ಬೆಂಗಳೂರು,ಆ.15– ರಾಜ್ಯಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಒತ್ತು ನೀಡಲಾಗಿದ್ದು, 15,428 ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ನಗರ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಹಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಸೂಚನೆಯಾಗಿ ಬಾಕಿ ಉಳಿದಿದ್ದ 670 ಹುದ್ದೆಗಳೂ ಸೇರಿದಂತೆ ಒಟ್ಟು 11,512 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವಿವಿಧ ಹಂತದಲ್ಲಿದೆ ಎಂದರು.
2023-24 ನೇ ಸಾಲಿನಲ್ಲಿ 54,427 ಕೋಟಿ ವಿದೇಶಿ ಬಂಡವಾಳ ಹೂಡಿಕೆ ಬಂದಿದ್ದು, ದೇಶದಲ್ಲೇ ರಾಜ್ಯ ಮೂರನೇ ಸ್ಥಾನದಲ್ಲಿದೆ. ವಿವಿಧ ಉದ್ಯಮ ಸಂಸ್ಥೆಗಳೊಡನೆ 13 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು, 42,915 ಕೋಟಿ ರೂ. ಹೂಡಿಕೆಯಾಗಿ 22,600 ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಏಕಗವಾಕ್ಷಿ ಅನುಮೋದನಾ ಸಮಿತಿಗಳಲ್ಲಿ 591 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, 84,232 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 1,56,986 ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ರಾಜ್ಯ 1,66,545 ಮಿಲಿಯನ್ ಅಮೆರಿಕನ್ ಡಾಲರ್ ಮೂಲಕ ರಫ್ತು ಮಾಡಿ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ.5.20 ರಷ್ಟು ಪ್ರಗತಿಯಾಗಿದೆ.
ಸಂಪೂರ್ಣ ಕ್ಲೀನ್ ಮೊಬಿಲಿಟಿ ವಾಹನ ಮೌಲ್ಯ ಸರಪಳಿಯಲ್ಲಿ 50 ಸಾವಿರ ಕೋಟಿ ಹೂಡಿಕೆ ಆಕರ್ಷಿಸುವ 1 ಲಕ್ಷ ಉದ್ಯೋಗ ಸೃಷ್ಟಿಸುವ ಹೊಸ ಕರಡು ನೀತಿಯನ್ನು ಸಿದ್ಧಪಡಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿಗಾಗಿ 40 ಕೃಷಿ ನವೋದ್ಯಮಗಳಿಗೆ ಉತ್ತೇಜನ ನೀಡಲಾಗಿದೆ.
ಬೆಂಗಳೂರಿಗೆ ಆದ್ಯತೆ :
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ 46,686 ಕೋಟಿ ರೂ. ವೆಚ್ಚದಲ್ಲಿ ದೀರ್ಘಾವಧಿಯ ಮೂಲಸೌಕರ್ಯ ಯೋಜನೆಗಳನ್ನು ಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಪೆರಿಫೆರಿಲ್ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ರೂ.:ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371 – ಜೆ ಮಾನ್ಯತೆ ದೊರೆತು 10 ವರ್ಷವಾಗಿರುವ ಹಿನ್ನೆಲೆಯಲ್ಲಿ ದಶಮಾನೋತ್ಸವ ಸಂಭ್ರಮಾಚರಣೆಗೆ ನಿರ್ಧರಿಸಲಾಗಿದೆ. ಜೊತೆಗೆ 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಸ್ಥಾಪಿಸಿದ ಪರಿಷ್ಕೃತ ಹಿತಕಾರಣಿ ಸಭಾ ಹಾಗೂ ಬೆಳಗಾವಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಚಾರಿತ್ರಿಕ ಅಧಿವೇಶನ – ಈ ಎರಡಕ್ಕೂ 100 ವರ್ಷ ತುಂಬಿದ್ದು, ಶತಮಾನೋತ್ಸವವನ್ನು ಸರಣೀಯವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಗೆ ಈ ವರ್ಷ 855 ಕೋಟಿ ರೂ. ಖರ್ಚು ಮಾಡಲಾಗಿದೆ. ಮೇಕೆದಾಟು ಸಮತೋಲನಾ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಭೂಸ್ವಾದೀನ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಕಾವೇರಿ ನಿಗಮ ವ್ಯಾಪ್ತಿಯ ವಿಭಾಗ ಕಚೇರಿ ಮತ್ತು ಉಪವಿಭಾಗ ಕಚೇರಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.