Sunday, March 9, 2025
Homeಮನರಂಜನೆಕಲಾವಿದರ ಮಾಸಾಶನ 2000 ರೂ.ಗಳಿಂದ 2500 ರೂ.ಗೆ ಹೆಚ್ಚಳ

ಕಲಾವಿದರ ಮಾಸಾಶನ 2000 ರೂ.ಗಳಿಂದ 2500 ರೂ.ಗೆ ಹೆಚ್ಚಳ

Artists' monthly stipend increased from Rs 2000 to Rs 2500

ಬೆಂಗಳೂರು, ಮಾ.7-ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಕಲಾವಿದರ ಮಾಸಾಶನವನ್ನು 2000 ರೂ.ಗಳಿಂದ 2500 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸಭೆಯಲ್ಲಿ 2025-26ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, ಶಿಕ್ಷಣ ತಜ್ಞ, ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ಅವರ ಸ್ಮರಣಾರ್ಥವಾಗಿ ಡಾ.ಹೆಚ್.ನರಸಿಂಹಯ್ಯ ಪ್ರಾಧಿಕಾರವನ್ನು ಸ್ಥಾಪಿಸುವುದಾಗಿ ಘೋಷಿಸಿದರು. ನರಸಿಂಹಯ್ಯ ಅವರು ವ್ಯಾಸಂಗ ಮಾಡಿದ ಗೌರಿಬಿದನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸುವುದಾಗಿ ಹೇಳಿದರು.

ಅಂತಾರಾಷ್ಟ್ರೀಯ ಬಸವ ಆಧ್ಯಾತ್ಮಿಕ ಹಾಗೂ ವಚನ ಅಧ್ಯಯನ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲು ತಾತ್ವಿಕ ಅನುಮೋದನೆ ನೀಡಿದ್ದು, ಈ ಬಗ್ಗೆ ತಜ್ಞರ ಸಮಿತಿಯನ್ನು ರಚಿಸಿ ವಿಸ್ತ್ರತ ವರದಿ ಪಡೆದು ಕ್ರಮ ಕೈಗೊಳ್ಳಲಾವುದು, ಬಾಗಲಕೋಟಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮತ್ತು ಪಾರಂಪರಿಕ ತಾಣವಾದ ಬಾದಾಮಿಯ ಚಾಲುಕ್ಯ ಉತ್ಸವದಲ್ಲಿ ನೃತ್ಯೋತ್ಸವ ಕಾರ್ಯಕ್ರಮವನ್ನು ಎರಡು ಕೋಟಿ ರೂ. ವೆಚ್ಚದಲ್ಲಿ ಆಯೋಜಿಸಲಾಗುವುದು ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬೋಳುವಾರು ಮೊಹಮ್ಮದ್ ಕುಂಇ ಅವರ ಸ್ವಾತಂತ್ಯದ ಓಟ ಕಾದಂಬರಿಯನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ನಾಟಕ ರೂಪದಲ್ಲಿ ನಿರ್ಮಾಣ ಮಾಡಿ ರಾಜ್ಯಾದ್ಯಂತ ಪ್ರದರ್ಶಿಸಲಾಗುವುದು ಎಂದ ಅವರು, ಕನ್ನಡ ಭಾರತಿ ಎನ್ನುವ ಪುಸ್ತಕ ಪಾಲಿಕೆಯಡಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಶ್ರೇಷ್ಠ ಸಾಧಕರ ಜೀವನವನ್ನು ಪರಿಚಯಿಸುವ ಪುಸ್ತಕಗಳನ್ನು 50 ಲಕ್ಷ ರೂ. ಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ದಾವಣಗೆರೆಯ ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ ಸ್ಥಾಪಿಸಲಾಗಿರುವ ವೃತ್ತಿ ರಂಗಾಯಣದಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯ, ವೃತ್ತಿ ರಂಗಾಯಣ ಸಮುಚ್ಚಯ ಹಾಗೂ ಥಿಯೇಟರ್ ಮ್ಯೂಸಿಯಂ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಟ್ರಸ್ಟ್‌ ನ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಬೆಂಗಳೂರಿನಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಒಂದು ಕೋಟಿ ರೂ. ಅನುದಾನ ಒದಗಿಸಲಾಗುವುದು.

ಸೇವಾದಳ ಸಂಸ್ಥಾಪಕ ಹಾಗೂ ಸ್ವಾತಂತ್ರ್ಯ ಸೇನಾನಿ ಪದ್ಮಭೂಷಣ ಡಾ.ಎನ್.ಎಸ್.ಹರ್ಡೀಕ‌ರ್ರವರ ಸ್ಮಾರಕವನ್ನು ಬೆಳಗಾವಿ ಜಿಲ್ಲೆಯ ಘಟಪ್ರಭಾದ ಆರೋಗ್ಯ ಧಾಮದಲ್ಲಿ ನಿರ್ಮಿಸಲು ಎರಡು ಕೋಟಿ ರೂ.ಒದಗಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದರು.

ಡಿಜಿಟಲೀಕರಣ: ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ 2,500 ಪ್ರಾಚೀನ ತಾಳೆಗರಿಯ ಹಸ್ತಪ್ರತಿಗಳ ಡಿಜಿಟಲೀಕರಣ ಯೋಜನೆಯನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.

ಮತೀಯವಾದದಿಂದ ಪ್ರಭಾವಿತವಾಗುತ್ತಿರುವ ಇಂದಿನ ಯುವಜನತೆಗೆ ಸಾಮರಸ್ಯದಿಂದ ಬದುಕುವಂತೆ ಪ್ರೇರೇಪಿಸುವ ರಾಮ್ ಮನೋಹರ್ ಲೋಹಿಯಾ ಹಾಗೂ ಇತರ ಮಹನೀಯರ ಪುಸ್ತಕಗಳಲ್ಲಿನ ಸೌಹಾರ್ದತೆಯ ಅಂಶಗಳನ್ನು ಕ್ರೋಡೀಕರಿಸಿ ಕನ್ನಡ ಭಾಷೆಯಲ್ಲಿ ಪ್ರಕಟಿಸಲಾಗುವುದು. ಈ ಕುರಿತು ಕಮ್ಮಟ, ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು ಎಂದು ಅವರು ಹೇಳಿದರು.

ಮೈಸೂರಿನ ರಂಗಾಯಣದ ಕಾರ್ಯ ಚಟುವಟಿಕೆಗಳಿಗೆ ಎರಡು ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು. ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರಕ್ಕೆ ತತ್ವಪದ ಪಾರಿಭಾಷಿಕ ಪದಕೋಶದ ಸಿದ್ಧತೆ ಮತ್ತು ಪ್ರಕಟಣೆ ಕಾರ್ಯಕ್ಕಾಗಿ ಒಂದು ಕೋಟಿ ರೂ. ಒದಗಿಸುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದರು.

RELATED ARTICLES

Latest News