ಬೆಂಗಳೂರು,ಡಿ.21- ನಿಗಮ ಮಂಡಳಿಗಳ ನೇಮಕಾತಿ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ಶಾಸಕರು ಹಾಗೂ ಮುಖಂಡರಿಗೆ ಮತ್ತೊಮ್ಮೆ ನಿರಾಶೆ ಮೂಡಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದಲೂ ನಿಗಮ ಮಂಡಳಿಗಳ ನೇಮಕಾತಿ ಕುರಿತಂತೆ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುವುದು. ಎರಡನೇ ಹಂತದಲ್ಲಿ ಕಾರ್ಯಕರ್ತರು ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಿದವರಿಗೆ ಅವಕಾಶ ನೀಡುವುದಾಗಿ ತಿಳಿಸಲಾಗಿತ್ತು.
ದೆಹಲಿಗೆ ತೆರಳಿ ಜಂಟಿ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರು ನಿಗಮ ಮಂಡಳಿಗಳ ನೇಮಕಾತಿ ಪಟ್ಟಿಗೆ ಅನುಮತಿ ಪಡೆದುಕೊಂಡೇ ಬರುವುದಾಗಿ ಪ್ರತಿಜ್ಞೆ ತೊಟ್ಟಿದ್ದರು.
ದೆಹಲಿಯಲ್ಲೂ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಶೀಘ್ರದಲ್ಲೇ ನೇಮಕಾತಿ ಮಾಡುತ್ತೇವೆ. ಲೋಕಸಭೆ ಚುನಾವಣೆಗೂ ಮೊದಲೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪುನರುಚ್ಛರಿಸಿದ್ದರು. ಆದರೆ ನಿನ್ನೆ ದೆಹಲಿಯಿಂದ ಮರಳಿದ ಇಬ್ಬರೂ ನಾಯಕರು ಬರಿಗೈನಲ್ಲಿ ವಾಪಸ್ ಬಂದಂತೆ ಕಾಣುತ್ತಿದೆ. ಆಪ್ತ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ನಡುವೆ ಹೊಂದಾಣಿಕೆಯಾಗದ ಕಾರಣಕ್ಕೆ ನಿಗಮ ಮಂಡಳಿಗಳ ನೇಮಕಾತಿ ಪಟ್ಟಿಗೆ ಮುಕ್ತಿ ಸಿಕ್ಕಿಲ್ಲ ಎನ್ನಲಾಗಿದೆ.
ಬೆಂಗಳೂರಿನಲ್ಲಿ 17 ಮಂದಿಯಲ್ಲಿ ಹೊಸ ಕೊರೊನಾ ಸೋಂಕು ಪತ್ತೆ
40ಕ್ಕೂ ಹೆಚ್ಚು ಶಾಸಕರನ್ನು ಮೊದಲ ಹಂತದಲ್ಲಿ ನಿಗಮಗಳಿಗೆ ನೇಮಿಸಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇರಾದೆಯಾಗಿತ್ತು. ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂಬುದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಒತ್ತಾಸೆ. ಈ ಇಬ್ಬರ ನಡುವಿನ ಹಗ್ಗ ಜಗ್ಗಾಟದಲ್ಲಿ ಶಾಸಕರು ಅತಂತ್ರರಾಗಿದ್ದಾರೆ. ಸಚಿವ ಸ್ಥಾನ ಸಿಗದೇ ಇದ್ದವರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಿ ಸಮಾಧಾನಪಡಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಚರ್ಚೆಗಳಿಗೆ ಸದ್ಯ ಬ್ರೇಕ್ ಬಿದ್ದಿದೆ.
ಹೀಗಾಗಿ ಹೊಸ ವರ್ಷದ ವೇಳೆಗೆ ಪದಗ್ರಹಣ ಮಾಡಿ ಸರ್ಕಾರಿ ಕಾರಿನಲ್ಲಿ ಓಡಾಡುವ ಕನಸು ಕಂಡಿದ್ದವರು ನಿರಾಶರಾಗಿದ್ದಾರೆ. ಡಿಸೆಂಬರ್ 29 ರಂದು ಮತ್ತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಾಗುತ್ತಿದ್ದು, ಆ ವೇಳೆ ನಿಗಮ ಮಂಡಳಿ ಚರ್ಚೆ ನಡೆಸುವುದಾಗಿ ರಾಜ್ಯ ನಾಯಕರು ಮತ್ತೊಮ್ಮೆ ಭರವಸೆ ನೀಡಿದ್ದಾರೆ.