Wednesday, May 21, 2025
Homeರಾಜ್ಯಕರ್ನಾಟಕದಲ್ಲಿ ಮಿತಿಮೀರಿದ ಅನ್ಯಭಾಷಿಗರ ದರ್ಪ : ಭುಗಿಲೆದ್ದ ಕನ್ನಡಿಗರ ಆಕ್ರೋಶ

ಕರ್ನಾಟಕದಲ್ಲಿ ಮಿತಿಮೀರಿದ ಅನ್ಯಭಾಷಿಗರ ದರ್ಪ : ಭುಗಿಲೆದ್ದ ಕನ್ನಡಿಗರ ಆಕ್ರೋಶ

arrogance of non-native speakers in Karnataka: Outrage of Kannadigas erupts

ಬೆಂಗಳೂರು, ಮೇ 21– ರಾಜ್ಯದಲ್ಲಿ ದಿನೇ ದಿನೇ ಅನ್ಯ ಭಾಷಿಗರ ದರ್ಪ ಹೆಚ್ಚಾಗುತ್ತಿದ್ದು, ಕನ್ನಡವನ್ನೇ ಮಾತನಾಡುವುದಿಲ್ಲ. ಏನು ಬೇಕಾದರೂ ಮಾಡಿಕೊಳ್ಳಿ ಎಂಬ ಉದ್ಧಟತನ ಮೆರೆಯುತ್ತಿದ್ದಾರೆ. ಆನೆಕಲ್‌ ತಾಲ್ಲೂಕು ಚಂದಾಪುರದ ಸೂರ್ಯ ಸಿಟಿಯ ಎಸ್‌‍ಬಿಐ ಬ್ಯಾಂಕ್‌ನ ಸಿಬ್ಬಂದಿಯೊಬ್ಬರು, ನಾನು ಕನ್ನಡ ಮಾತನಾಡುವುದಿಲ್ಲ. ಹಿಂದಿಯಲ್ಲಿ ಮಾತ್ರ ಮಾತನಾಡುತ್ತೇನೆ. ನೀವು ಬೇಕಿದ್ದರೆ ಎಸ್‌‍ಬಿಐ ಅಧ್ಯಕ್ಷರ ಬಳಿ ಪ್ರಶ್ನೆ ಮಾಡಿ ಎಂದು ಕನ್ನಡ ಮಾತನಾಡಲು ಕೇಳಿದ ಕನ್ನಡಿಗನಿಗೆ ಅವಾಜ್‌ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಇದು ಕರ್ನಾಟಕ ಕನ್ನಡಕ್ಕೆ ಆದ್ಯತೆ ಇರಬೇಕು. ಸ್ಥಳೀಯ ಬ್ಯಾಂಕ್‌ ಶಾಖೆಗಳ ಸಿಬ್ಬಂದಿಗಳು ಸ್ಥಳೀಯ ಭಾಷೆಯಲ್ಲಿ ಮಾತನಾಡುವುದು ಹಾಗೂ ವ್ಯವಹರಿಸುವುದು ಕಡ್ಡಾಯ ಎಂದು ಆರ್‌ಬಿಐ ನಿಯಮಾವಳಿಗಳಿವೆ ಎಂದು ಕನ್ನಡಿಗ ಕೇಳಿದ ಹೊರತಾಗಿಯೂ ಬ್ಯಾಂಕ್‌ ಸಿಬ್ಬಂದಿ ಕ್ಯಾರೆ ಎಂದಿಲ್ಲ. ಇದು ಇಂಡಿಯಾ, ಇಲ್ಲಿ ಹಿಂದಿ ಮಾತನಾಡುತ್ತೇನೆ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿ ತನ್ನ ಪಾಡಿಗೆ ತಾನು ಹೊರಟು ಹೋಗುತ್ತಾರೆ.

