Thursday, January 16, 2025
Homeರಾಜ್ಯಸಿನಿಮಾ ಸ್ಟೈಲಲ್ಲಿ ಫೈರಿಂಗ್ ಮಾಡಿ ಎಟಿಎಂಗೆ ಹಣ ತುಂಬುವ ವಾಹನ ದರೋಡೆ, ಸಿಬ್ಬಂದಿ ಸಾವು, ಬೆಚ್ಚಿಬಿದ್ದ...

ಸಿನಿಮಾ ಸ್ಟೈಲಲ್ಲಿ ಫೈರಿಂಗ್ ಮಾಡಿ ಎಟಿಎಂಗೆ ಹಣ ತುಂಬುವ ವಾಹನ ದರೋಡೆ, ಸಿಬ್ಬಂದಿ ಸಾವು, ಬೆಚ್ಚಿಬಿದ್ದ ಬೀದರ್

Armed robbers kill man in Karnataka's Bidar, loot Rs 93 lakh cash meant for ATM

ಬೆಂಗಳೂರು, ಜ.16– ಹಾಡಹಗಲೇ ಸಿನಿಮೀಯ ರೀತಿ ಇಬ್ಬರು ದರೋಡೆಕೋರರು ಎಟಿಎಂಗೆ ಹಣ ತುಂಬುವ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ ಗುಂಡಿನ ದಾಳಿ ನಡೆಸಿ ಸುಮಾರು ಒಂದು ಕೋಟಿ ಹಣವಿದ್ದ ಪೆಟ್ಟಿಗೆಯೊಂದಿಗೆ ಬೈಕ್‌ನಲ್ಲಿ ಕ್ಷಣಾರ್ಧದಲ್ಲಿ ಪರಾರಿಯಾಗಿರುವ ಘಟನೆ ಬೀದರ್‌ ನಗರದಲ್ಲಿ ನಡೆದಿದೆ.

ದರೋಡೆಕೋರರ ಗುಂಡಿನ ದಾಳಿಯಿಂದ ಎಟಿಎಂಗೆ ಹಣ ತುಂಬುವ ಏಜೆನ್ಸಿ ಸಿಬ್ಬಂದಿ ವೆಂಕಟಗಿರಿ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಸಿಬ್ಬಂದಿ ಶಿವಕುಮಾರ್‌ ಅವರಿಗೂ ಗುಂಡು ತಗುಲಿದ್ದರಿಂದ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ:
ಬೀದರ್‌ ನಗರದ ಮಾರ್ಕೆಟ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿನ ಡಿಸಿ ಕಚೇರಿ ಸಮೀಪದ ಎಸ್‌‍ಬಿಐ ಬ್ಯಾಂಕ್‌ ಬಳಿ ಇರುವ ಎಟಿಎಂಗೆ ಹಣ ತುಂಬಲು ಇಂದು ಬೆಳಗ್ಗೆ 11.30ರ ಸುಮಾರಿನಲ್ಲಿ ಏಜೆನ್ಸಿ ಸಿಬ್ಬಂದಿ ಹಣದ ಬಾಕ್‌್ಸಗಳೊಂದಿಗೆ ವಾಹನದಲ್ಲಿ ಬಂದಿದ್ದಾರೆ.
ಈ ವಾಹನವನ್ನು ಇಬ್ಬರು ದರೋಡೆಕೋರರು ಹೆಲೆಟ್‌ ಧರಿಸಿಕೊಂಡು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಏಜೆನ್ಸಿ ಸಿಬ್ಬಂದಿ ಗಮನಿಸಿಲ್ಲ.

ಈ ವಾಹನವನ್ನು ಎಟಿಎಂ ಮುಂದೆ ನಿಲ್ಲಿಸಿ ಸಿಬ್ಬಂದಿ ಕೆಳಗಿಳಿದು ವಾಹನದ ಹಿಂಬಾಗಿಲ ಬೀಗ ತೆಗೆದು ಎಟಿಎಂಗೆ ಹಣ ತುಂಬಲು ಹಣವಿದ್ದ ಬಾಕ್‌್ಸಗಳನ್ನು ಕೆಳಗಿಡುತ್ತಿದ್ದಂತೆ ಈ ಇಬ್ಬರು ದರೋಡೆಕೋರರು ಏಕಾಏಕಿ ಸಿಬ್ಬಂದಿಗೆ ಖಾರದ ಪುಡಿ ಎರಚಿ ಐದು ಸುತ್ತು ಗುಂಡಿನ ಸುರಿಮಳೆಗೈದಿದ್ದಾರೆ.

