ನವದೆಹಲಿ,ಸೆ.13- ದೆಹಲಿ ಅಬಕಾರಿ ಪರಿಷ್ಕರಣ ನೀತಿ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಪಟ್ಟಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಆರು ತಿಂಗಳ ನಂತರ ಬಿಡುಗಡೆಯ ಭಾಗ್ಯ ಲಭಿಸಿದೆ.ಸುಪ್ರೀಂಕೋರ್ಟ್ ಇಂದು ಕೇಜ್ರಿವಾಲ್ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಯಾವುದೇ ಕ್ಷಣದಲ್ಲಿ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಕೇಜ್ರಿವಾಲ್ ಅವರು ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಇಲ್ಲವೇ ಮಾಧ್ಯಮಗಳಿಗೆ ಹೇಳಿಕೆ ನೀಡದಿರುವುದು ಸರ್ಕಾರಿ ಕಡತಗಳಿಗೆ ಸಹಿ ಹಾಕದಿರುವುದು, ಕಚೇರಿಗಳಿಗೆ ತೆರಳದಿರುವುದು, 10 ಲಕ್ಷದ ಎರಡು ಬಾಂಡ್ಗಳು, ವಿಚಾರಣಾಧೀನ ನ್ಯಾಯಾಲಯಕ್ಕೆ ಸಹಕಾರ ಕೊಡುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿದೆ.
ಅಬಕಾರಿ ಪರಿಷ್ಕರಣ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಪಟ್ಟಿದ್ದ ದೆಹಲಿ ಮಾಜಿ ಡಿಸಿಎಂ ಮನೀಷ್ ಸಿಸೋಡಿಯಾ, ರಾಜ್ಯಸಭಾ ಸದಸ್ಯ ಸಂಜಯ್ಸಿಂಗ್, ತೆಲಂಗಾಣ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಪುತ್ರಿ ಕೆ. ಕವಿತ ಹಾಗೂ ವಿನಯ್ ನಾಯರ್ ಅವರುಗಳಿಗೆ ಈಗಾಗಲೇ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ, ಉಜ್ಜಲ್ ಬುಯಾನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಕೇಜ್ರಿವಾಲ್ಗೆ ಜಾಮೀನು ಮಂಜೂರು ಮಾಡಿ ಅಗತ್ಯವಿದ್ದಲ್ಲಿ ತನಿಖಾ ಸಂಸ್ಥೆಗಳಿಗೆ, ತನಿಖೆಗೆ ಸಹಕಾರ ನೀಡಬೇಕು ಎಂದು ಸೂಚನೆ ನೀಡಿತು.
ಆಪ್ ರಾಷ್ಟ್ರೀಯ ಸಂಚಾಲಕರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಈ ಮೊದಲು ಮಾ. 21 ರಂದು ಬೇನಾಮಿ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಅವರಿಗೆ ಜಾಮೀನು ಸಿಕ್ಕಿತ್ತಾದರೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.26 ರಂದು ತಿಹಾರ್ ಜೈಲಿನಲ್ಲಿದ್ದ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿತ್ತು.
ತಮ ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್ರವರು ತಮ ಪರವಾಗಿ ವಾದಿಸಲು ಸುಪ್ರೀಂಕೋರ್ಟ್ನಲ್ಲಿ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಅವರನ್ನು ನೇಮಿಸಿಕೊಂಡಿದ್ದರು.ಕೇಜ್ರಿವಾಲ್ ಬಂಧಿಸುವ ವೇಳೆ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್ ಸಿಬಿಐ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಸಿಬಿಐ ಪಂಜರದ ಗಿಳಿಯಲ್ಲ ಎಂಬುದನ್ನು ಜನತೆಯ ಮುಂದೆ ಸಾಬೀತುಪಡಿಸಬೇಕು. ಆರೋಪಿಯೊಬ್ಬನ ಮೇಲೆ ಆರೋಪವಿದ್ದ ತಕ್ಷಣ ಜಾಮೀನು ನೀಡಬಾರದು ಎಂದು ತಕರಾರು ತೆಗೆಯುವುದು ಸರಿಯಲ್ಲ. ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನು ಆತುರವಾಗಿ ಬಂಧಿಸಿದೆ ಎಂದು ವಕೀಲರು ಆಕ್ಷೇಪ ವ್ಯಕ್ತಪಡಿಸಿದೆ.
