ಪುಣೆ,ಜು.13- ಪಿಸ್ತೂಲ್ ಹಿಡಿದುಕೊಂಡು ರೈತರ ಮೇಲೆ ದರ್ಪ ಮೆರೆದಿದ್ದ ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಪೋಷಕರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ಲಾ ಆಗಿದ್ದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಪೊಲೀಸರು ಪೂಜಾ ಖೇಡ್ಕರ್ ತಾಯಿ ಸೇರಿದಂತೆ ಮತ್ತಿತರರ ವಿರುದ್ಧ ದೂರು ದಾಖಲಿಸಿ ಎಫ್‌ಐಆರ್ ಹಾಕಿದ್ದಾರೆ.
ರೈತರೊಬ್ಬರ ದೂರಿನ ಮೇರೆಗೆ ಮನೋರಮಾ ಖೇಡ್ಕರ್ ಮತ್ತು ದಿಲೀಪ್ ಖೇಡ್ಕರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 323, 504, 506, 143, 144, 147, 148 ಮತ್ತು 149 ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಪುಣೆ ಗ್ರಾಮಾಂತರ ಪೊಲೀಸರು ಕನಿಷ್ಠ ಒಂದು ವರ್ಷ ಹಳೆಯದಾಗಿದೆ ಎಂದು ಹೇಳಲಾದ ವೀಡಿಯೊವನ್ನು ಗುರುತಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಇದರಲ್ಲಿ ಖೇಡ್ಕರ್ ಅವರ ತಾಯಿ ಮನೋರಮಾ ಅವರು ಪುಣೆಯ ಮುಲ್ಶಿ ತಹಸಿಲ್‌ನಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ರೈತರಿಗೆ ಪಿಸ್ತೂಲ್‌ನಿಂದ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.
ಪೂಜಾ ಅವರ ತಂದೆ ದಿಲೀಪ್ ಖೇಡ್ಕರ್ ಅವರು ಮುಲ್ಶಿ ತಹಸಿಲ್‌ನಲ್ಲಿ 25 ಎಕರೆ ಭೂಮಿಯನ್ನು ಖರೀದಿಸಿದ್ದರು. ಎರಡು ನಿಮಿಷಗಳ ವೀಡಿಯೊದಲ್ಲಿ ಮನೋರಮಾ ಬೌನ್ಸರ್‌ಗಳ ಜೊತೆಗೂಡಿ ಜಮೀನಿನ ಮಾಲೀಕತ್ವದ ಬಗ್ಗೆ ವ್‌ಯಕ್ತಿಯೊಂದಿಗೆ ಜಗಳವಾಡುವುದನ್ನು ತೋರಿಸುತ್ತದೆ.
ತೆರಿಗೆ ಸಂಗ್ರಹ ಉದ್ದೇಶಕ್ಕಾಗಿ ರಾಜ್ಯದ ಕಂದಾಯ ಇಲಾಖೆ ನಿರ್ವಹಿಸುತ್ತಿರುವ ಸಾತ್-ಬಾರಾ-ಉತಾರಾ ಎಂಬ ದಾಖಲೆ ತನ್ನ ಹೆಸರಿನಲ್ಲಿದೆ ಎಂದು ಮನೋರಮಾ ಮರಾಠಿ ಭಾಷೆಯಲ್ಲಿ ಆ ವ್ಯಕ್ತಿಯನ್ನು ಕೂಗುತ್ತಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.