ಬೆಂಗಳೂರು, ಅ.12- ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಉದ್ಯಾನವನ ನಡಿಗೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಮುನಿರತ್ನ ಪ್ರತಿಭಟನೆ ನಡೆಸಿ, ಗದ್ದಲ ಎಬ್ಬಿಸಿದ್ದರಿಂದಾಗಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ತಮ ಮೇಲೆ ಹಲ್ಲೆಯಾಗಿದೆ ಎಂದು ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.
ಸಾರ್ವಜನಿಕರ ಅಹವಾಲುಗಳನ್ನು ಖುದ್ದು ಆಲಿಸಿ ಬಗೆಹರಿಸುವ ಮೂಲಕ ಬ್ರ್ಯಾಂಡ್ ಬೆಂಗಳೂರು ಕಲ್ಪನೆಯನ್ನು ಸಾಕಾರಗೊಳಿಸಲು ಡಿ.ಕೆ.ಶಿವಕುಮಾರ್ ಬೆಂಗಳೂರು ನಡಿಗೆ ಆರಂಭಿಸಿದ್ದಾರೆ. ನಿನ್ನೆ ಲಾಲ್‌ಬಾಗ್‌ನಲ್ಲಿ ಕಾರ್ಯಕ್ರಮ ನಡೆಸಿದರು. ಇಂದು ಮತ್ತಿಕೆರೆಯ ಜೆ.ಪಿ. ಪಾರ್ಕ್‌ನಲ್ಲಿ ವಾಯುವಿಹಾರಿಗಳೊಂದಿಗೆ ನಡಿಗೆ, ನಾಗರಿಕರೊಂದಿಗೆ ಸ್ಪಂದನೆ ಹಾಗೂ ವಿವಿಧ ಸ್ಥಳಗಳ ಪರಿಶೀಲನೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮ ಆರಂಭವಾದಾಗ ಶಾಸಕ ಮುನಿರತ್ನ ವೇದಿಕೆಯ ಮುಂದೆ ಸಾರ್ವಜನಿಕರೊಂದಿಗೆ ಆರ್‌ಎಸ್‌ಎಸ್‌ನ ಸಮವಸ್ತ್ರವಾಗಿರುವ ಬಿಳಿ ಅಂಗಿ, ಖಾಕಿ ಪ್ಯಾಂಟ್, ಕರಿಟೋಪಿ ಧರಿಸಿ ಕುಳಿತಿದ್ದರು. ಕಾರ್ಯಕ್ರಮ ಚಾಲನೆಯಾಗುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಅವರು, ಮುನಿರತ್ನ ಅವರನ್ನು ಎಂಎಲ್‌ಎ ಮೇಲೆ ಬನ್ನಿ ಎಂದು ಕರೆದರು. ಈ ಸಂದರ್ಭದಲ್ಲಿ ನೀರು ಕುಡಿದು ಸಾವರಿಸಿಕೊಳ್ಳುತ್ತಿದ್ದ ಮುನಿರತ್ನ ಡಿ.ಕೆ.ಶಿವಕುಮಾರ್ ಕರೆಗೆ ಸ್ಪಂದಿಸಲಿಲ್ಲ, ಕರಿ ಟೋಪಿ ಎಂಎಲ್‌ಎ ಬನ್ನಿ ಎಂದು ಉಪಮುಖ್ಯಮಂತ್ರಿ ಮತ್ತೆ ಕರೆದರು. ಈ ಸಂದರ್ಭದಲ್ಲಿ ವೇದಿಕೆ ಬಳಿ ಹೋದ ಮುನಿರತ್ನ ಉಪಮುಖ್ಯಮಂತ್ರಿ ಅವರಿಂದಲೇ ಮೈಕ್ ಪಡೆದು, ಇದು ಸರ್ಕಾರದ ಕಾರ್ಯಕ್ರಮವಾಗಿದ್ದರೂ, ಶಾಸಕನಾದ ನನಗೆ ಆಹ್ವಾನವಿಲ್ಲ, ಸಂಸದರಿಗೂ ಆಹ್ವಾನವಿಲ್ಲ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರ ಫೋಟೋ ಹಾಕಿಕೊಂಡು ಕಾರ್ಯಕ್ರಮ ಮಾಡುತ್ತಿದ್ದಾರೆ. ಹೀಗಾಗಿ ನಾನು ವೇದಿಕೆ ಮೇಲಿರುವುದಿಲ್ಲ. ಬೆಂಗಳೂರಿನ ಸಾಮಾನ್ಯ ಪ್ರಜೆಯಾಗಿ ಬಂದಿದ್ದೇನೆ. ಜನರ ನಡುವೆಯೇ ಕುಳಿತಿರುತ್ತೇನೆ ಎಂದು ಹೇಳಿ ವಾಪಸ್ ಹೋದರು.