ನಂತರ ತರಾತುರಿಯಲ್ಲಿ ಒಂದು ಕೋಟಿ ಇದ್ದ ಹಣದ ಬಾಕ್‌್ಸಅನ್ನು ದರೋಡೆಕೋರ ತೆಗೆದುಕೊಳ್ಳುವ ಭರದಲ್ಲಿ ಭಾರ ತಾಳದೆ ಕೆಳಗೆ ಬಿದ್ದಿದ್ದಾನೆ. ಆದರೂ ತಾವೆಲ್ಲಿ ಸಿಕ್ಕಿಬೀಳುತ್ತವೆಯೋ ಎಂಬ ಆತಂಕದಲ್ಲೇ ಎದ್ದು ಗಡಿಬಿಡಿಯಲ್ಲಿ ಬಾಕ್ಸ್ ತೆಗೆದುಕೊಂಡು ಬೈಕ್‌ನಲ್ಲಿ ಮತ್ತೊಬ್ಬನೊಂದಿಗೆ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.

ನೋಡನೋಡುತ್ತಿದ್ದಂತೆ ಈ ಘಟನೆ ಕ್ಷಣಾರ್ಧದಲ್ಲಿ ನಡೆದುಹೋಗಿದ್ದು ಸ್ಥಳೀಯರನ್ನು ಆತಂಕಕ್ಕೀಡುಮಾಡಿದೆ. ಗುಂಡಿನ ದಾಳಿ ವೇಳೆ ಜನಸಂದಣಿ ಇರುವ ಶಿವಾಜಿ ಚೌಕ್‌ ಬಳಿ ಸಾರ್ವಜನಿಕರು ಏನು ಮಾಡಬೇಕೆಂದು ತೋಚದೆ ಭಯಭೀತರಾದರೆ, ಇನ್ನೂ ಕೆಲವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಬೀದರ್‌ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ಎಸ್‌‍ಪಿ ಹಾಗೂ ಐಜಿಪಿ ಅವರು ಭೇಟಿ ನೀಡಿದ್ದಾರೆ. ಮೂರು ತಂಡಗಳ ರಚನೆ: ದರೋಡೆಕೋರರ ಬಂಧನಕ್ಕೆ ಈಗಾಗಲೇ ಬೀದರ್‌ ಜಿಲ್ಲಾ ಎಸ್‌‍ಪಿ ಮೂರು ತಂಡಗಳನ್ನು ರಚಿಸಿ ಎಲ್ಲ ಕಡೆ ನಾಕಾಬಂದಿ ಮಾಡಿ ವಾಹನಗಳನ್ನು ಪರಿಶೀಲಿಸುತ್ತಿದ್ದು, ಈ ಇಬ್ಬರು ದರೋಡೆಕೋರರಿಗಾಗಿ ಶೋಧ ನಡೆಸುತ್ತಿದ್ದಾರೆ.

ಈ ಇಬ್ಬರು ದರೋಡೆಕೋರರು ಬಿಹಾರದವರೆಂದು ಹೇಳಲಾಗುತ್ತಿದ್ದು, 24 ಗಂಟೆಯೊಳಗೆ ಅವರನ್ನು ಬಂಧಿಸುವುದಾಗಿ ಸ್ಥಳದಲ್ಲಿದ್ದ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಟಿಎಂಗೆ ಹಣ ತುಂಬಲು ಯಾವ ಸಮಯದಲ್ಲಿ ಏಜೆನ್ಸಿ ವಾಹನ ಬರುತ್ತದೆ ಎಂಬುದನ್ನು ತಿಳಿದುಕೊಂಡೇ ದರೋಡೆಕೋರರು ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೀದರ್‌ ತಲ್ಲಣ: ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಏಕಾಏಕಿ ಗುಂಡಿನ ಸುರಿಮಳೆಗೈದು ಹಣದ ಬಾಕ್ಸ್ ಅನ್ನು ಎತ್ತಲು ಸಾಧ್ಯವಾಗದಿದ್ದರೂ ಕೆಳಗೆ ಎದ್ದು ಬಿದ್ದು ಕೊನೆಗೂ ಬಾಕ್ಸ್ ಅನ್ನು ಎತ್ತಿ ಬೈಕ್‌ನಲ್ಲಿಟ್ಟುಕೊಂಡು ದರೋಡೆಕೋರರು ಪರಾರಿಯಾಗಿರುವುದನ್ನು ಕಂಡು ಅಲ್ಲಿನ ನಾಗರಿಕರು ತಲ್ಲಣಗೊಂಡಿದ್ದಾರೆ.

ಚಾಲಕನ ವಿಚಾರಣೆ: ಎಟಿಎಂಗೆ ಹಣ ತುಂಬಲು ಬಂದಿದ್ದ ಏಜೆನ್ಸಿಯ ವಾಹನದ ಚಾಲಕ ನಾಗರಾಜ್‌ ದರೋಡೆಕೋರರ ದಾಳಿಯಿಂದ ಪಾರಾಗಿದ್ದು, ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿ ದರೋಡೆಕೋರರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

RELATED ARTICLES

Latest News