Tuesday, October 14, 2025
Homeಬೆಂಗಳೂರುಪೂಜೆ ಮಾಡಿ ನಿಧಿ ತೆಗೆಸಿ ಕೊಡಿಸುವ ನೆಪದಲ್ಲಿ ಕಳ್ಳತನ ಮಾಡಿದ್ದವನ ಬಂಧನ

ಪೂಜೆ ಮಾಡಿ ನಿಧಿ ತೆಗೆಸಿ ಕೊಡಿಸುವ ನೆಪದಲ್ಲಿ ಕಳ್ಳತನ ಮಾಡಿದ್ದವನ ಬಂಧನ

Arrest of a thief who stole on the pretext of performing puja

ಬೆಂಗಳೂರು,ಅ.14- ಸಾರ್ವಜನಿಕರನ್ನು ಮರುಳು ಮಾಡಿ ಮಾಟಮಂತ್ರ ಮಾಡಿರುವುದನ್ನು ಬಿಡಿಸುವುದಾಗಿ ಹಾಗೂ ನಿಧಿ ತೆಗೆಸಿ ಕೊಡುವುದಾಗಿ ನಂಬಿಸಿ ಪೂಜೆಯ ನೆಪದಲ್ಲಿ ಚಿನ್ನಾಭರಣಗಳನ್ನಿರಿಸಿ ನಂತರ ಆಭರಣಗಳೊಂದಿಗೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಪಟ್ಟಣದ ನಿವಾಸಿ ದಾದಾಪೀರ್‌(49) ಬಂಧಿತ ಆರೋಪಿ.

ಈತನಿಂದ 53 ಲಕ್ಷ ರೂ. ಮೌಲ್ಯದ 485 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್‌‍ ಠಾಣೆಗಳಲ್ಲಿ ಹತ್ತು ಪ್ರಕರಣಗಳು ದಾಖಲಾಗಿವೆ.

ಪೂಜೆ ನೆಪದಲ್ಲಿ ಮನೆಗೆ ಹೋಗಿ ನಿಮಲ್ಲಿರುವ ಎಲ್ಲಾ ಆಭರಣಗಳನ್ನು ಪೂಜೆಗಿಡುವಂತೆ ಸೂಚಿಸುತ್ತಿದ್ದನು. ಒಂದು ವೇಳೆ ಕಡಿಮೆ ಆಭರಣವಿದ್ದರೆ ಪಕ್ಕದ ಮನೆಯಿಂದ ತರಿಸಿ ಇಡುವಂತೆ ಮನವೊಲಿಸಿ ವಂಚನೆ ಮಾಡುವುದು ಈತನ ಚಾಳಿಯಾಗಿದೆ.

ಬನ್ನೇರುಘಟ್ಟ ಮುಖ್ಯರಸ್ತೆಯ ಕೋಳಿ ಫಾರಂ ಗೇಟ್‌ ಬಸ್‌‍ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಅನುಮಾನಸ್ಪದವಾಗಿ ನಿಂತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಹೋಗಿ ಆ ವ್ಯಕ್ತಿಯನ್ನು ವಿಚಾರಿಸಿದಾಗ ತಾನು ಕೋಲಾರದವನು ಎಂದು ಹೇಳಿದ್ದಾನೆ. ಆತನ ಬಳಿ ಇದ್ದ ಬ್ಯಾಗ್‌ ಪರಿಶೀಲಿಸಿ ಅದರಲ್ಲಿದ್ದ ಚಿನ್ನಾಭರಣಗಳ ಬಗ್ಗೆ ವಿಚಾರಿಸಿದಾಗ ಕಳವು ಮಾಡಿರುವುದಾಗಿ ಹೇಳಿದ್ದು, ಈ ಆಭರಣಗಳನ್ನು ಮಾರಾಟ ಮಾಡಲು ಗಿರಾಕಿ ಹುಡುಕುತ್ತಿದ್ದುದಾಗಿ ಹೇಳಿದ್ದಾನೆ.

ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆ ನಡೆಸಿದಾಗ ಸಾರ್ವಜನಿಕರನ್ನು ಮರಳು ಮಾಡಿ ಮಾಟಮಂತ್ರ ಮಾಡಿರುವುದನ್ನು ಬಿಡಿಸುವುದಾಗಿ ಹಾಗೂ ನಿಧಿ ತೆಗೆದು ಕೊಡುವುದಾಗಿ ಮನವೊಲಿಸಿ ಆಭರಣಗಳನ್ನು ಪೂಜೆಗೆಂದು ಇರಿಸಿ ನಂತರ ಅವುಗಳನ್ನು ಅವರಿಗೆ ಗೊತ್ತಾಗದ ರೀತಿ ಕಳ್ಳತನ ಮಾಡಿದ್ದಾಗಿ ತಿಳಿಸಿದ್ದಾನೆ.