ಕಾರ್ಯಕ್ರಮ ಆರಂಭದ ಸಲುವಾಗಿ ಸ್ವಾಗತ ಕೋರುವ ವೇಳೆ ನಿರೂಪಕಿ ಶಾಸಕ ಮುನಿರತ್ನ ಅವರು ವೇದಿಕೆಗೆ ಬರಬೇಕೆಂದು ಮನವಿ ಮಾಡಿದರು. ಈ ವೇಳೆ ಮತ್ತೆ ಎದ್ದು ಬಂದ ಮುನಿರತ್ನ ನಿರೂಪಕಿಯಿಂದ ಮೈಕ್ ಕಸಿದುಕೊಂಡು, ಇದು ಸರ್ಕಾರದ ಕಾರ್ಯಕ್ರಮ. ನನಗೆ ಆಹ್ವಾನವಿಲ್ಲ. ಜಿಬಿಎ ಮುಖ್ಯ ಆಯುಕ್ತರೇ ಇದು ನಿಮ ಗಮನಕ್ಕೆ ಇರಲಿ. ಇಲ್ಲಿ ರಾಜಕೀಯ ಬೇಡ, ಶಾಸಕರು, ಸಂಸದರಿಗೆ ಆಹ್ವಾನ ಇಲ್ಲ. ಇದು ಸಾರ್ವಜನಿಕರ ಕುಂದುಕೊರತೆ ಕಾರ್ಯಕ್ರಮವಲ್ಲ, ಕಾಂಗ್ರೆಸ್ ಕಾರ್ಯಕ್ರಮ ಎಂದು ರೋಷಾವೇಶದ ಮಾತುಗಳನ್ನಾಡಿದರು.
ಈ ವೇಳೆ ಸಿಟ್ಟಾದ ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ಅವರನ್ನು ಸುತ್ತುವರೆದು ಪ್ರತಿರೋಧ ವ್ಯಕ್ತಪಡಿಸಿದರು. ಇಲ್ಲಿ ಗೂಂಡಾಗಿರಿ ಮಾಡಲು ಬಂದಿದ್ದೀಯ? ವೇದಿಕೆಯಿಂದ ಕೆಳಗೆ ಇಳಿ, ಇಲ್ಲಿಂದ ಹೊರಡು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಇನ್ನೂ ಕೆಲವರು ರೇಪಿಸ್ಟ್ ಎಂದು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಕಾವೇರಿದ ವಾತಾವರಣ ನಿರ್ಮಾಣವಾದಾಗ ಪೊಲೀಸರು ಮಧ್ಯ ಪ್ರವೇಶಿಸಿ, ಮುನಿರತ್ನ ಅವರನ್ನು ಸುತ್ತುವರೆದು ರಕ್ಷಣೆ ನೀಡಲಾರಂಭಿಸಿದರು. ಈ ಹಂತದಲ್ಲಿ ಮುನಿರತ್ನ ವೇದಿಕೆ ಬಳಿಯೇ ಕುಳಿತು ಧರಣಿ ಆರಂಭಿಸಿದರು. ಅವರನ್ನು ಕರೆದೊಯ್ಯಲು ಬಂದ ಪೊಲೀಸರಿಗೆ ಎಚ್ಚರಿಕೆ ನೀಡಿ, ನನ್ನದು ಮೌನ ಪ್ರತಿಭಟನೆ. ಮುಟ್ಟಿದರೆ ಸುಮನಿರುವುದಿಲ್ಲ. ನಾನೊಬ್ಬ ಶಾಸಕ, ದೌರ್ಜನ್ಯ, ದಬ್ಬಾಳಿಕೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ಮುನಿರತ್ನ ಅವರ ಗದ್ದಲದಿಂದಾಗಿ ಗೊಂದಲ ನಿರ್ಮಾಣವಾಗಿ ಕಾರ್ಯಕ್ರಮ ಅಸ್ತವ್ಯಸ್ತವಾಗಿತ್ತು. ಡಿ.