ಬೆಂಗಳೂರು, ಏ. 10– ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಬಾಡಿಗಾರ್ಡ್, ಗನ್ ಮ್ಯಾನ್ ಆಗಿದ್ದ ಚಲಪತಿಯ ಪುತ್ರಿ ಆಮೂಲ್ಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದಾರೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಅಮೂಲ್ಯ ಕನ್ನಡದಲ್ಲಿ 98 ಅಂಕ ಗಳಿಸಿದ್ದರೆ, ಇಂಗ್ಲೀಷ್ ನಲ್ಲಿ 90, ಎಕನಾಮಿಕ್ಸ್ ನಲ್ಲಿ 97, ಬ್ಯುಸಿನೆಸ್ ಸ್ಟಡೀಸ್ ನಲ್ಲಿ 90, ಅಕೌಂಟೆನ್ಸಿಯಲ್ಲಿ 96 ಹಾಗೂ ಸ್ಟಾಟಿಸ್ಟಿಕ್ಸ್ ನಲ್ಲಿ 95 ಅಂಕಗಳನ್ನು ಪಡೆದಿದ್ದಾರೆ. ಒಟ್ಟಾರೆ 600 ಅಂಕಗಳಿಗೆ 566 ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿ (ಶೇ.94.33 ) ಯಲ್ಲಿ ಉತ್ತೀರ್ಣರಾಗಿದೆ.
ಅಮೂಲ್ಯ ಅವರು ದ್ವಿತೀಯ ಪಿಯುಸಿಯಲ್ಲಿ ಪಡೆದಿರುವ ಅಂಕ ಪಟ್ಟಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಪ್ಪು (ಪುನೀತ್ ರಾಜ್ ಕುಮಾರ್ ) ಅವರ ಅಭಿಮಾನಿಗಳು ಆಕೆಯ ಸಾಧನೆಯನ್ನು ಕೊಂಡಾಡಿದ್ದಾರೆ.
ಚಲಪತಿ ಸಂತಸ:
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬಳಿ 11 ವರ್ಷಗಳ ಕಾಲ ಬಾಡಿಗಾರ್ಡ್ ಆಗಿ ಸೇವೆ ಸಲ್ಲಿಸಿರುವ ಚಲಪತಿ ಅವರು ತಮ್ಮ ಪುತ್ರಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.ನನ್ನ ಪುತ್ರಿಯ ಸಾಧನೆಯ ಹಿಂದೆ ಅಪ್ಪು ಅವರು ಆಕೆಯ ಆರಂಭಿಕ ವಿದ್ಯಾಭ್ಯಾಸದ ಸಮಯದಲ್ಲಿ ನೀಡಿದ ಸಹಕಾರವೇ ಕಾರಣವಾಗಿದ್ದು, ಅವರ ಪ್ರೀತಿ ಮತ್ತು ಆಶೀರ್ವಾದದಿಂದಲೇ ದ್ವಿತೀಯ ಪಿಯುಸಿಯಲ್ಲಿ ಅಮೂಲ್ಯ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ ಎಂದು ಚಲಪತಿ ಸಂತಸ ವ್ಯಕ್ತಪಡಿಸಿ ದ್ದಾರೆ.
ಅಮೂಲ್ಯಳ ಈ ಸಾಧನೆಯಲ್ಲಿ ನನ್ನ ಪತ್ನಿಯ ಸಹಕಾರವು ಆಗಾಧವಾಗಿದ್ದು, ನನ್ನ ಪುತ್ರ ಕೂಡ ಚೆನ್ನಾಗಿ ಓದುತ್ತಿದ್ದಾನೆ. ನನ್ನ ಸಂಪಾದನೆ, ನನ್ನ ಆಸ್ತಿ ಎಲ್ಲವೂ ನನ್ನ ಮಕ್ಕಳೇ ಆಗಿದ್ದಾರೆ ಎಂದು ಚಲಪತಿ ಹೇಳಿದ್ದಾರೆ.