ಅನ್ಯ ಭಾಷಿಗರ ಈ ರೀತಿಯ ದರ್ಪದಿಂದ ರೊಚ್ಚಿಗೆದ್ದ ಕನ್ನಡ ಪರ ಸಂಘಟನೆಗಳು ಬ್ಯಾಂಕ್‌ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿವೆ. ಅಷ್ಟರಲ್ಲಿ ಸಿಬ್ಬಂದಿ ಕ್ಷಮೆ ಕೇಳಿರುವ ವಿಡಿಯೋವನ್ನು ಬ್ಯಾಂಕ್‌ ಹರಿಯಬಿಟ್ಟಿದೆ.

ಇಂತಹ ಘಟನೆಗಳು ದಿನ ನಿತ್ಯ ವರದಿಯಾಗುತ್ತಲೇ ಇವೆ. ಸರ್‌.ಎಂ.ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ್ದ ಸ್ಟೆಟ್‌ ಬ್ಯಾಂಕ್‌ ಮೈಸೂರು ಅನ್ನು ಸ್ಟೆಟ್‌ ಬ್ಯಾಂಕ್‌ ಆಫ್‌ ಇಂಡಿಯಾದೊಂದಿಗೆ ವಿಲೀನ ಮಾಡಿದ ಬಳಿಕ ಕರ್ನಾಟಕದಾದ್ಯಂತ ಎಲ್ಲಾ ಶಾಖೆಗಳಲ್ಲೂ ಅನ್ಯಭಾಷಿಗರೆ ತುಂಬಿ ಹೋಗಿದ್ದು, ಅಲ್ಲಿರುವ ಅಲ್ಪಸ್ವಲ್ಪ ಕನ್ನಡಿಗರು ಕೂಡ ಬೇರೆ ಭಾಷೆಯಲ್ಲಿ ವ್ಯವಹರಿಸುತ್ತಿರುವುದು ಸಾಮಾನ್ಯವಾಗಿದೆ.

ರಾಷ್ಟ್ರೀಕೃತ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಸ್‌‍ಬಿಐನೊಂದಿಗೆ ವ್ಯವಹರಿಸಲು ಗ್ರಾಹಕರು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಆದರೆ ಭಾಷಾ ಸಮಸ್ಯೆ ಗ್ರಾಹಕರನ್ನು ಪಜೀತಿಗೀಡು ಮಾಡಿದೆ.

ತ್ರಿಭಾಷಾ ಸೂತ್ರಕ್ಕೆ ಎಳ್ಳುನೀರು:
ಕರ್ನಾಟಕದಲ್ಲಿರುವ ಬಹುತೇಕ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಚಿಟ್‌ಫಂಡ್‌ಗಳು, ವಿಮಾ ಕಂಪನಿಗಳು ಅನ್ಯ ಭಾಷೆಯಲ್ಲೇ ವ್ಯವಹಾರ ನಡೆಸುತ್ತಿವೆ. ಆರಂಭಿಕ ಅರ್ಜಿ ನಮೂನೆ, ಷರತ್ತುಗಳು, ವಿವರಣೆಗಳು, ವ್ಯವಹಾರಿಕ ನಮೂನೆ ಸೇರಿದಂತೆ ಎಲ್ಲವೂ ಇಂಗ್ಲಿಷ್‌ ನಲ್ಲೇ ಇರುತ್ತವೆ. ಸೂಕ್ಷ್ಮದರ್ಶಕ ಹಿಡಿದು ನೋಡಬೇಕಾದಷ್ಟು ಸಣ್ಣ ಗಾತ್ರದಲ್ಲಿ ಇರುವ ಷರತ್ತುಗಳನ್ನು ಇಂಗ್ಲಿಷ್‌ ಬಲ್ಲವರೆ ಓದಲು ಪರದಾಡಬೇಕಾದ ಸ್ಥಿತಿಯಿದೆ. ತ್ರಿಭಾಷಾ ಸೂತ್ರ ಇಲ್ಲಿ ಸಂಪೂರ್ಣ ಅಲಕ್ಷ್ಯಕ್ಕೆ ಒಳಗಾಗಿದೆ.