ಕೇಜ್ರಿವಾಲ್ ಅವರನ್ನು ಯಾವ ಕಾರಣಕ್ಕಾಗಿ ಅಷ್ಟೊಂದು ಆತುರದಲ್ಲಿ ಬಂಧಿಸಲಾಯಿತು. ಸಿಬಿಐನ ಉದ್ದೇಶವಾದರೂ ಏನು?, ನೀವು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದೀರೋ, ಇಲ್ಲವೇ ಬೆದರಿಸುವ ಕೆಲಸ ಮಾಡುತ್ತಿದ್ದೀರೋ ಎಂದು ಸಿಬಿಐ ಪರ ವಕೀಲರನ್ನು ಕಠಿಣ ಪದಗಳಲ್ಲಿ ಪ್ರಶ್ನೆ ಮಾಡಿದರು.
ಜಾಮೀನು ನಿರಾಕರಿಸಿದ್ದನ್ನು ಹಾಗೂ ಸಿಬಿಐ ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್, ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಕೇಜ್ರಿವಾಲ್ ಅವರನ್ನು ಸಿಬಿಐ ಜೂ. 26ರಂದು ಬಂಧಿಸಿತ್ತು. ಅವರ ಬಂಧನವನ್ನು ದೆಹಲಿ ಹೈಕೋರ್ಟ್ ಆ. 5ರಂದು ಎತ್ತಿಹಿಡಿದಿತ್ತು.
ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್ ಆಗಸ್ಟ್ 14ರಂದು ಕೇಜ್ರಿವಾಲ್ ಅವರ ಮನವಿಯನ್ನು ತಿರಸ್ಕರಿಸಿತ್ತು. ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಕೇಳಿತ್ತು. ಹೈಕೋರ್ಟ್ ಜಾಮೀನು ನಿರಾಕರಿಸಿದ್ದರಿಂದ ಅರವಿಂದ್ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್ನಲ್ಲಿ ಮೇಲನವಿ ಸಲ್ಲಿಸಲು ಕಾರಣವಾಯಿತು.
ಆ.14 ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಸಿಬಿಐ ಪ್ರತಿಕ್ರಿಯೆ ಕೇಳಿತ್ತು. ಆದರೆ ಆ ಹಂತದಲ್ಲಿ ಜಾಮೀನು ನಿರಾಕರಿಸಿತು. ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಕೇಜ್ರಿವಾಲ್ ಅವರನ್ನು ಜೂ.26ರಂದು ಸಿಬಿಐ ಬಂಧಿಸಿತ್ತು. ದೆಹಲಿ ಮುಖ್ಯಮಂತ್ರಿ ಮತ್ತು ಇತರ ಹಲವು ಆಮ್ ಆದಿ ಪಕ್ಷದ (ಎಎಪಿ) ನಾಯಕರು ದೆಹಲಿಯ ಅಬಕಾರಿ ನೀತಿಯಲ್ಲಿ ಕೆಲವು ಮದ್ಯ ಮಾರಾಟಗಾರರಿಗೆ ಅನುಕೂಲವಾಗುವಂತೆ ಹಣ ವರ್ಗಾವಣೆ ಮಾಡಿದ ಆರೋಪ ಹೊತ್ತಿದ್ದರು.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಕ್ರಿಮಿನಲ್ ಪಿತೂರಿಯ ಮೂಲಕ ಅಕ್ರಮ ಹಣದಿಂದ ಆಮ್ ಆದಿ ಪಕ್ಷ (ಎಎಪಿ) ಲಾಭ ಪಡೆದಿದೆ ಎಂದು ಸಿಬಿಐ ಆರೋಪಿಸಿದೆ. ಎಎಪಿಯ ರಾಷ್ಟ್ರೀಯ ಸಂಚಾಲಕ ಮತ್ತು ಒಟ್ಟಾರೆ ಉಸ್ತುವಾರಿಯೂ ಆಗಿರುವ ಅರವಿಂದ್ ಕೇಜ್ರಿವಾಲ್ ಮೊದಲಿನಿಂದಲೂ ನೀತಿ ನಿರೂಪಣೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.
ಹರ್ಯಾಣ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಂದಿದ್ದು, ಆಮ್ ಆದಿ ಪಕ್ಷಕ್ಕೆ ಹೆಚ್ಚಿನ ಬಲ ನೀಡಲಿದೆ. ಹರಿಯಾಣದಲ್ಲಿ ಆಪ್ ಪಕ್ಷವು, ಬಿಜೆಪಿ ಹಾಗೂ ಇಂಡಿಯಾ ಬ್ಲಾಕ್ನ ಪಾಲುದಾರರಾಗಿರುವ ಕಾಂಗ್ರೆಸ್ಗೆ ದೊಡ್ಡ ಸವಾಲು ನೀಡಿತ್ತಿದೆ.