಿಪಡಿಸಲಾಗಿದೆ.

ಕಾಂಗ್ರೆಸ್‍ನಲ್ಲಿದ್ದು, ಬಿಜೆಪಿಗೆ ಹೋಗಿ ಮುಖ್ಯಮಂತ್ರಿಯಾಗಿರುವ ಹೀಮಂತ್ ಬಿಶ್ವಾಸ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ನೋಡಿದರೆ ಬಿಜೆಪಿಯವರಿಗೆ ರಾಹುಲ್‍ಗಾಂಧಿಯವರ ಯಾತ್ರೆ ನೋಡಿ ಭಯ ಶುರುವಾಗಿದೆ ಎನಿಸುತ್ತದೆ ಎಂದರು.

RELATED ARTICLES

Latest News