ಬ್ಯಾಂಕ್‌, ಖಾಸಗಿ ಹಣಕಾಸು ಸಂಸ್ಥೆಗಳು, ವಿಮಾ ಕಂಪೆನಿಗಳು ತಮ ಅನುಕೂಲಕ್ಕೆ ತಕ್ಕ ಹಾಗೆ ಷರತ್ತುಗಳನ್ನು ರೂಪಿಸಿಕೊಂಡಿರುತ್ತವೆ. ಅದನ್ನು ಓದಲು ಸಾಧ್ಯವಾಗದೆ ಸಹಿ ಹಾಕಿ ಹಣಕಾಸು ಅಥವಾ ಇತರ ಸೇವೆಯ ನೆರವು ಪಡೆದವರು ಮುಂದೆ ನಾನಾ ರೀತಿಯ ತೊಂದರೆಗೆ ಸಿಲುಕುವುದು ಸಾಮಾನ್ಯವಾಗಿದೆ.

ಸಮಸ್ಯೆ ಬಂದಾಗ ಪ್ರಶ್ನೆ ಮಾಡಿದರೆ, ನೀವೆ ಷರತ್ತುಗಳಿಗೆ ಒಪ್ಪಿ ಸಹಿ ಮಾಡಿಕೊಟ್ಟಿದ್ದೀರಾ. ಈಗ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ವಸೂಲಿಗೆ ಬರುವ ಅಥವಾ ಕ್ಲೈಮ್‌ಗಳನ್ನು ನಿರಾಕರಿಸುವ ಸಿಬ್ಬಂದಿ ಪ್ರತಿಕ್ರಿಯಿಸುತ್ತಾರೆ. ಬೇಕಿದ್ದರೆ ನ್ಯಾಯಾಲಯದಲ್ಲಿ ದಾವೆ ಹೂಡಿ ಎಂಬ ಉತ್ತರವೂ ಬರುತ್ತದೆ. ಪ್ರತಿಯೊಬ್ಬರು ತಮಗಾದ ತೊಂದರೆಗೆ ನ್ಯಾಯಾಲಯದಲ್ಲಿ ದಾವೆ ಹೂಡುವುದು ಸುಲಭದ ಮಾತಲ್ಲ. ಹಣಕಾಸು ಹಾಗೂ ಇತರ ಸಂಸ್ಥೆಗಳು ತಮ ಷರತ್ತುಗಳನ್ನು ಕನ್ನಡದಲ್ಲಿ ಒದಗಿಸಿದರೆ ಗ್ರಾಹಕರು ಎಚ್ಚೆತ್ತುಕೊಳ್ಳಲು ಅವಕಾಶವಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಕನ್ನಡದಲ್ಲಿ ಷರತ್ತುಗಳನ್ನು ಒದಗಿಸುವುದಿರಲಿ, ಕನ್ನಡ ಭಾಷೆಯಲ್ಲಿ ವ್ಯವಹರಿಸುವುದಕ್ಕೆ ಸಂಸ್ಥೆಗಳು ನಿರಾಕರಿಸುತ್ತಿವೆ.