ಕಳವು ಮಾಡಿದ ಆಭರಣಗಳ ಪೈಕಿ ಅರ್ಧದಷ್ಟು ಆಭರಣಗಳನ್ನು ಕೋಲಾರದ ತನ್ನ ವಾಸದ ಮನೆಯಲ್ಲಿ ಇಟ್ಟಿರುವುದಾಗಿ, ಉಳಿದ ಚಿನ್ನಾಭರಣಗಳನ್ನು ನಗರದ ಬಿಟಿಎಂ ಲೇಔಟ್‌ನ ಜ್ಯುವೆಲರಿ ಅಂಗಡಿ ಹಾಗೂ ಮಹಾರಾಷ್ಟ್ರದ ನಾಗಪುರದಲ್ಲಿರುವ ಜ್ಯುವೆಲರಿ ಅಂಗಡಿಯೊಂದರಲ್ಲಿ ಅಡವಿಟ್ಟಿರುವುದಾಗಿ ಹೇಳಿದ್ದಾನೆ.

ತನಿಖೆಯನ್ನು ಮುಂದುವರೆಸಿದ ಪೊಲೀಸರು ಆ ಅಂಗಡಿಗಳಿಂದ ಸುಮಾರು 53 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಬಂಧನದಿಂದ ಹುಳಿಮಾವು ಪೊಲೀಸ್‌‍ ಠಾಣೆಯ ಎರಡು ಪ್ರಕರಣ, ಭದ್ರಾವತಿ ಮತ್ತು ಬಳ್ಳಾರಿ ಪೊಲೀಸ್‌‍ ಠಾಣೆಯ ತಲಾ ನಾಲ್ಕು ಕಳವು ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಇನ್‌ಸ್ಪೆಕ್ಟರ್‌ ಕುಮಾರಸ್ವಾಮಿ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ. ಆರೋಪಿ ವಿರುದ್ಧ ಆಂಧ್ರಪ್ರದೇಶದಲ್ಲಿ ಮೂರು ಪ್ರಕರಣ, ಹೊಸಕೋಟೆ ಮತ್ತು ಶಿವಮೊಗ್ಗದಲ್ಲಿ ತಲಾ ಒಂದು ಪ್ರಕರಣ, ಗಿರಿನಗರ ಪೊಲೀಸ್‌‍ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.

ಐಷಾರಾಮಿ ಕಾರುಗಳ ಗಾಜು ಒಡೆದು ಕಳ್ಳತನ, ಕುಖ್ಯಾತ ರಾಮ್‌ಜಿ ಗ್ಯಾಂಗ್‌ನ ಲೀಡರ್‌ ಸೆರೆ
ನಗರದಲ್ಲಿ ಐಷಾರಾಮಿ ಕಾರುಗಳ ಗಾಜು ಒಡೆದು ದುಬಾರಿ ಬೆಲೆಯ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ತಮಿಳುನಾಡಿನ ಕುಖ್ಯಾತ ರಾಮ್‌ಜಿ ಗ್ಯಾಂಗ್‌ನ ಲೀಡರ್‌ನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಜಯಶೀಲನ್‌ (47) ಬಂಽತ ಆರೋಪಿ.

ಈತನಿಂದ 5 ಲಕ್ಷ ಬೆಲೆಯ ಕ್ಯಾಮೆರಾ, ಲ್ಯಾಪ್‌ಟ್ಯಾಪ್‌, ಟ್ಯಾಬ್‌ ಇನ್ನೀತರ ಎಲೆಕ್ಟ್ರಾನಿಕ್‌ ಉಪಕರಣಗಳನನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ತನ್ನಮಗಹಾಗೂ ಇನ್ನಿತರ ಸಹಚರರೊಂದಿಗೆ ಸೇರಿಕೊಂಡು ಮೂರು ತಿಂಗಳಿಗೊಮ್ಮೆ ನಗರಕ್ಕೆ ಬಂದು ಐಷಾರಾಮಿ ಕಾರುಗಳ ಗಾಜುಗಳನ್ನು ಒಡೆದು ದುಬಾರಿ ಬೆಲೆಯ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದನು. ಆರೋಪಿಯ ಬಂಧನದಿಂದ 3 ಪ್ರಕರಣಗಳು ಬೆಳಕಿಗೆ ಬಂದಿವೆ.
ವಿಜಯನಗರ, ಜಯನಗರ ಹಾಗೂ ಸಿಟಿ ರೈಲ್ವೆ ಪೊಲೀಸ್‌ ಠಾಣೆಯ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರು, ಆರೋಪಿಯು ಇದೇ ರೀತಿ ರಾಜ್ಯದ ಬೇರೆಬೇರೆ ಕಡೆಗಳಲ್ಲಿಯೂ ಕಳ್ಳತನ ಮಾಡಿರುವ ಶಂಕೆ ಇದ್ದು ತನಿಖೆ ಮುಂದುವರೆದಿದೆ.

