ಅರಕಲಗೂಡು, ಮಾ.16- ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿ ನೆಲಬಳ್ಳಿ ಗ್ರಾಮದಲ್ಲಿ ಕಾಡಾನೆ ಮೃತ ಪಟ್ಟಿರುವ ಘಟನೆ ನಡೆದಿದೆ. ಎರಡು ದಂತಗಳನ್ನು ಹೊಂದಿರುವ ಸುಮಾರು ಗಂಡಾನೆ (25) ಕೃಷಿ ಜಮೀನಿನಲ್ಲಿ ಮೃತಪಟ್ಟಿದೆ. ಆನೆಯ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕವಷ್ಟೆ ಖಚಿತ ಕಾರಣ ತಿಳಿಯಲಿದೆ. ವಿದ್ಯುತ್ ತಗುಲಿ ಮೃತಪಟ್ಟಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ.
ಮೊನ್ನೆ ರಾತ್ರಿ ಮೂರು ಆನೆಗಳು ಕೃಷಿ ಜಮೀನಿನಿಂದ ಬೈಸೂರು ಅರಣ್ಯ ಪ್ರದೇಶಕ್ಕೆ ತೆರಳುವ ವೇಳೆ ಈ ಅವಘಡ ಸಂಭವಿಸಿದೆ. ಜತೆಯಲ್ಲಿದ್ದ ಹೆಣ್ಣಾನೆ ಮತ್ತು ಮರಿ ಕಾಡಿಗೆ ತೆರಳಿವೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಎ.ಮಂಜು ಆನೆ ಮಾನವ ಸಂಘರ್ಷಕ್ಕೆ ಜಿಲ್ಲೆಯಲ್ಲಿ 2ತಿಂಗಳಲ್ಲಿ ನಾಲ್ಕು ಜನರು ಬಲಿಯಾಗಿದ್ದಾರೆ.
ಬೇಲೂರು ತಾಲ್ಲೂಕು ಬೊಮ್ಮನಹಳ್ಳಿ ಗ್ರಾಮದಲ್ಲಿ ಮೊನ್ನೆ ಅಷ್ಟೆ ಮಹಿಳೆಯೊಬ್ಬರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ನಮ್ಮ ತಾಲ್ಲೂಕಿನಲ್ಲಿ ಆನೆ ಮೃತಪಟ್ಟಿದೆ. ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಕುರಿತು ಸದನದಲ್ಲಿ ಪ್ರಸ್ತಾಪಿಸಿ ಶಾಶ್ವತ ಪರಿಹಾರಕ್ಕೆ ಒತ್ತಾಯಿಸುವುದಾಗಿ ಹೇಳಿದರು.
ಎಲ್ಲಿಂದಲೋ ಬಂದು ರೈತರ ಕೃಷಿ ಜಮೀನಿನಲ್ಲಿ ಆನೆ ಮೃತಪಟ್ಟಿರುವ ಕಾರಣಕ್ಕೆ ಜಮೀನಿನ ಮಾಲೀಕರ ವಿರುದ್ಧ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕಾಡಾನೆ ಹಾವಳಿಯಿಂದ ಬೆಳೆ ಹಾನಿ ಪರಿಹಾರ ಕಳೆದ ಮೂರು ವರ್ಷಗಳಿಂದ ಬಂದಿಲ್ಲ, ಕೇಳಿದರೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಉತ್ತರಿಸುತ್ತಾರೆ.
ಹಗಲಿನ ವೇಳೆಯಲ್ಲೆ ಜಮೀನಿನ ಬಳಿ ಜೀವ ಕೈಯಲ್ಲಿ ಹಿಡಿದು ಬರುವ ಪರಿಸ್ಥಿತಿ ಇದೆ. ಆನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ರೂಪಿಸುವಂತೆ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ತಹಶೀಲ್ದಾರ್ ಕೆ.ಸಿ. ಸೌಮ್ಯ, ವಲಯ ಅರಣ್ಯಾಧಿಕಾರಿ ಯತ್ನಮಾಚಮ್ಮ, ಉಪ ವಲಯ ಅರಣ್ಯಾಧಿಕಾರಿ ಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು.