Saturday, October 19, 2024
Homeಬೆಂಗಳೂರುಬಿಡುವಿಲ್ಲದೆ ಸುರಿದ ಮಳೆಗೆ ಬೆಂಗಳೂರು ಚಿತ್, ಎಲ್ಲೆಲ್ಲಿ ಏನೇನಾಯ್ತು..? ಇಲ್ಲಿದೆ ಡೀಟೈಲ್ಸ್

ಬಿಡುವಿಲ್ಲದೆ ಸುರಿದ ಮಳೆಗೆ ಬೆಂಗಳೂರು ಚಿತ್, ಎಲ್ಲೆಲ್ಲಿ ಏನೇನಾಯ್ತು..? ಇಲ್ಲಿದೆ ಡೀಟೈಲ್ಸ್

As heavy rain lashes Bengaluru, government issues work from home

ಬೆಂಗಳೂರು,ಅ.16– ನಗರದಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದಂತೆ ಸುರಿಯುತ್ತಿರುವ ಮಳೆಗೆ ಸಿಲಿಕಾನ್‌ ಸಿಟಿ ತತ್ತರಿಸಿ ಹೋಗಿದ್ದು, ಮಳೆಯ ಆವಾಂತರದಿಂದ ಪ್ರಾಣ ಕಳೆದುಕೊಳ್ಳಬೇಕಾದ ವ್ಯಕ್ತಿಯೊಬ್ಬ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಮ್ಯಾನ್‌ ಹೋಲ್‌ ಗೆ ಬಿದ್ದ ವ್ಯಕ್ತಿ:
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಹಲವಾರು ಪ್ರದೇಶಗಳಲ್ಲಿ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿಯುತ್ತಿವೆ. ಇಂದಿರಾನಗರದಲ್ಲಿ ಚರಂಡಿ ನೀರು ಉಕ್ಕಿ ಹರಿದ ಪರಿಣಾಮ ಮ್ಯಾನ್‌ಹೋಲ್‌ ತುಂಬಿ ಹೋಗಿದ್ದು ಗೊತ್ತಾಗದೆ ವ್ಯಕ್ತಿಯೊಬ್ಬ ಕಾಲಿಟ್ಟ ಪರಿಣಾಮ ಆತ ಮ್ಯಾನ್‌ಹೋಲ್‌ನಲ್ಲಿ ಮುಳುಗಿ ಹೋಗಬೇಕಿತ್ತು. ಆದರೆ, ಆತ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿ ಮನೆ ಸೇರಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಳೆಯಿಂದಾಗಿ ನಗರದ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಸಷ್ಟಿಯಾಗಿದೆ. ಮಾನ್ಯತಾ ಟೆಕ್‌ ಪಾರ್ಕ್‌ ರಸ್ತೆ ಸಂಪೂರ್ಣ ಜಲಾವತಗೊಂಡಿದೆ. ಆವರಣದ ಮುಂಭಾಗದಲ್ಲಿರುವ ನಿರ್ಮಾಣ ಹಂತದ ಬಹುಮಹಡಿ ಕಟ್ಟದಲ್ಲಿ ಮಣ್ಣು ಕುಸಿದ ಪರಿಣಾಮವಾಗಿ ಭಾರಿ ಗಾತ್ರದ ಮರವೊಂದು ಉರುಳಿಬಿದ್ದಿದೆ. ಮಳೆ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಇಲ್ಲದಿರುವ ಕಾರಣ ಮಾನ್ಯತಾ ಟೆಕ್‌ ಪಾರ್ಕ್‌ ಕೆರೆಯಾಗಿ ಪರಿವರ್ತನೆಯಾಗಿದೆ.

ಮಣ್ಣು ಕುಸಿತ; ಮಾನ್ಯತಾ ಟೆಕ್‌ ಪಾರ್ಕ್‌ ಆವರಣದಲ್ಲಿ ನಡೆಯುತ್ತಿರುವ ಬೃಹತ್‌ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಅಗೆದಿದ್ದ 6 0 ಅಡಿ ಹಳ್ಳಕೆ ನೀರು ಹರಿದ ಪರಿಣಾಮ ಎರಡು ಕಡೆಗಳಲ್ಲಿ ಮಣ್ಣು ಕುಸಿತಗೊಂಡಿದೆ. ಈ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

ವರ್ತೂರು ಹತ್ತಿರದ ದಿಶಾ ಅಪಾರ್ಟ್‌‍ಮೆಂಟ್‌ ಬೇಸೆಂಟ್‌ ಜಲಾವತಗೊಂಡು ಕೆರೆಯಂತಾಗಿದೆ ಮಾತ್ರವಲ್ಲ, ಕಾಡುಬೀಸನಹಳ್ಳಿ ಮತ್ತು ವರ್ತೂರು ನಡುವಿನ ರಸ್ತೆಯಲ್ಲಿ ಮೊಣಕಾಲು ಮುಳುಗುವಷ್ಟು ನೀರು ಹರಿಯುತ್ತಿದೆ.

ಇನ್ನು ಕೇಂದ್ರಿಯ ವಿಹಾರ್‌ ಅಪಾರ್ಟೆಂಟ್‌ ನಲ್ಲಿ ಸಮೀಪದ ಕೆರೆಯಿಂದ ನೀರು ನಿರಂತರವಾಗಿ ಹರಿದುಬರುತ್ತಿರುವುದರಿಂದ ಅಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವ ಎರಡು ಸಾವಿರಕ್ಕೂ ಹೆಚ್ಚು ಮಂದಿ ಜಲದಿಗ್ಬಂಧನಕ್ಕೊಳಗಾಗಿದ್ದಾರೆ. ಮಾತ್ರವಲ್ಲ, ಅಪಾರ್ಟ್‌ಮೆಂಟ್‌ನಲ್ಲಿ ನಿಲ್ಲಿಸಲಾಗಿದ್ದ 80 ಕಾರುಗಳು ಹಾಗೂ ನೂರಾರು ಬೈಕ್‌ಗಳು ಮುಳುಗಡೆಯಾಗಿವೆ.

ಅದೇ ರೀತಿ ಯಲಹಂಕದ ನಾರ್ತ್‌ ಹುಡ್‌ ವಿಲ್ಲಾ ಸಂಪೂರ್ಣ ಜಲಾವೃತವಾಗಿದೆ. ಸಧ್ಯ ನೀರು ತಗ್ಗಿದ್ದರೂ ಸಂಪ್‌ ಗಳಿಗೆ ನೀರು ನುಗ್ಗಿ ಕುಡಿಯೋ ನೀರಿಗೆ ಸಮಸ್ಯೆ ಎದುರಾಗಿದೆ. ಇದರ ಜೊತೆಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿರುವುದರಿಂದ ಕೆಲ ನಿವಾಸಿಗಳು ಮನೆ ಖಾಲಿ ಮಾಡಿ ಹೋಟೆಲ್‌ಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಮೆಟ್ರೋ ಟ್ರ್ಯಾಕ್‌ ಮೇಲೆ ಬಿದ್ದ ಮರ; ಮೆಟ್ರೋ ನೇರಳೆ ಮಾರ್ಗದ ಎಸ್‌‍ವಿ ರಸ್ತೆ ಮತ್ತು ಇಂದಿರಾನಗರದ ನಡುವಿನ ಹಳಿ ಮೇಲೆ ಮರ ಬಿದ್ದ ಪರಿಣಾಮ ಕೆಲ ಕಾಲ ಮೆಟ್ರೋ ರೈಲು ಸಂಚಾರಕ್ಕೆ ಅಡಚಣೆ ಎದುರಾಗಿತ್ತು. ಬೆಳಿಗ್ಗೆ 6.15ರ ಸುಮಾರಿಗೆ ಹಳಿ ಮೇಲೆ ಮರು ಬಿತ್ತು ಹೀಗಾಗಿ ಬೈಯಪ್ಪನ ಹಳ್ಳಿಯಿಂದ ವೈಟ್‌ಫೀಲ್‌್ಡ ಹಾಗೂ ಎಂಜಿ ರಸ್ತೆಯಿಂದ ಚಲ್ಲಘಟ್ಟ ನಡುವಿನ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಯಿತು. ತಕ್ಷಣ ಕಾರ್ಯಚರಣೆ ನಡೆಸಿದ ಸಿಬ್ಬಂದಿಗಳು ಮರ ತೆರವುಗೊಳಿಸಿದ ನಂತರ ಮೆಟ್ರೋ ರೈಲು ಸಂಚಾರ ಆರಂಭವಾಯಿತು.

ದ್ವೀಪವಾದ ಪ್ರದೇಶ;
ಇಂದಿರಾನಗರದ 17ನೇ ಡಿ ಕ್ರಾಸ್‌‍ ಜಲಾವತಗೊಂಡು ದ್ವೀಪದಂತೆ ಪರಿವರ್ತನೆಯಾಗಿದೆ. ಮೋರಿಯಿಂದ ಕೊಳಚೆ ನೀರು ಹರಿದು ಬರುತ್ತಿರುವುದರಿಂದ ನಾಲ್ಕೂ ದಿಕ್ಕಲ್ಲೂ ನೀರು ಆವರಿಸಿಕೊಂಡಿದೆ. ರಸ್ತೆ ಸಂಪೂರ್ಣ ಜಲಾವತಗೊಂಡಿದ್ದು ಕೆಲ ಮನೆಗಳಿಗೂ ನೀರು ನುಗ್ಗಿದೆ. ರಾತ್ರಿ ಇಡೀ ಮಳೆ ಬಂದಿದ್ದು ನೀರು ತೆರವು ಮಾಡಲು ಸ್ಥಳೀಯರು ಜಾಗರಣೆ ಮಾಡಿ ನೀರು ಹೊರ ಹಾಕಬೇಕಾಯಿತು.

17ನೇ ಡಿ ಕ್ರಾಸ್‌‍ ನಿವಾಸಿಗಳು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯ ಶಾಸಕರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. 15 ವರ್ಷದಿಂದ ಇದರ ಬಗ್ಗೆ ದೂರು ಕೊಟ್ಟರೂ ಏನು ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ರೈಲು ಸಂಚಾರ ತಾತ್ಕಾಲಿಕ ಸ್ಥಗಿತ:
ಭಾರಿ ಮಳೆಯಿಂದಾಗಿ ನಗರದಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಸಂಚರಿಸುವ ರೈಲು ಸಂಚಾರವನ್ನು ನಿನ್ನೆ ತಾಲ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅದರಂತೆ ಇಂದು ಮತ್ತಷ್ಟು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.

ಭಾರೀ ಮಳೆಯಿಂದಾಗಿ ಬೇಸಿನ್‌ ಬ್ರಿಡ್ಜ್‌‍ ಮತ್ತು ವ್ಯಸರ್ಪಡಿ ರೈಲು ನಿಲ್ದಾಣಗಳ ನಡುವಿನ ಸೇತುವೆ ನಂ.114 ರ ಮೇಲೆ ನೀರು ತುಂಬಿಕೊಂಡ ಪರಿಣಾಮ ಕರ್ನಾಟಕದಿಂದ ಹೊರಡುವ 10 ರೈಲುಗಳನ್ನು ಇಂದು ರದ್ದು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಮೈಸೂರು ಟು ಕೆಎಸ್‌‍ಆರ್‌ ಬೆಂಗಳೂರು, ಕೆಎಸ್‌‍ಆರ್‌ ಬೆಂಗಳೂರು ಟು ಮೈಸೂರು, ಮೈಸೂರು ಟು ಡಾ. ಎಂಜಿಆರ್‌ ಚೆನೈ ಕೇಂದ್ರ, ಡಾ. ಎಂಜಿಆರ್‌ ಚೆನೈ ಕೇಂದ್ರ ಟು ಕೆಎಸ್‌‍ಆರ್‌ ಟು ಬೆಂಗಳೂರು ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ.

ಮಳೆ ಹಾನಿ ಪ್ರದೇಶಗಳ ಭೇಟಿ ನೀಡಿ ಪರಿಶೀಲನೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಇಂದು ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದು ಯಲಹಂಕ ವಲಯದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಯುಕ್ತರು ಹೆಚ್ಚಿನ ಅನಾಹುತ ಸಂಭವಿಸಿರುವ ಕೇಂದ್ರೀಯ ವಿಹಾರ್‌ ಅಪಾರ್ಟೆಂಟ್‌ಗೂ ಭೇಟಿ ನೀಡಿದ್ದರು. ಅಲ್ಲಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸದ್ಯ ಇರುವ ನೀರುಗಾಲುವೆಯ ಪಕ್ಕ ಖಾಸಗಿ ಜಾಗದಲ್ಲಿ ಇಟಾಚಿ ಮೂಲಕ ಕಚ್ಚಾ ಡ್ರೈನ್‌ ಮಾಡಲಾಗುತ್ತಿದ್ದು, ಕೂಡಲೆ ಕೆಲಸ ಮುಗಿಸಿ ಕಚ್ಚಾ ಡ್ರೈನ್‌ ಮೂಲಕ ನೀರು ಹರಿದು ಹೊಗುವಂತೆ ಮಾಡಲಾಗುತ್ತಿದೆ.