ಕೆ.ಶಿವಕುಮಾರ್ ಮುನಿರತ್ನ ಅವರ ಗದ್ದಲವನ್ನು ಮೌನವಾಗಿ ನೋಡುತ್ತಾ ಕುಳಿತಿದ್ದರು. ಒಂದು ಹಂತದಲ್ಲಿ ಮುನಿರತ್ನ ಅವರ ಬಳಿ ಹೋಗಿ, ಸರ್ಕಾರಿ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕ್ರಮ ಮಾಡಿದ್ದೀರ ಎಂದು ಕಿಡಿ ಕಾರಿದಾಗ, ಮೈಕ್ ಕಿತ್ತುಕೊಂಡು ಅವರನ್ನು ಕಳುಹಿಸಿ ಎಂದು ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು.
ಪೊಲೀಸರು ಶಾಸಕರನ್ನು ವೇದಿಕೆ ಬಳಿಯಿಂದ ಸ್ವಲ್ಪ ದೂರ ಕರೆದುಕೊಂಡು ಹೋದರು. ಈ ಹಂತದಲ್ಲಿ ನನ್ನ ಮೇಲೆ ಹಲ್ಲೆಯಾಗಿದೆ. ಹಿಂದಿನಿಂದ ಒದ್ದಿದ್ದಾರೆ. ಕನಕಪುರದಲ್ಲಿ ದೌರ್ಜನ್ಯ, ದಬ್ಬಾಳಿಕೆ ಮಾಡಿದವರು ಬೆಂಗಳೂರಿನಲ್ಲೂ ಅದನ್ನೇ ಮುಂದುವರಿಸಲು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್‌ನ 100ನೇ ವರ್ಷಾಚರಣೆ ಮುಗಿಸಿಕೊಂಡು ನಾನು ಇಲ್ಲಿಗೆ ಬಂದಿದ್ದೇನೆ. ಕನಿಷ್ಠ ಮರ್ಯಾದೆ ಕೊಟ್ಟಿಲ್ಲ, ಕರಿ ಟೋಪಿ ಎಂದು ಕರೆಯುತ್ತಾರೆ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಈಗಲೂ ಹೊಡೆಯಲು ಬರುತ್ತಿದ್ದಾರೆ. ನನ್ನ ಆರ್‌ಎಸ್‌ಎಸ್ ಟೋಪಿಯನ್ನು ಕಿತ್ತುಕೊಂಡು, ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ನನ್ನನ್ನು ಹೊಡೆಯಲು ಚೆನ್ನಪಟ್ಟಣ, ರಾಮನಗರ, ಕನಕಪುರದಿಂದ ಪುಡಿರೌಡಿಗಳನ್ನು ಕರೆಸಿದ್ದಾರೆ. ನಮ ಪಕ್ಷಕ್ಕೆ ದ್ರೋಹ ಮಾಡಿ ಉಪಮುಖ್ಯಮಂತ್ರಿ ಅವರ ಸಹೋದರ ಡಿ.