Sunday, September 8, 2024
Homeರಾಜ್ಯನಾನು ಬದುಕಿರುವವರೆಗೂ ಹಾಸನ ಜಿಲ್ಲೆಯ ಜನರ ಜೊತೆಗಿರುತ್ತೇನೆ : ಎಚ್‌.ಡಿ.ರೇವಣ್ಣ

ನಾನು ಬದುಕಿರುವವರೆಗೂ ಹಾಸನ ಜಿಲ್ಲೆಯ ಜನರ ಜೊತೆಗಿರುತ್ತೇನೆ : ಎಚ್‌.ಡಿ.ರೇವಣ್ಣ

ಹಾಸನ, ಮೇ 22- ಹಾಸನ ಜಿಲ್ಲೆಯ ಜನರು ನನಗೆ ಸಹಕಾರ ನೀಡಿದ್ದು, ಆ ಸಹಕಾರಕ್ಕೆ ಋಣಿಯಾಗಿರುತ್ತೇನೆ. ನಮ್ಮ ಕಾರ್ಯಕರ್ತರ ಸಂಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದರು.

ಹೊಳೆನರಸೀಪುರದ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕುಟುಂಬದ ಸದಸ್ಯರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.

ನನಗೆ ನ್ಯಾಯಾಲಯದ ಬಗ್ಗೆ ಗೌರವವಿದೆ. ಹಾಗೆಯೇ ದೇವರ ಮೇಲೆಯೂ ನಂಬಿಕೆಯಿದೆ ಎಂದ ಅವರು, ಜಿಲ್ಲೆಯಲ್ಲಿನ ಯಾರೂ ಧೃತಿಗೆಡಬೇಕಾದ ಪ್ರಮೇಯ ಇಲ್ಲ. ರಾಜ್ಯದ, ಜಿಲ್ಲೆಯ ಹಾಗೂ ಹೊಳೆನರಸೀಪುರದ ಜನರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ 60 ವರ್ಷದಿಂದ ರಾಜಕೀಯ ಶಕ್ತಿ ಕೊಟ್ಟಿದ್ದಾರೆ ಎಂದು ಹೇಳಿದರು.

25 ವರ್ಷದಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಹೊಳೆನರಸೀಪುರ ಹಾಗೂ ಜಿಲ್ಲೆಯ ಜನರ ಜೊತೆ ನಾನು ಬದುಕಿರುವವರೆಗೂ ಇರುತ್ತೇನೆ ಹಾಗೆಯೇ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ನಮ್ಮ ಕುಟುಂಬ ಜನರೊಂದಿಗೆ ಇರುತ್ತದೆ. ಕುಮಾರಸ್ವಾಮಿ ಸೇರಿದಂತೆ ನಮ್ಮ ಕುಟುಂಬಕ್ಕೆ ಜನರು ಶಕ್ತಿ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಒತ್ತು ಕೊಟ್ಟಿದ್ದಾರೆ. ವಿಧಾನಪರಿಷತ್‌ನ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸುತ್ತಿರುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ನನಗೇನೂ ಗೊತ್ತಿಲ್ಲ :
ಸಂಸದ ಪ್ರಜ್ವಲ್‌ ರೇವಣ್ಣ ಅವರು ವಿದೇಶದಿಂದ ವಾಪಸ್‌‍ ಬರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೇವಣ್ಣ, ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ, ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದರು. ಲೈಂಗಿಕ ದೌರ್ಜನ್ಯದ ಆರೋಪ ಪ್ರಕರಣ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಮೇಲೆ ಪರಿಣಾಮ ಬೀರಬಹುದೇ ಎಂಬ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

RELATED ARTICLES

Latest News