ಅನ್ಯ ಭಾಷಿಗರ ಹಾವಳಿ ಹೆಚ್ಚಾದಾಗ ಕನ್ನಡ ಪರ ಸಂಘಟನೆಗಳು ಮಧ್ಯ ಪ್ರವೇಶಿಸಿ ಪಾಠ ಕಲಿಸುತ್ತವೆ. ಆದರೂ ಇಂತಹ ಘಟನೆಗಳು ಮುಂದುವರೆಯುತ್ತಲೇ ಇವೆ. ಕರವೇ ಹೋರಾಟದಿಂದಾಗಿ ಬೆಂಗಳೂರಿನಲ್ಲಿ ಇಂಗ್ಲಿಷ್‌ ಮಯವಾಗಿದ್ದ ನಾಮಫಲಕಗಳಲ್ಲಿ ಕನ್ನಡದ ದರ್ಶನವಾಗುತ್ತಿದೆ. ಕನ್ನಡದ ವಿಷಯದಲ್ಲಿ ಸರ್ಕಾರ ಇಬ್ಬಂದಿತನ ಪ್ರದರ್ಶಿಸುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಮಗ್ರ ಕನ್ನಡ ಕಾಯ್ದೆಯನ್ನೂ ರೂಪಿಸಿತ್ತು. ಅದೂ ಕೂಡ ಹಲ್ಲಿಲ್ಲದ ಹಾವಿನಂತಾಗಿದೆ. ಕನ್ನಡ ವಿರೋಧಿಗಳಿಗೆ ತಕ್ಕ ಪಾಠ ಕಲಿಸುವ ಕಾನೂನು ರೂಪಿಸಿದರೆ ವ್ಯಾಪಾರ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಧಕ್ಕೆಯಾಗುತ್ತದೆ ಎಂಬ ಸಬೂಬನ್ನು ಸರ್ಕಾರ ಮೊದಲಿನಿಂದಲೂ ಹೇಳಿಕೊಂಡೇ ಬರುತ್ತಿದೆ.

ಇಂತಹ ಸಬೂಬಿನಿಂದಲೇ ರಾಜ್ಯದ ಬಹುತೇಕ ಗುತ್ತಿಗೆಗಳು ನೆರೆ ರಾಜ್ಯಗಳ ಪಾಲಾಗಿವೆ. ಬೀದಿ ಬದಿಯ ವ್ಯಾಪಾರ ಶೇ.90ರಷ್ಟು ಅನ್ಯ ಭಾಷಿಗರ ಕೈನಲ್ಲಿದೆ. ಬೆಂಗಳೂರಿನಲ್ಲಿ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಚಿಕ್ಕಪೇಟೆಯಲ್ಲಿ ಹಿಂದಿ, ಗುಜರಾತಿ, ಶಿವಾಜಿನಗರದಲ್ಲಿ ಉರ್ದು, ಮಾರುಕಟ್ಟೆಯಲ್ಲಿ ತಮಿಳು ಎಂಬಂತಾಗಿದೆ.

ಕನ್ನಡ ಮಾತನಾಡಲು, ಕನ್ನಡದಲ್ಲಿ ವ್ಯವಹರಿಸಲು, ಕನ್ನಡದಲ್ಲಿ ಮಾಹಿತಿ ನೀಡಲು ನಿರಾಕರಿಸುವವರಿಗೆ ಮತ್ತು ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಠಿಣ ಕಾನೂನು ರೂಪಿಸುವವರೆಗೂ ರಾಜ್ಯದಲ್ಲಿ ಮಾತೃಭಾಷೆ ಕನ್ನಡ ಅನಾಥವಾಗಿಯೇ ಉಳಿಯುತ್ತದೆ. ಮಹಾರಾಷ್ಟ, ತಮಿಳುನಾಡಿನಂತಹ ರಾಜ್ಯಗಳು ಭಾಷೆಯ ಬಗ್ಗೆ ದಿಟ್ಟ ನಿಲುವು ತೆಗೆದುಕೊಂಡ ಪರಿಣಾಮ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತಿದ್ದು, ವಾಣಿಜ್ಯ ಚಟುವಟಿಕೆಗಳು ಸ್ವಾವಲಂಬಿಯಾಗಿವೆ. ಕರ್ನಾಟಕದಲ್ಲಿ ಎಲ್ಲವೂ ಪರಾವಲಂಬಿಯಾಗಿದೆ. ಜೊತೆಗೆ ಸೂರ್ಯ ಸಿಟಿ ಎಸ್‌‍ಬಿಐ ಶಾಖೆಯಲ್ಲಿ ನಡೆದಂತಹ ಘಟನೆಗಳು ಪುನಾರಾವರ್ತನೆಯಾಗುತ್ತಲೇ ಇರುತ್ತವೆ.

RELATED ARTICLES

Latest News