ವಿಲಾಸಿ ಜೀವನಕ್ಕಾಗಿ ಮನೆಗಳ್ಳತನ : 8 ಲಕ್ಷ ರೂ.ಮೌಲ್ಯದ ಆಭರಣ ಜಪ್ತಿ
ಮನೆ ಬೀಗ ಹಾಕಿ ಕೀಗಳನ್ನು ಇಡುವ ಜಾಗವನ್ನು ನೋಡಿಕೊಂಡು ಅಂತಹ ಮನೆಗಳಿಗೆ ಕನ್ನ ಹಾಕಿ ವಿಲಾಸಿ ಜೀವನ ನಡೆಸುತ್ತಿದ್ದ ಖದೀಮನನ್ನು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿ 8 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕನಕ ನಗರದ ಜ್ಞಾನ ಮಂದಿರ ಶಾಲೆ ಸಮೀಪದ ನಿವಾಸಿ ಪ್ರಕಾಶ್‌ ಅಲಿಯಾಸ್‌‍ ನೇಪಾಳಿ(33) ಬಂಧಿತ ಆರೋಪಿ.ನಗರದ ವಿವಿಧ ಪೊಲೀಸ್‌‍ ಠಾಣೆಗಳಲ್ಲಿ 28 ಕಳ್ಳತನ ಪ್ರಕರಣಗಳು ಈತನ ಮೇಲೆ ದಾಖಲಾಗಿವೆ.ಈತನ ವಿರುದ್ಧ ಒಟ್ಟು 10 ವಾರೆಂಟ್‌ಗಳು ಜಾರಿಯಾಗಿವೆ.

25 ದಿನಗಳ ಹಿಂದೆಯಷ್ಟೆ ಜೈಲಿನಿಂದ ಈತ ಹೊರ ಬಂದಿದ್ದಾನೆ. ಚಿಕ್ಕ ಚಿಕ್ಕ ಮನೆಗಳೇ ಈತನ ಟಾರ್ಗೆಟ್‌. ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗುವವರು ಅಥವಾ ಅನ್ಯಕಾರ್ಯದ ನಿಮಿತ್ತ ಹೊರಗೆ ಹೋಗುವಾಗ ಬೀಗ ಹಾಕಿ ಆ ಕೀಯನ್ನು ಕಿಟಕಿ ಬಳಿಯೋ ಅಥವಾ ಶೂ ರ್ಯಾಕ್‌ನೊಳಗೋ ಇಲ್ಲವೇ ಹೂ ಕುಂಡಗಳಲ್ಲಿ ಇಟ್ಟು ಹೋಗುವುದನ್ನು ಗಮನಿಸಿಯೇ ಅಂತಹ ಮನೆಗಳಲ್ಲಿ ಕಳ್ಳತನ ಮಾಡುವುದು ಈತನ ಚಾಳಿ.

ಕಳವು ಮಾಡಿದ ನಂತರ ಕೀಯನ್ನು ಮತ್ತೆ ಅದೇ ಜಾಗದಲ್ಲಿ ಇಟ್ಟು ಎಸ್ಕೇಪ್‌ ಆಗುತ್ತಿದ್ದನು. ಚಾಲಕ ವೃತ್ತಿ ಮಾಡುವ ನಿತೀನ್‌ ರಾಜ್‌ ಎಂಬುವವರ ಪತ್ನಿ ಮನೆಗೆ ಬೀಗ ಹಾಕಿ ಕೀಯನ್ನು ಕಿಟಕಿಯೊಳಗೆ ಇಟ್ಟು ಕೆಲಸಕ್ಕೆ ಹೋಗಿ ಸಂಜೆ ವಾಪಸ್‌‍ ಬಂದಾಗ ಇವರ ಮನೆಯ ಬೀಗ ತೆಗೆದಿರುವುದು ಗೊತ್ತಾಗಿದೆ.

ಒಳಗೆ ಹೋಗಿ ನೋಡಿದಾಗ ಬೀರುವಿನಲ್ಲಿದ್ದ 3 ಲಕ್ಷ ರೂ.ಬೆಲೆಯ 31 ಗ್ರಾಂ ಚಿನ್ನಾಭರಣ, ಬೆಳ್ಳಿ ಉಂಗುರ ಕಳ್ಳತನವಾಗಿರುವುದು ಕಂಡುಬಂದಿದೆ. ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ 8 ಲಕ್ಷ ರೂ. ಬೆಲೆ ಬಾಳುವ 85 ಗ್ರಾಂ ಚಿನ್ನಾಭರಣ, 54 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES

Latest News