ಎರಡು ಅಗ್ನಿ ಶಾಮಕ ವಾಹನಗಳಿಂದ ಪಂಪ್‌ ಮೂಲಕ ನೀರನ್ನು ಹೊರ ಹಾಕಲಾಗುತ್ತಿದೆ. ನಿನ್ನೆ ಸಂಜೆ ಸಹಾಯ ಕೇಂದ್ರ ತೆಗಯಲಾಗಿದ್ದು, ನಿವಾಸಿಗಳಿಗಳಿಗೆ ಕುಡಿಯುವ ನೀರು, ಹಾಲು, ಬ್ರೆಡ್‌, ಬಿಸ್ಕೆಟ್‌ ಇನ್ನಿತರೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಅಪಾರ್ಟೆಂಟ್‌ ನಿಂದ ನಿವಾಸಿಗಳು ಹೊರ ಬರಲು ಹಾಗೂ ಒಳ ಹೋಗಲು 2 ಟ್ರ್ಯಾಕ್ಟರ್‌ ಗಳ ವ್ಯವಸ್ಥೆ ಮಾಡಲಾಗಿದೆ.

ಯಲಹಂಕ ಕೆರೆಗೆ ಎರಡು ಕೋಡಿಗಳಿದ್ದು, ಉತ್ತರ, ದಕ್ಷಿಣದಲ್ಲಿ ಕೋಡಿಗಳು ಬರಲಿದೆ. ಕೇಂದ್ರೀಯ ವಿಹಾರ್‌ ಅಪಾರ್ಟೆಂಟ್‌ ಕಡೆಗೆ ಉತ್ತರ ಕೋಡಿ ಬರಲಿದ್ದು, ಅಲ್ಲಿ ನೀರಿನ ಹರಿವನ್ನು ಕಡಿಮೆ ಮಾಡಬೇಕಿದೆ. ಈ ಸಂಬಂಧ ದಕ್ಷಿಣದ ಕೋಡಿಯಲ್ಲಿ ನೀರಿನ್‌ ಹರಿವಿನ ಮಟ್ಟ ಹೆಚ್ಚಿಸಿದಾಗ ಉತ್ತರದ ಕೋಡಿಯಲ್ಲಿ ನೀರಿನ ಹರಿವಿನ ಮಟ್ಟ ಕಡಿಮೆಯಾಗಲಿದೆ. ಆದ್ದರಿಂದ ಕೂಡಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.

ರಮಣಶ್ರೀ ಕ್ಯಾಲಿಫೋರ್ನಿಯಾ ಲೇಔಟ್‌ ಪರಿಶೀಲನೆ:
ಲೇಔಟ್‌ ಗೆ ಬರುತ್ತಿರುವ ನೀರುನ್ನು ತಡೆಯುವ ಸಲುವಾಗಿ ಹಿಂದೆಯೇ ಡೈವರ್ಷನ್‌ ಚಾನಲ್‌ ಮಾಡಲಾಗಿದ್ದು, ನೀರಿನ ಮಟ್ಟವನ್ನು ಸಾಕಷ್ಟು ತಡೆಯಲಾಗಿದೆ. ಈ ಲೇಔಟ್‌ ನಲ್ಲಿ ನಿಂತಿರುವ ನೀರುನ್ನು ಕೂಡಲೆ ತೆರವುಗೊಳಿಸಲು ಸೂಚನೆ ನೀಡಿದ್ದೇನೆ ಎಂದರು.

ಮಳೆಯಾಗುತ್ತಿರುವ ಹಿನ್ನೆಲೆ ಮುಖ್ಯ ಆಯುಕ್ತರು ಇಂದು ಬೆಳಗ್ಗೆ ವರ್ಚುವಲ್‌ ಮೂಲಕ ಸಭೆ ನಡೆಸಿ, ಆಯಾ ವಲಯ ವ್ಯಾಪ್ತಿಯಲ್ಲಿ ಸಮಸ್ಯೆಯಾಗಿರುವ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಸ್ಥಳದಲ್ಲಾಗಿರುವ ಸಮಸ್ಯೆ ಬಗ್ಗೆ ಅವಲೋಕಿಸಿ ಆ ಸ್ಥಳದಲ್ಲಿ ಶಾಶ್ವತ ಪರಿಹಾರ ಹುಡುಕಿ, ಇರುವ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಲ್ಲಾ ವಲಯಗಳ ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ನಾಗರೀಕರಿಂದ ಬರುವ ದೂರುಗಳಿಗೆ ಕೂಡಲೆ ಸ್ಪಂದಿಸಲು ಸೂಚನೆ ನೀಡಿದರು.

RELATED ARTICLES

Latest News