ಕೆ. ಸುರೇಶ್‌ನನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿದ್ದರೆ, ನಾನು ಒಳ್ಳೆಯವನಾಗಿರುತ್ತಿದ್ದೆ. ಅವರ ಸೋಲಿಗೆ ನಾನು ಕಾರಣ ಎಂಬ ಕಾರಣಕ್ಕೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನಗೆ 15 ವರ್ಷದ ಮೊಮಗ ಇದ್ದಾನೆ. ಈಗ ರೇಪ್ ಕೇಸ್ ಹಾಕಿಸಿದ್ದಾರೆ. ಪಾಲಿಕೆ ಸದಸ್ಯರಾಗುವ ಆಕಾಂಕ್ಷಿಗಳಿಂದ ದೂರಿನ ಮೇಲೆ ದೂರು ಕೊಡಿಸುತ್ತಿದ್ದಾರೆ. 7 ವರ್ಷಗಳಿಂದಲೂ ಒಳ್ಳೆಯವನಾಗಿದ್ದ ಮುನಿರತ್ನ ಅವರನ್ನು ಬಿಟ್ಟು ಬಂದ ಮೇಲೆ ರೇಪಿಸ್ಟ್ ಆಗಿದ್ದಾನೆ. ದಲಿತ ದೌರ್ಜನ್ಯದ ಪ್ರಕರಣ ದಾಖಲಾಗಿದೆ. ಇವರ ದ್ವೇಷಕ್ಕೆ ಜಾರಕಿಹೊಳಿ, ಕೆ.ಎನ್. ರಾಜಣ್ಣ, ಎಚ್‌ಡಿ ರೇವಣ್ಣ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಕಿಡಿಕಾರಿದರು.
ಜಿಬಿಎನ 5 ಪಾಲಿಕೆಗಳನ್ನು ಗೆಲ್ಲಬೇಕು ಎಂಬ ಕಾರಣಕ್ಕೆ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ. 400 ಎಕರೆ ಜಾಗ ಇರುವ ಲಾಲ್‌ಬಾಗ್, 200 ಎಕರೆಯಿರುವ ಕಬ್ಬನ್ ಪಾರ್ಕ್‌ನಲ್ಲಿ ತಲಾ ಒಂದು ಕಾರ್ಯಕ್ರಮ ಮಾಡಿದ್ದಾರೆ. ನನ್ನ ಕ್ಷೇತ್ರದ ಜೆ.ಪಿ. ಪಾರ್ಕ್‌ನಲ್ಲಿ ಎರಡು ಕಾರ್ಯಕ್ರಮ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳಾಗಿರುವವರನ್ನು ಸುತ್ತಲೂ ನಿಲ್ಲಿಸಿಕೊಂಡಿದ್ದಾರೆ.ನನಗೆ ಯಾವುದೇ ಆಹ್ವಾನ ಬಂದಿಲ್ಲ, ಒಂದು ವೇಳೆ ಆಹ್ವಾನ ಬಂದಿದ್ದರೆ ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಪೊಲೀಸರು ಮುನಿರತ್ನ ಅವರಿಗೆ ನೀರು ಕುಡಿಸಿ ಸಮಾಧಾನ ಪಡಿಸುವ ಮೂಲಕ ಅಲ್ಲಿಂದ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರು. ಆದರೆ ಅದಕ್ಕೆ ಮಣಿಯದ ಮುನಿರತ್ನ ಧರಣಿ ಆರಂಭಿಸಿದರು. ಪರಿಸ್ಥಿತಿ ನಿಯಂತ್ರಸಿಲು ಪೊಲೀಸರು ಮುನಿರತ್ನ ಅವರನ್ನು ಬಲವಂತವಾಗಿ ಕರೆದೊಯ್ದರು.