ಮುಂಬೈ,ಏ.29- ಮಹದೇವ್ ಬೆಟ್ಟಿಂಗ್‌ಆ್ಯಪ್ ಪ್ರಕರಣದಲ್ಲಿ ಬಂಧಿತನಾಗಿರುವ ಸಾಹಿಲ್‌ಖಾನ್ ಪೊಲೀಸರಿಗೆ ಸಿಕ್ಕಿಬೀಳುವ ಮುನ್ನ ಕರ್ನಾಟಕದಲ್ಲೂ ತಲೆಮರೆಸಿಕೊಳ್ಳಲು ಯತ್ನಿಸಿದ್ದ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಸಾಹಿಲ್‌ಖಾನ್‌ಗೆ ನಿರೀಕ್ಷಣಾ ಜಾಮೀನು ದೊರೆಯದೆ ಇದ್ದ ಸಂದರ್ಭದಲ್ಲಿ ಆತ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ವೇಷ ಮರೆಸಿಕೊಂಡು ಐದು ರಾಜ್ಯಗಳಲ್ಲಿ 1800 ಕಿ.ಮೀಗೂ ಹೆಚ್ಚು ದೂರ ಸಂಚರಿಸಿದ್ದ ಎನ್ನಲಾಗಿದೆ.
ಕೊನೆಗೂ ಆತ ಛತ್ತೀಸ್‌ಘಡದ ಜಗದಲ್ಪುರದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಜಾಮೀನು ಸಿಗುವುದಿಲ್ಲ ಎಂದು ತಿಳಿಯುತ್ತಿದ್ದಂತೆ ಆತ ಸೀದಾ ಕರ್ನಾಟಕದ ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಖಾನ್ ವೇಷ ಬದಲಿಸಿ ಸ್ಕಾರ್ಫ್ ಹಿಂದೆ ತನ್ನ ಮುಖವನ್ನು ಮರೆಮಾಚಿಕೊಂಡು ಓಡಾಡುತ್ತಿದ್ದ ಎಂದು ವರದಿಯಾಗಿದೆ.
ಆದಾಗ್ಯೂ, ಪೊಲೀಸರು ಆತ ಹೈದರಾಬಾದ್‌ನಲ್ಲಿರುವುದುನ್ನು ಪತ್ತೆಹಚ್ಚಿದ್ದರು ಹಾಗೂ ಅಲ್ಲಿಂದ ಛತ್ತೀಸ್‌ಘಢದ ಕಡೆಗೆ ಪಲಾಯನ ಮಾಡಿರುವುದನ್ನು ಕಂಡು ಹಿಡಿದು ಸಿನಿಮಿಯ ಶೈಲಿಯಲ್ಲಿ ಆತನನ್ನು ಬಂಧಿಸಲಾಗಿದೆ.
ಖಾನ್ ಅವರು ಲಯನ್ ಬುಕ್ ಮತ್ತು ಲೋಟಸ್ 24/7 ನಂತಹ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಆದಾಗ್ಯೂ, ಖಾನ್ ಅವರು ಜೂಜಿನ ವೇದಿಕೆಯೊಂದಿಗೆ ನೇರ ಸಂಬಂಧವನ್ನು ಹೊಂದಿಲ್ಲ ಎಂದು ವಾದಿಸುತ್ತಿದ್ದಾರೆ.